ಹ್ಯೂಮನ್ ರೈಟ್ಸ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

ಉಡುಪಿ: ಹ್ಯೂಮನ್ ರೈಟ್ಸ್ ಫೆಡರೇಷನ್ ಆಫ್ ಇಂಡಿಯಾ ಉಡುಪಿ ಜಿಲ್ಲೆ ಹಾಗೂ ಅಂಗನವಾಡಿ ಕೇಂದ್ರ ಮನ್ನೋಳಿಗುಜ್ಜಿ ದೊಡ್ಡಣಗುಡ್ಡೆ ಉಡುಪಿ ಸಹಯೋಗದಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯಿತು.

ಸಂಸ್ಥೆಯ ಅಧ್ಯಕ್ಷೆ ಅಡ್ವಕೇಟ್ ಪ್ರೀತಿ. ವೈ ಕುಂದಾಪುರ, ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಹಿರಿಯರು ತಮ್ಮ ಜೀವನವನ್ನು ಪಣಕ್ಕಿಟ್ಟು ಸ್ವಾತಂತ್ರ್ಯ ಪಡೆದು ನಮಗೆಲ್ಲ ನೆಮ್ಮದಿಯ ಬದುಕನ್ನು ಕಲ್ಪಿಸಿಕೊಟ್ಟಿದ್ದಾರೆ ಅವರನ್ನು ಗೌರವಿಸುವುದರ ಜೊತೆಗೆ ನಾವೆಲ್ಲ ಪ್ರೀತಿಯಿಂದ ಬದುಕಬೇಕು. ದೇಶದ ಗಡಿಯನ್ನು ಸೈನಿಕರು ಎಚ್ಚರಿಕೆಯಿಂದ ಕಾಯುತ್ತಿರುವುದರಿಂದ ನಾವೆಲ್ಲ ನೆಮ್ಮದಿಯಿಂದ ಇದ್ದೇವೆ ಎಂದರು.

ಸಂಸ್ಥೆಯ ನಿರ್ದೇಶಕ ಉದಯ ನಾಯ್ಕ್ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ದೇಶವನ್ನು ಡಚ್ಚರು, ಪೋರ್ಚುಗೀಸರು ನಂತರ ಬ್ರಿಟಿಷರು ವಶಪಡಿಸಿಕೊಂಡು ಕೊಳ್ಳೆಹೊಡೆದರು. ಅನೇಕ ಸ್ವಾತಂತ್ರ್ಯ ಹೋರಾಟಗಾರರು, ನಮ್ಮ ಹಿರಿಯರು ದೇಶಕ್ಕೋಸ್ಕರ ಬಲಿದಾನ ಮಾಡಿದ್ದಾರೆ. ಅವರ ಹೋರಾಟದಿಂದ ನಮ್ಮ ದೇಶಕ್ಕೆ ದಾಸ್ಯದಿಂದ ಬಿಡುಗಡೆ ಸಿಕ್ಕಿತು. ಸಹ ಬಾಳ್ವೆಯಿಂದ ಬದುಕುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ದೇಶದ ಗಡಿಯುದ್ದಕ್ಕೂ ವೀರ ಸೈನಿಕರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ದೇಶ ರಕ್ಷಣೆ ಮಾಡುವುದರಿಂದ ಇಂದು ನಾವು ನೆಮ್ಮದಿಯ ಜೀವನ ಪಡೆಯುತ್ತೇವೆ ಎನ್ನುವುದು ಮರೆಯಬಾರದು. ಎಲ್ಲರೂ ನಿಜವಾದ ದೇಶಪ್ರೇಮಿಯಾಗಿ ದೇಶವನ್ನು ಗೌರವಿಸೋಣ . ಭಾರತಾಂಬೆಯ ಮಕ್ಕಳು ಸಹೋದರರಂತೆ ಇರಬೇಕು ಎಂದರು.

ಸಂಸ್ಥೆಯ ಕಾರ್ಯದರ್ಶಿ ಚಂದ್ರ ಅಮೀನ್, ನಿರ್ದೇಶಕರುಗಳಾದ ಪ್ರಭಾಕರ್ ದೇವಾಡಿಗ, ಮಿಥುನ್ ಕುಮಾರ್, ರವಿಚಂದ್ರ ನಾಯರ್, ಬಿ ಎನ್ ಯೂಸುಫ್, ವಿದ್ಯಾರ್ಥಿಗಳಾದ ಯಾಸಿನ, ನರೇಶ್ ಹಾಗೂ ಅಂಗನವಾಡಿ ಸಹಾಯಕಿ ಸಾವಿತ್ರಿ, ಮಕ್ಕಳು ಹಾಗೂ ಪೋಷಕರು ಸ್ಥಳೀಯರು ಉಪಸ್ಥಿತರಿದ್ದರು.

ಅಂಗನವಾಡಿ ಕೇಂದ್ರದ ಶಿಕ್ಷಕಿ ಶರ್ವಾಣಿ ಕಾರ್ಯಕ್ರಮ ನಿರೂಪಿಸಿದರು.