ಮಂಗಳೂರು: ಸಾಹಿತ್ಯ ಅಕಾಡೆಮಿ ನವದೆಹಲಿ ಮತ್ತು ಐಸಿವೈಎಂ ನಿರ್ಕಾಣ್ ಘಟಕ ವತಿಯಿಂದ ನಿರ್ಕಾಣ್ ಸಂತ ತೋಮಸರ ಶಾಲೆಯ ಸಭಾಂಗಣದಲ್ಲಿ ಭಾನುವಾರ, ಆಗಸ್ಟ್ 13 ರಂದು ಗ್ರಾಮ ಲೋಕ ಕಾರ್ಯಕ್ರಮ ನಡೆಯಿತು.
ರಾಷ್ಟ್ರಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಸಾಹಿತ್ಯ ಅಕಾಡೆಮಿ ಸಲಹಾ ಮಂಡಳಿ ಸದಸ್ಯ ಎಚ್ಚೆಮ್, ಪೆರ್ನಾಲ್ ಸಾಹಿತ್ಯ ಆಕಾಡೆಮಿ ನಡೆದು ಬಂದ ದಾರಿ, ಕಾರ್ಯಚಟುವಟಿಕೆಗಳು ಹಾಗೂ ಪ್ರಸ್ತುತ ಕಾರ್ಯಕ್ರಮಗಳ ಬಗ್ಗೆ ವಿಸ್ತ್ರತ ಮಾಹಿತಿ ನೀಡಿ, ಕಾರ್ಯಕ್ರಮದ ಅಧ್ಯಕ್ಷ ಜಿಯೋ ಅಗ್ರಾರ್, ಕವಿ ಸುರೇಶ್ ಬಾಳಿಗ, ಕತೆಗಾರ ಪಂಚು ಬಂಟ್ವಾಳ್, ಜಾನಪದ ಕಲಾವಿದೆ ರೋಸಲಿನ್ ಮೊರಾಸ್, ಕವಿ ಕಿರಣ್ ನಿರ್ಕಾಣ್ ಇವರನ್ನು ಪರಿಚಯಿಸಿದರು.
ಕಾರ್ಯಕ್ರಮದ ಅಧ್ಯಕ್ಷ ಜಿಯೋ ಅಗ್ರಾರ್ ಪ್ರಸ್ತಾವಿಕವಾಗಿ ಮಾತನಾಡಿ ಸಾಹಿತ್ಯದ ಅಗತ್ಯ, ನಾವು ಬದುಕುವ ಪರಿಸರವು ಸಾಹಿತ್ಯದ ಮೇಲೆ ಬೀರುವ ಪರಿಣಾಮ ಹಾಗೂ ಇದರಿಂದ ಮನುಷ್ಯ ಸಂಬಂಧಗಳಲ್ಲಾಗುವ ಬದಲಾವಣೆಯ ಬಗ್ಗೆ ತಮ್ಮ ಅಭಿಪ್ರಾಯ ಮಂಡಿಸಿ, ತಾವು ರಚಿಸಿದ ಕೃತಿಗಳನ್ನು ಪುಸ್ತಕ ರೂಪದಲ್ಲಿ ಕಾಪಿಡುವ ಬಗ್ಗೆ ಕವಿ ಹಾಗೂ ಸಾಹಿತಿಗಳಿಗೆ ಕಿವಿಮಾತು ಹೇಳಿದರು.
ಕವಿ ಬಂಟ್ವಾಳ ಸುರೇಶ್ ಬಾಳಿಗ ಅವರು ಪೋಸ್ಟರ್ ಹಚ್ಚುವ ಮನುಷ್ಯ, ಕವಿತೆಯ ಹುಡುಕಾಟ ಮತ್ತು ಗುರುತು ಕಾರ್ಡು ಮೂರು ಕವಿತೆಗಳನ್ನು ಪ್ರಸ್ತುತಪಡಿಸಿದರು. ಪಂಚು ಬಂಟ್ವಾಳ ’ಕೊಬಾಚೊ ಗಾದೊ’ ಎಂಬ ಸಣ್ಣಕತೆ ವಾಚಿಸಿದರು. ರೋಸಲಿನ್ ಮತ್ತು ವೀಣಾ ಮೋರಾಸ್ ಶಿಶುಗೀತೆಗಳನ್ನು ಹಾಡಿದರು. ಕವಿ ಕಿರಣ್ ನಿರ್ಕಾಣ್ ಅಮ್ಮ, ಬೀಡಿ ಸುಪ್ ಮತ್ತು ಗೃಹಲಕ್ಷ್ಮಿ ಕವಿತೆಗಳನ್ನು ಓದಿದರು.
ಅಧ್ಯಕ್ಷ ಜಿಯೋ ಆಗ್ರಾರ್ ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಿದ ಕವಿತೆ, ಸಣ್ಣಕತೆ ಮತ್ತು ಶಿಶುಗೀತೆಗಳ ಟಿಪ್ಪಣಿಯ ಜೊತೆಗೆ ತಮ್ಮ ಊಟದ ಕೋಣೆ ಕವಿತೆ ಪ್ರಸ್ತುತ ಪಡಿಸಿ ಸಮಾರೋಪಗೈದರು.
ಸಾಹಿತ್ಯ ಅಕಾಡೆಮಿ ಭಾಷಾ ಸಲಹಾ ಮಂಡಳಿಯ ಸದಸ್ಯ ಸ್ಟ್ಯಾನಿ ಬೇಳ ಉಪಸ್ಥಿತರಿದ್ದರು.
ಐಸಿವೈಎಂ ನಿರ್ಕಾಣ್ ಘಟಕದ ಅಧ್ಯಕ್ಷೆ ಸ್ವೀಡಲ್ ರೊಡ್ರಿಗಸ್ ವಂದಿಸಿದರು. ಭಾಗವಹಿಸಿದ ಅತಿಥಿಗಳಿಗೆ ನೆನಪಿನ ಕಾಣಿಕೆಯಾಗಿ ಕೊಂಕಣಿ ಪುಸ್ತಕಗಳನ್ನು ನೀಡಿ ಸಾಹಿತ್ಯ ಅಕಾಡೆಮಿ ಕಾರ್ಯಕಾರಿ ಮಂಡಳದ ಸದಸ್ಯ ಕವಿ ಮೆಲ್ವಿನ್ ರೊಡ್ರಿಗಸ್ ಗೌರವಿಸಿದರು.
ನಿರ್ಕಾಣ್ ಮತ್ತು ಸುತ್ತಮುತ್ತಲಿನ ಗ್ರಾಮಗಳಿಂದ ಸುಮಾರು ನೂರಕ್ಕೂ ಅಧಿಕ ಮಂದಿ ಸಾಹಿತ್ಯಾಸಕ್ತರು, ಗ್ರಾಮೀಣ ಪ್ರದೇಶಗಳಿಗಾಗಿಯೇ ಮೀಸಲಿರುವ ಸಾಹಿತ್ಯ ಅಕಾಡೆಮಿಯ ಗ್ರಾಮಲೋಕ ವಿಶೇಷ ಕಾರ್ಯಕ್ರಮವನ್ನು ಆಸ್ವಾದಿಸಿದರು.