ಕೊಡವೂರು: ಹಳೆ ವಿದ್ಯಾರ್ಥಿ ಸಂಘ, ಯುವಕ ಸಂಘ (ರಿ.) ಕೊಡವೂರು ಮತ್ತು ಜಿಲ್ಲಾ ಆರೋಗ್ಯ ಇಲಾಖೆಯ ಜಂಟಿ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವು ಆ12 ರಂದು ವಿಪ್ರ ಶ್ರೀ ಸಭಾಭವನದಲ್ಲಿ ನಡೆಯಿತು.
ನಗರಸಭಾ ಸದಸ್ಯ ವಿಜಯ್ ಕೊಡವೂರು ಮಾತನಾಡಿ, ವಾರ್ಡಿನಲ್ಲಿ ಇದುವರೆಗೆ 380ಕ್ಕೂ ಹೆಚ್ಚಿನ ಜನರಿಗೆ ಕನ್ನಡಕ ವಿತರಣೆ, 18 ಜನರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ, 28 ಜನರಿಗೆ ಪೊರೆ ತೆಗೆಯುವ ಕಾರ್ಯವು ಸಂಘ – ಸಂಸ್ಥೆಗಳ ಸಹಕಾರದೊಂದಿಗೆ ನಡೆದಿದೆ.
ಶಿಬಿರದ ಮೂಲಕ ಆರೋಗ್ಯ ತಪಾಸಣೆ ನಡೆಸಿದಲ್ಲಿ ಎಲ್ಲರೂ ಆರೋಗ್ಯದಿಂದ ಇರಲು ಸಾಧ್ಯ. ಕೇವಲ ಹಣದಿಂದ ಸಾಧನೆ ಮಾಡಲು ಅಸಾಧ್ಯ. ಆರೋಗ್ಯ ಇದ್ದಲ್ಲಿ ನಾವು ಯಾವುದೇ ರೀತಿಯ ಸಾಧನೆಯನ್ನು ಮಾಡಬಹುದು.
ಕೊಡವೂರಿನಲ್ಲಿ ಗುಜರಿ ಸಂಗ್ರಹಿಸಿ ಈ ರೀತಿಯ ಅನೇಕ ಕಾರ್ಯಕ್ರಮವನ್ನು ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಜನರು ಮನೆಯಲ್ಲಿರುವ ಪ್ಲಾಸ್ಟಿಕ್, ಕಬ್ಬಿಣ ಗುಜರಿ ಸಾಮಗ್ರಿ ಉಚಿತವಾಗಿ ನೀಡಿದರೆ ಅನೇಕ ಕಾರ್ಯಗಳನ್ನು ಮಾಡಬಹುದು.
ಮುಂದಿನ ದಿನಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ಕೊಟ್ಟಂತೆ ಟಿ.ಬಿ ಮುಕ್ತ ದೇಶ ಮಾಡುವ ನಿಟ್ಟಿನಲ್ಲಿ, ಉಡುಪಿ ನಗರಸಭೆ ವ್ಯಾಪ್ತಿಯ ಟಿ.ಬಿಯಲ್ಲಿ ಬಳಲುತ್ತಿರುವರನ್ನು ಗುರುತಿಸಿ, 6 ತಿಂಗಳ ಆಹಾರ ಕಿಟ್ ನೀಡುವ ಯೋಚನೆ ಮಾಡಿದ್ದು ಜನರ ಸಹಕಾರ ಬೇಕೆಂದು ಮನವಿ ಮಾಡಿದರು.