ಗಡಿಜಿಲ್ಲೆ ಚಾಮರಾಜನಗರದಲ್ಲಿ ಬಾಗಿಲು ಮುಚ್ಚುವ ಹಂತ ತಲುಪಿದ 13 ಸರ್ಕಾರಿ ಶಾಲೆಗಳು

ಚಾಮರಾಜನಗರ: 2023-24ನೇ ಶೈಕ್ಷಣಿಕ ಸಾಲಿನಲ್ಲಿ ಮೂಲಸೌಕರ್ಯ ಕೊರತೆ, ಶಿಕ್ಷಕರ ಕೊರತೆ, ಶಿಥಿಲ ಶಾಲಾ ಕಟ್ಟಡಗಳಿಂದ ಆತಂಕಗೊಂಡು ಮಕ್ಕಳ ಶೂನ್ಯ ದಾಖಲಾತಿಯಿಂದಾಗಿ ಜಿಲ್ಲೆಯಲ್ಲಿ ಒಟ್ಟು 13 ಸರ್ಕಾರಿ ಶಾಲೆಗಳಿಗೆ ಬೀಗ ಹಾಕಲಾಗಿದೆ.ಮೂಲಸೌಕರ್ಯದ ಕೊರತೆಯಿಂದಾಗಿ ಗಡಿಜಿಲ್ಲೆ ಚಾಮರಾಜನಗರದಲ್ಲಿ ಹಲವು ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚುವ ಹಂತ ತಲುಪಿವೆ. ಈ ಪೈಕಿ ಒಂದು ಉರ್ದು ಮಾಧ್ಯಮದ ಶಾಲೆಯೂ ಸೇರಿದೆ.ಅಗತ್ಯ ಮೂಲಸೌಕರ್ಯ, ಶಿಕ್ಷಕರ ಕೊರತೆ, ಶಿಥಿಲ ಶಾಲಾ ಕಟ್ಟಡಗಳೇ ಚಾಮರಾಜನಗರ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ ಉಂಟಾಗಲು ಕಾರಣವಾಗಿವೆ.

ಕೋವಿಡ್ ವೇಳೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ದಿಢೀರ್ ಏರಿಕೆ ಆಗಿತ್ತು. ಆದರೆ ಪ್ರಸಕ್ತ ವರ್ಷದಲ್ಲಿ ಮೂಲಸೌಕರ್ಯ ಅವ್ಯವಸ್ಥೆ ಹಾಗೂ ಶಿಕ್ಷಕರ ಕೊರತೆಯಿಂದ ಮಕ್ಕಳು ಖಾಸಗಿ ಶಾಲೆಗಳತ್ತ ಮುಖ ಮಾಡಿದ್ದಾರೆ. ಖಾಸಗಿ ಶಾಲೆಗಳಲ್ಲಿ ಸಿಗುವ ಶಿಕ್ಷಣದಿಂದ ಪೋಷಕರು ಪ್ರಭಾವಿತರಾಗಿದ್ದು, ಮಕ್ಕಳನ್ನು ದುಬಾರಿ ಶುಲ್ಕ ನೀಡಿಯಾದರೂ ದಾಖಲಾತಿ ಮಾಡಿದ್ದಾರೆ.

ಶಿಕ್ಷಣ ಇಲಾಖೆ ಉಪನಿರ್ದೇಶಕರ ಪ್ರತಿಕ್ರಿಯೆ: ಚಾಮರಾಜನಗರ ಜಿಲ್ಲೆಯಲ್ಲಿ 738 ಹಿರಿಯ ಪ್ರಾಥಮಿಕ ಸರ್ಕಾರಿ ಶಾಲೆಗಳಿವೆ. ಇದರಲ್ಲಿ 13 ಶಾಲೆಗಳಲ್ಲಿ ಶೂನ್ಯ ದಾಖಲಾತಿ ಇದ್ದು, ಜೂನ್ ತಿಂಗಳಲ್ಲಿ ಶುರು ಮಾಡಲು​ ಸಾಧ್ಯವಾಗಿಲ್ಲ. ಈಗಲೂ ಅವಕಾಶ ಇರುವುದರಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬಿಆರ್​ಸಿ, ಸಿಆರ್​ಪಿಯವರು ಸಭೆ ಮಾಡಿ, 13 ಶಾಲೆಗಳಲ್ಲಿ ಎಲ್ಲಿ ಪುನಶ್ಚೇತನ ಮಾಡಲು ಸಾಧ್ಯವಿದೆಯೋ ಅದನ್ನು ಹದಿನೈದು ದಿನದೊಳಗೆ ಪೂರಕ ರೂಪುರೇಷೆ, ಮಾಹಿತಿ ಕೊಡಬೇಕೆಂದು ಸೂಚಿಸಿದ್ದೇನೆ. 13 ಶಾಲೆಗಳಿಗೆ ಸಂಬಂಧಿಸಿದಂತೆ ಬಿಇಒಗಳ ಜೊತೆಗೆ ಚರ್ಚಿಸಿದಾಗ, ಎರಡು ಶಾಲೆಗಳನ್ನು ಮಾತ್ರ ಪ್ರಾರಂಭಿಸುವ ಮಾಹಿತಿ ಇದೆ ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರ ರಾಜೇ ಅರಸ್ ತಿಳಿಸಿದರು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮಕ್ಕಳ ದಾಖಲಾತಿಯಲ್ಲಿ ಎರಡು ಸಾವಿರ ಕಡಿಮೆ ಆಗಿರುವ ಮಾಹಿತಿ ಸಿಕ್ಕಿದೆ ಎಂದು ಅವರು ಹೇಳಿದರು.

ತಮಿಳುನಾಡು ಹಾಗೂ ಕೇರಳ ಎರಡೂ ಗಡಿ ಹಂಚಿಕೊಂಡಿರುವ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳಿಗೆ ಸಿಗಬೇಕಾದ ಉತ್ತೇಜನ ಸಿಗದಿರುವುದರಿಂದ ಈ ಪರಿಸ್ಥಿತಿ ಉಂಟಾಗಿದೆ. ರಾಜ್ಯ ಸರ್ಕಾರ ಕನ್ನಡ ಪ್ರಾಥಮಿಕ ಶಾಲೆಗಳತ್ತ ಮಕ್ಕಳನ್ನು ಸೆಳೆಯಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆದರೆ, ಶಾಲೆಗಳಲ್ಲಿ ಮೂಲಸೌಕರ್ಯ, ಶಿಕ್ಷಕರ ಕೊರತೆ ಹಾಗೂ ಉತ್ತಮ ಶಿಕ್ಷಣ ದೊರಕುತ್ತಿಲ್ಲ ಎಂದು ಜಿಲ್ಲೆಯ ಜನರ ಆರೋಪ.

ಕೋವಿಡ್ ಲಾಕ್‌ಡೌನ್ ವೇಳೆ ಖಾಸಗಿ ಶಾಲೆಗಳಿಗೆ ಹೆಚ್ಚು ಶುಲ್ಕ ಭರಿಸಲಾಗದೇ ಖಾಸಗಿ ಶಾಲೆಗಳಿಂದ ದಾಖಲೆ ಮಟ್ಟದಲ್ಲಿ ಮಕ್ಕಳು ಸರ್ಕಾರಿ ಶಾಲೆಗಳಿಗೆ ಸೇರಿದ್ದರು. ಈಗ ಪರಿಸ್ಥಿತಿ ವ್ಯತಿರಿಕ್ತ. ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಕೊರತೆ, ಸಮರ್ಪಕ ಶಿಕ್ಷಣ ಸಿಗದಿದ್ದಕ್ಕೆ ಬೇಸತ್ತು ಜಿಲ್ಲೆಯ 13 ಶಾಲೆಗಳಲ್ಲಿ ಶೂನ್ಯ ದಾಖಲಾತಿಗೆ ಬಂದು ತಲುಪಿವೆ. ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗಳು ಶೂನ್ಯ ದಾಖಲಾತಿಯತ್ತ ಸಾಗುತ್ತಿರುವುದು ಚಾಮರಾಜನಗರ ಜಿಲ್ಲೆಯಲ್ಲಿ ಕಳವಳಕ್ಕೆ ಕಾರಣವಾಗಿದೆ.