ಸರಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಿಗೆ ಶಿಕ್ಷೆ

ಉಡುಪಿ: ಸರ್ಕಾರಿ ನೌಕರರಿಗೆ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿದ ಆರೋಪಿಗೆ ನಗರದ ಪ್ರಧಾನ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.

ಉಡುಪಿ ತಾಲೂಕು ಬೆಳ್ಳಂಪಳ್ಳಿ ಗ್ರಾಮದ ಕಂಬ್ಲ ಮಜಲು ಪುಣ್ವೂರು ಎಂಬಲ್ಲಿ ಮಹಿಳೆಗೆ ಕೊರೋನಾ ಪಾಸಿಟಿವ್ ಬಂದ ಕಾರಣ ಆಕೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ ಗಂಡ ಸುರೇಂದ್ರ ಎಂಬಾತನ ಗಂಟಲು ದ್ರವ ಪರೀಕ್ಷೆ ನಡೆಸಲು ಮನೆಗೆ ಬಂದ ಸರ್ಕಾರಿ ನೌಕರರಿಗೆ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವಮಾನ ಮಾಡಿ, ಜೀವ ಬೆದರಿಕೆ ಹಾಕಿ, ಅವರ ವಾಹನವನ್ನು ಹಾನಿಗೊಳಿಸಿ, ನಷ್ಟವನ್ನುಂಟುಮಾಡಿರುವ ಹಿನ್ನೆಲೆ, ಹಿರಿಯಡ್ಕ ಪೊಲೀಸ್ ಠಾಣೆಯ ನಿರೀಕ್ಷಕರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆದು, ಆರೋಪ ಸಾಬೀತಾದ ಹಿನ್ನೆಲೆ, ನಗರದ ಪ್ರಧಾನ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶೆ ದೀಪಾ ಅವರು, ಆರೋಪಿ ಸುರೇಂದ್ರನಿಗೆ ಭಾ.ದಂ.ಸಂ ಯಡಿ 9 ತಿಂಗಳು 10 ದಿನಗಳ ಶಿಕ್ಷೆ ಹಾಗೂ 2000 ರೂ. ದಂಡ ವಿಧಿಸಿ, ತೀರ್ಪು ನೀಡಿರುತ್ತಾರೆ.

ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕಿ ಜಯಂತಿ ಕೆ ವಾದ ಮಂಡಿಸಿರುತ್ತಾರೆ.