ಕಲಬುರಗಿ: ”ಪೊಲೀಸ್ ಠಾಣೆಯಲ್ಲಿ ನೊಂದವರಿಗೆ ಸರಿಯಾಗಿ ಸ್ಪಂದನೆ ಸಿಗೋದಿಲ್ಲ. ಪೊಲೀಸರು ಸರಿಯಾದ ರೀತಿ ಸ್ಪಂದಿಸುತ್ತಿಲ್ಲ, ದೂರು ಸ್ವೀಕರಿಸುತ್ತಿಲ್ಲ, ದೂರು ಸ್ವೀಕರಿಸಲು ವಿಳಂಬ ಮಾಡ್ತಾರೆ ಅಥವಾ ದೂರು ನೀಡಲು ಹೋದಾಗ ರಾಜಿ ಮಾಡಿಕೊಳ್ಳುವಂತೆ ಒತ್ತಡ ಹಾಕ್ತಾರೆ. ಇಂತಹ ಆರೋಪಗಳು ಆಗಾಗ ಕೇಳಿ ಬರುತ್ತವೆ. ಪೊಲೀಸ್ ಠಾಣೆಗೆ ಹೋಗಲು ಇಂದಿಗೂ ಅನೇಕ ಮಂದಿ ಹಿಂಜರಿಯುತ್ತಾರೆ. ಇಂತಹ ಹಲವು ಸಮಸ್ಯೆಗಳಿಗೆ ಆಸ್ಪದ ನೀಡದಂತೆ ಪೊಲೀಸ್ ವ್ಯವಸ್ಥೆಯನ್ನು ಮತ್ತಷ್ಟು ಜನಸ್ನೇಹಿಯಾಗಿಸಲು ಸರ್ಕಾರ ಮತ್ತೊಂದು ಹೆಜ್ಜೆ ಇಟ್ಟಿದೆ. ಪೊಲೀಸ್ ಫೀಡ್ ಬ್ಯಾಕ್ ಆಯಪ್ ಕ್ಯೂಆರ್ ಕೋಡ್ ತಂತ್ರಾಂಶ ಜಾರಿಗೆ ತರುವ ಮೂಲಕ ಇಲಾಖೆಯನ್ನು ಇನ್ನಷ್ಟು ಜನಸ್ನೇಹಿಯಾಗಿಸಲಾಗುತ್ತಿದೆ.
ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿದರುಕಲಬುರಗಿ ನಗರದ ಪೊಲೀಸ್ ಭವನದಲ್ಲಿ ಜನಸ್ನೇಹಿ ಅಭಿಯಾನ ಅಂಗವಾಗಿ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕರೇ ಮುಕ್ತವಾಗಿ ಪ್ರತಿಕ್ರಿಯಿಸುವ “ಪೊಲೀಸ್ ಫೀಡ್ ಬ್ಯಾಕ್ ಆಯಪ್” ಕ್ಯೂಆರ್ ಕೋಡ್ ಲೋಕಾರ್ಪಣೆ ಮಾಡಲಾಗಿದೆ..
”ಸಮಸ್ಯೆಗಳ ಪರಿಹಾರಕ್ಕಾಗಿ, ನ್ಯಾಯಕ್ಕಾಗಿ ದೂರು ಸಲ್ಲಿಸಲು ಹಾಗೂ ವ್ಯಾಜ್ಯ ಪರಿಹಾರಕ್ಕಾಗಿ ಪೊಲೀಸ್ ಠಾಣೆಗೆ ಬರುವ ಸಾರ್ವಜನಿಕರ ಜೊತೆಗೆ ಜನಸ್ನೇಹಿಯಾಗಿ ವರ್ತಿಸುವುದು ಪೊಲೀಸರ ಕರ್ತವ್ಯವಾಗಿದೆ. ಜಿಲ್ಲೆಯಲ್ಲಿ ಪೊಲೀಸ್ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಣೆ ಮಾಡುವ ಉದ್ದೇಶದಿಂದ “ಜನಸ್ನೇಹಿ ಪೊಲೀಸ್ ಅಭಿಯಾನ” ಆರಂಭಿಸಲಾಗಿದೆ” ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
”ಪೊಲೀಸರ ನಡೆ ನುಡಿಯಲ್ಲಿ ಪಾರದರ್ಶಕತೆ, ಕಟ್ಟುನಿಟ್ಟಿನ ಕರ್ತವ್ಯ ಪ್ರಜ್ಞೆ, ವರ್ತನೆ ಸರಿ ಇದ್ದಾಗ ಮಾತ್ರ ಜನಸಾಮಾನ್ಯರು ನಂಬುತ್ತಾರೆ. ಪೊಲೀಸ್ ವ್ಯವಸ್ಥೆಯನ್ನು ಜನ ಸ್ನೇಹಿಯಾಗಿಸುವತ್ತ ಮಹತ್ವಾಕಾಂಕ್ಷಿ ಹೆಜ್ಜೆ ಇರಿಸಲಾಗಿದೆ. ಸಮಸ್ಯೆಗಳ ಪರಿಹಾರಕ್ಕಾಗಿ ಠಾಣೆಗೆ ಬರುವ ಜನಸಾಮಾನ್ಯರು ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳ ವರ್ತನೆ ಕುರಿತಂತೆ ಕ್ಯೂಆರ್ ಕೋಡ್ ಮೂಲಕ ದಾಖಲಿಸಬಹುದಾಗಿದೆ. ಕ್ಯೂಆರ್ ಕೋಡ್ ಅನ್ನು ಕಲಬುರಗಿ ನಗರದ ಮತ್ತು ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಕಡ್ಡಾಯವಾಗಿ ಸಾರ್ವಜನಿಕರಿಗೆ ಕಾಣುವಂತೆ ಪ್ರವೇಶ ದ್ವಾರದಲ್ಲಿಯೇ ಪೋಸ್ಟರ್ ಅಂಟಿಸಬೇಕು. ಅಲ್ಲದೇ ಜಿಲ್ಲೆಯ ಎಲ್ಲಾ ಸಾರ್ವಜನಿಕ ಪ್ರದೇಶಗಳಲ್ಲಿ ಕೂಡ ಇಲಾಖೆ ವತಿಯಿಂದ ಲಗತ್ತಿಸಬೇಕು” ಎಂದು ಪೊಲೀಸರಿಗೆ ಸೂಚಿಸಿದ್ದಾರೆ.
ಸಚಿವರಿಂದ ಕ್ಯೂಆರ್ ಕೋಡ್ ಬಿಡುಗಡೆ: ಕಲಬುರಗಿ ನಗರದ ಪೊಲೀಸ್ ಭವನದಲ್ಲಿ ಜನಸ್ನೇಹಿ ಅಭಿಯಾನ ಅಂಗವಾಗಿ ಪೊಲೀಸ್ ಠಾಣೆಯಲ್ಲಿ ಪೊಲೀಸರು ಸಾರ್ವಜನಿಕರೊಂದಿಗೆ ಸ್ಪಂದಿಸುವ ಕುರಿತು ಸಾರ್ವಜನಿಕರೇ ಮುಕ್ತವಾಗಿ ಪ್ರತಿಕ್ರಿಯೆಸುವ “ಪೊಲೀಸ್ ಫೀಡ್ ಬ್ಯಾಕ್ ಆಪ್” ಕ್ಯೂಆರ್ ಕೋಡ್ ಲೋಕಾರ್ಪಣೆ ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ನೂತನ ತಂತ್ರಾಂಶದ ಕ್ಯೂಆರ್ ಕೋಡ್ ಬಿಡುಗಡೆ ಮಾಡಿದ್ದಾರೆ.
ಒತ್ತಡದಲ್ಲಿ ಕರ್ತವ್ಯ ನಿರ್ವಹಿಸಬೇಕಾಗುತ್ತದೆ: ”ಕರ್ತವ್ಯ ನಿರ್ವಹಣೆಯಲ್ಲಿ ಕೆಲ ಪೊಲೀಸರು ಅನಾರೋಗ್ಯಕ್ಕೂ ತುತ್ತಾಗಿದ್ದಾರೆ. ಒಂದೆಡೆ ಕರ್ತವ್ಯ, ಮತ್ತೊಂದೆಡೆ ವಿಐಪಿಗಳ ಭದ್ರತೆಯ ನಡುವೆಯೂ ಕೆಲಸ ಮಾಡಬೇಕಾಗುತ್ತದೆ. ನಿಮ್ಮ ಸಮಸ್ಯೆಗಳ ಪರಿಹಾರಕ್ಕೆ ನಿಮ್ಮ ಜೊತೆಗೆ ಸರ್ಕಾರವಿರುತ್ತದೆ ಎಂದು ಸಚಿವರು ಭರವಸೆ ನೀಡಿದರು. ಬೆಂಗಳೂರಿನಲ್ಲಿ ಈ ತರಹದ ಕೋಡ್ ಅವಳವಡಿಕೆ ಆಗಿದೆ. ಇದೀಗ ಕಲಬುರಗಿಯಲ್ಲಿ ಈ ಕೋಡ್ ಅಳವಡಿಸಲಾಗುತ್ತಿದೆ. ಯೋಜನೆ ಸಾಕಾರಕ್ಕೆ ಕಾರಣೀಕರ್ತರಾದ ಗೃಹ ಸಚಿವ ಡಾ. ಜಿ. ಪರಮೇಶ್ವರ ಹಾಗೂ ಡಿ.ಜಿ.ಪಿ. ಅವರಿಗೆ ಧನ್ಯವಾದ ತಿಳಿಸುವೆ” ಎಂದು ಸಚಿವರು, ಇದೇ ರೀತಿಯ ಕ್ಯೂಆರ್ ಕೋಡ್ ಅನ್ನು ಸಚಿವರ ಕಚೇರಿಯಲ್ಲಿ ಕೂಡಾ ಅಳವಡಿಸಲಾಗುವುದು” ಎಂದರು.
”ಜನಸಾಮಾನ್ಯರೊಂದಿಗೆ ಪೊಲೀಸರು ಉತ್ತಮ ಬಾಂಧವ್ಯ ಹೊಂದಿದಾಗ ಮಾತ್ರ ಸಮಾಜದಲ್ಲಿ ಏನು ನಡೆಯುತ್ತಿದೆ ಎನ್ನುವ ಮಾಹಿತಿ ಸಿಗುತ್ತದೆ” ಎಂದ ಸಚಿವರು, ಜನರ ನಡುವೆ ನಡೆಯುವ ಜಗಳ ಮನಸ್ತಾಪ ಮತ್ತು ಕೋಮುಗಲಭೆಯನ್ನು ತಡೆಯಲು ಗುಪ್ತಚರ ಇಲಾಖೆಗೆ ಕ್ಯೂಆರ್ ಕೋಡ್ ವ್ಯವಸ್ಥೆ ಸಹಕಾರಿಯಾಗಲಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮತ್ತಷ್ಟು ಜನಸ್ನೇಹಿಯಾಗುವ ಅನಿವಾರ್ಯತೆ ಇದೆ” ಎಂದು ಒತ್ತಿ ಹೇಳಿದರು.