ಉಡುಪಿ: ಸಮಾಜದ ಪ್ರತಿಯೊಬ್ಬರು ಹಣಕಾಸಿನ ವ್ಯವಹಾರದ ಬಗ್ಗೆ ಅಥವಾ ಹಣ ಬಳಕೆಯ ವಿಧಗಳ ಬಗ್ಗೆ ಸ್ವತ: ತಿಳುವಳಿಕೆ ಹೊಂದುವುದು ಅತಿ ಅಗತ್ಯ ಎಂದು ಭಾರತೀಯ ರಿಸರ್ವ್ ಬ್ಯಾಂಕಿನ ಬೆಂಗಳೂರು ಪ್ರಾದೇಶಿಕ ಮುಖ್ಯ ಮಹಾ ಪ್ರಬಂಧಕ ಪಿ.ಎನ್. ರಘನಾಥ ಅಭಿಪ್ರಾಯ ಪಟ್ಟರು.
ಅವರು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI), ಹಣಕಾಸು ಸೇರ್ಪಡೆ ಮತ್ತು ಅಭಿವೃದ್ಧಿ ಇಲಾಖೆ, ಬೆಂಗಳೂರು, ಲೀಡ್ ಡಿಸ್ಟ್ರಿಕ್ಟ್ ಆಫೀಸ್, ಕೆನರಾ ಬ್ಯಾಂಕ್, ಉಡುಪಿ ಇದರ ಜಂಟಿಯಾಗಿ ಆಯೋಜಿಸಿದ ಕ್ಷೇತ್ರ ಮಟ್ಟದ ಆರ್ಥಿಕ ಸಾಕ್ಷರತೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತೀಯ ರಿಸರ್ವ್ ಬ್ಯಾಂಕಿನ ಬೆಂಗಳೂರು ಪ್ರಾದೇಶಿಕ ಕಛೇರಿಯ ಹಣಕಾಸು ಸೇರ್ಪಡೆ ಮತ್ತು ಅಭಿವೃದ್ಧಿ ವಿಭಾಗದ ಮಹಾ ಪ್ರಬಂಧಕಿ ಸುನಂದ ಬಾತ್ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತೀಯ ರಿಸರ್ವ್ ಬ್ಯಾಂಕ್ ವತಿಯಿಂದ ಜನ ಸಾಮಾನ್ಯರು ಮತ್ತು ಸ್ವ ಸಹಾಯ ಸಂಘದ ಸದಸ್ಯರು ಹಣಕಾಸಿನ ವ್ಯವಹಾರದಲ್ಲಿ ಸಾಕ್ಷರತೆಯನ್ನು ಪಡೆದುಕೊಳ್ಳಬೇಕು ಮತ್ತು ಕೆವೈಸಿ ನೀಡುವಲ್ಲಿ ತೊಂದರೆಯಾದರೆ ಭಾರತೀಯ ರಿಸರ್ವ್ ಬ್ಯಾಂಕಿನ ಗಮನಕ್ಕೆ ತಂದಲ್ಲಿ ಸಹಾಯ ಮಾಡಲಾಗುವುದು ಅಥವಾ ಬ್ಯಾಂಕ್ ಗಳ ಸೇವೆಯಲ್ಲಿ ತೊಂದರೆ ಆದರೆ ತಿಳಿಸಬಹುದು ಎಂದರು.
ಮಣಿಪಾಲ ಕೆನರಾ ಬ್ಯಾಂಕಿನ ಮಾಹಾ ಪ್ರಬಂಧಕ ಪಂಡಿತ್ ಎಂ.ಜಿ ಮಾತನಾಡಿ, ಸಾಮಾಜಿಕ ಭದ್ರತಾ ಯೋಜನೆಗಳ ಬಗ್ಗೆ ವಿವರಗಳನ್ನು ಪಡೆಯಿರಿ ಮತ್ತು ಇತರರಿಗೆ ತಿಳಿಸಿ, ಸಣ್ಣ ಉದ್ಯಮಗಳನ್ನು ಪ್ರಾರಂಭಿಸಲು ಬ್ಯಾಂಕ್ ಸಹಾಯ ಪಡೆದುಕೊಳ್ಳಿ ಎಂದರು.
ನರ್ಬಾಡ್ ನ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕಿ ಸಂಗೀತಾ ಕರ್ತಾ ಮಾತನಾಡಿ ಸ್ವ ಸಹಾಯ ಸಂಘದ ಸದಸ್ಯರು ಆರ್ಥಿಕ ಸಾಕ್ಷರತೆ ಪಡೆದರೆ ಉತ್ತಮವಾದ ಹಣಕಾಸಿನ ವ್ಯವಹಾರ ನಡೆಸಲು ಸಾಧ್ಯ ಎಂದರು.
ಉಡುಪಿ ಜಿಲ್ಲಾ ಪಂಚಾಯತ್ ನ ಎನ್ ಆರ್ ಎಲ್ ಎಂ ಯೋಜನಾ ನಿರ್ದೇಶಕ ನವೀನ ಕುಮಾರ್ ಹೆಚ್. ಡಿ ಮಾತನಾಡಿ ಜಿಲ್ಲೆಯಲ್ಲಿ ಎನ್. ಆರ್. ಎಲ್. ಎಂ. ಮುಖಾಂತರ ಹೆಚ್ಚಿನ ಆರ್ಥಿಕ ಸಾಕ್ಷರತೆ ಕಾರ್ಯ ನಡೆಯುತ್ತಿದೆ ಪ್ರತಿಯೊಂದು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಾಹಿತಿ ನೀಡಲು ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಿಗೆ ತರಬೇತಿ ನೀಡಲಾಗಿದೆ ಎಂದರು.
ಎಲ್ ಆರ್ ಎಲ್ ಎಂ ಜಿಲ್ಲಾ ಸಂಯೋಜಕಿ ನವ್ಯ ಸಂಘದ ಆರ್ಥಿಕ ವ್ಯವಹಾರದ ಬಗ್ಗೆ ಮಾಹಿತಿ ನೀಡಿದರು. ಭಾರತೀಯ ರಿಸರ್ವ್ ಬ್ಯಾಂಕಿನ ಬೆಂಗಳೂರಿನ ಮ್ಯಾನೇಜರ್ ಅಬ್ದುಲ್ ರಜಾಕ್ ಎನ್ ಅವರು ನೋಟಗಳ ಸುರಕ್ಷತೆ ಬಗ್ಗೆ ಮಾಹಿತಿ ನೀಡಿದರು. ಭಾರತೀಯ ರಿಸರ್ವ್ ಬ್ಯಾಂಕಿನ ಬೆಂಗಳೂರಿನ ಪ್ರಶಾಂತ ಸಿ.ಬಿ ಅವರು ಡಿಜಿಟಲ್ ಬ್ಯಾಂಕಿನ ವ್ಯವಹಾರ ಮತ್ತು ಸುರಕ್ಷತೆ ಬಗ್ಗೆ ಮಾಹಿತಿ ನೀಡಿದರು. ಮಾಲತಿ ಎಸ್ ನಾಯ್ಕೆ ಮತ್ತು ವೀಣಾ ಶಾನುಬೋಗ ಅವರು ಸಂಘದ ವತಿಯಿಂದ ನಡೆಸುವ ಸ್ವ-ಉದ್ಯೋಗ ಅನುಭವ ಹಂಚಿಕೊಂಡರು.
ಕಾರ್ಯಕ್ರಮದ ಕೊನೆಯಲ್ಲಿ ವಿವಿಧ ಬ್ಯಾಂಕಿನ ಅಧಿಕಾರಿಗಳ ಜೊತೆ ಸಂವಾದ ನಡೆಸಲಾಯಿತು
ಉಡುಪಿ ಅಮೂಲ್ಯ ಆರ್ಥಿಕ ಸಾಕ್ಷರತೆಯ ಸಂಯೋಜಕಿ ವೀರಾ ಉಪಸ್ಥಿತರಿದ್ದರು. ವಿವಿಧ ತಾಲೂಕಿನ ಸ್ವ ಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು.
ಭಾರತೀಯ ರಿಸರ್ವ್ ಬ್ಯಾಂಕಿನ ವ್ಯವಸ್ಥಾಪಕ ತನು ನಂಜಪ್ಪ ಸ್ವಾಗತಿಸಿದರು. ಲೀಡ್ ಬ್ಯಾಂಕಿನ ಎಲ್ ಡಿ ಎಂ ಪಿ.ಎಂ.ಪಿಂಜಾರ್ ವಂದಿಸಿದರು. ರುಡ್ ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಕೆ.ಕರುಣಾಕರ ಜೈನ್ ಮತ್ತು ಎಲ್ ಆರ್ ಎಲ್ ಎಂ ಜಿಲ್ಲಾ ಸಂಯೋಜಕಿ ನವ್ಯ ನಿರೂಪಿಸಿದರು.