ನವದೆಹಲಿ: ಛತ್ತೀಸ್‌ಗಢದ 21 ಅಭ್ಯರ್ಥಿಗಳ ಪಟ್ಟಿ ಹಾಗೂ ಮಧ್ಯಪ್ರದೇಶದ 39 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. ಮೊದಲ ಹಂತದಲ್ಲೇ ಉಭಯ ರಾಜ್ಯಗಳಲ್ಲೂ ತಲಾ ಐವರು ಮಹಿಳೆಯರಿಗೆ ಟಿಕೆಟ್ ನೀಡಲಾಗಿದೆ.
ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಗೂ ಮುನ್ನವೇ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು (ಗುರುವಾರ) ಬಿಡುಗಡೆ ಮಾಡಿದೆ.ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢದ ಮುಂಬರುವ ವಿಧಾನಸಭೆ ಚುನಾವಣೆಗೆ ಕ್ರಮವಾಗಿ 39 ಹಾಗೂ 21 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬುಧವಾರ ಸಂಜೆ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆದಿತ್ತು. ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಕೇಂದ್ರ ಸಚಿವರಾದ ಅಮಿತ್ ಶಾ ಹಾಗೂ ರಾಜನಾಥ್ ಸಿಂಗ್ ಸೇರಿದಂತೆ ಹಿರಿಯ ನಾಯಕರು ಭಾಗವಹಿಸಿದ್ದರು. ಇದರ ಮರುದಿನವೇ ಎರಡು ಪ್ರಮುಖ ರಾಜ್ಯಗಳ ಮೊದಲ ಪಟ್ಟಿಯನ್ನು ಪಕ್ಷ ಬಿಡುಗಡೆಗೊಳಿಸಿದೆ.
ಉಳಿದಂತೆ, ಭುಲನ್ ಸಿಂಗ್ ಮರಾವಿ ( ಪ್ರೇಮ್‌ನಗರ), ಲಕ್ಷ್ಮಿ ರಾಜ್‌ವಾಡೆ (ಭಟಗಾಂವ್), ಶಕುಂತಲಾ ಸಿಂಗ್ ಪೋರ್ಥೆ (ಪ್ರತಾಪುರ್ – ಎಸ್‌ಟಿ), ಸರ್ಲಾ ಕೊಸಾರಿಯಾ (ಸರೈಪಾಲಿ – ಎಸ್‌ಸಿ), ಅಲ್ಕಾ ಚಂದ್ರಾಕರ್ (ಖಲ್ಲಾರಿ), ಗೀತಾ ಘಾಸಿ ಸಾಹು (ಖುಜ್ಜಿ) ಹಾಗೂ ಮಣಿರಾಮ್ ಕಶ್ಯಪ್ (ಬಸ್ತಾರ್ – ಎಸ್‌ಟಿ) ಅವರಿಗೆ ಬಿಜೆಪಿ ಟಿಕೆಟ್ ಘೋಷಿಸಿದೆ.ಹಾಲಿ ಸಿಎಂ ವಿರುದ್ಧ ಎಂಪಿಗೆ ಟಿಕೆಟ್: ಛತ್ತೀಸ್‌ಗಢದ ಹಾಲಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಭೂಪೇಶ್ ಬಾಘೆಲ್ ವಿರುದ್ಧ ಹಾಲಿ ಸಂಸದ ವಿಜಯ್ ಬಘೇಲ್ ಅವರನ್ನು ಕಮಲ ಪಾಳಯ ಕಣಕ್ಕಿಳಿಸಿದೆ. ಭೂಪೇಶ್ ಬಾಘೆಲ್ ಪಟಾನ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಇಲ್ಲಿ ದುರ್ಗ್ ಲೋಕಸಭೆ ಕ್ಷೇತ್ರ ಸಂಸದರಾದ ವಿಜಯ್ ಬಘೇಲ್ ಅವರಿಗೆ ಟಿಕೆಟ್ ನೀಡಲಾಗಿದೆ.
ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೆ, ಛತ್ತೀಸ್ಗಢದಲ್ಲಿ ಕಾಂಗ್ರೆಸ್ ಸರ್ಕಾರವಿದೆ. 2018ರಲ್ಲಿ ಛತ್ತೀಸ್‌ಗಢ ವಿಧಾನಸಭೆಯ 90 ಸ್ಥಾನಗಳ ಪೈಕಿ ಬಿಜೆಪಿ 15ರಲ್ಲಿ ಮಾತ್ರ ಗೆದ್ದಿತ್ತು. ಕಾಂಗ್ರೆಸ್ 68 ಸ್ಥಾನಗಳೊಂದಿಗೆ ಅಧಿಕಾರಕ್ಕೆ ಬಂದಿತ್ತು. 230 ಸದಸ್ಯಬಲದ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿ 109 ಸ್ಥಾನಗಳನ್ನು ಗೆದ್ದಿತ್ತು. 114 ಸ್ಥಾನಗಳನ್ನು ಪಡೆದಿದ್ದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಆದರೆ, ನಂತರ ಕಾಂಗ್ರೆಸ್ನ ಹಲವು ಶಾಸಕರು ಬಿಜೆಪಿ ಸೇರಿದ್ದರಿಂದ ಕಾಂಗ್ರೆಸ್ ಸರ್ಕಾರ ಬಿದ್ದು ಹೋಗಿತ್ತು. ಹೀಗಾಗಿ ಬಿಜೆಪಿ ಅಧಿಕಾರದಲ್ಲಿದೆ.
ಉಭಯ ರಾಜ್ಯಗಳೊಂದಿಗೆ ರಾಜಸ್ಥಾನ, ತೆಲಂಗಾಣ ಮತ್ತು ಮಿಜೋರಾಂನಲ್ಲೂ ಈ ವರ್ಷಾಂತ್ಯದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. 2024ರ ಲೋಕಸಭೆ ಚುನಾವಣೆಗೂ ಮುನ್ನ ಪಂಚ ರಾಜ್ಯಗಳ ಚುನಾವಣೆ ಬರುವುದರಿಂದ ಕಾಂಗ್ರೆಸ್ ಹಾಗೂ ಬಿಜೆಪಿ ಗಂಭೀರವಾಗಿ ಪರಿಗಣಿಸಿವೆ. ಇದಕ್ಕೂ ಮೇಲಾಗಿ, ಕೇಂದ್ರದ ಆಡಳಿತಾರೂಢ ಬಿಜೆಪಿ ಎರಡು ರಾಜ್ಯಗಳ ಚುನಾವಣೆಗೆ ದಿನಾಂಕ ಘೋಷಣೆಗೆ ಮೊದಲೇ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿರುವುದು ಚುನಾವಣೆಗಳ ಮಹತ್ವವನ್ನು ಒತ್ತಿ ಹೇಳುವಂತಿದೆ.ಮಧ್ಯಪ್ರದೇಶದ ಅಭ್ಯರ್ಥಿಗಳ ಮಾಹಿತಿ: ಮಧ್ಯಪ್ರದೇಶದಲ್ಲಿ 39 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗಿದೆ. ಸರಳಾ ವಿಜೇಂದ್ರ ರಾವತ್ (ಸಬಲ್‌ಗಢ), ಪ್ರಿಯಾಂಕಾ ಮೀನಾ (ಚಚೌರಾ), ಲಲಿತಾ ಯಾದವ್ (ಛತ್ತರ್‌ಪುರ), ಅಂಚಲ್ ಸೋಂಕರ್ (ಜಬಲ್‌ಪುರ ಪುರ್ಬಾ – ಎಸ್‌ಸಿ), ನಿರ್ಮಲಾ ಭುರಿಯಾ (ಪೆಟ್ಲವಾಡ್), ಬಾನು ಭುರಿಯಾ (ಜಬುವಾ – ಎಸ್‌ಟಿ), ಅಲೋಕ್ ಶರ್ಮಾ (ಭೋಪಾಲ್ ಉತ್ತರ) ಹಾಗೂ ಧ್ರುವ ನಾರಾಯಣ್ ಸಿಂಗ್ (ಭೋಪಾಲ್ ಮಧ್ಯ) ಅವರಿಗೆ ಟಿಕೆಟ್ ಕೊಡಲಾಗಿದೆ.