ಭಾರತದ, ವಿಶೇಷವಾಗಿ ದಕ್ಷಿಣ ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರು ಸದ್ಯ ಆಧ್ಯಾತ್ಮಿಕ ಪ್ರವಾಸದಲ್ಲಿದ್ದಾರೆ.ತಮ್ಮ ಬಹುನಿರೀಕ್ಷಿತ ಜೈಲರ್ ಸಿನಿಮಾದ ಬಿಡುಗಡೆಗೂ ಮುನ್ನ ಹಿಮಾಲಯ ಪ್ರವಾಸ ಕೈಗೊಂಡರು. ಇದೀಗ ಪ್ರಸಿದ್ಧ ಪುಣ್ಯಕ್ಷೇತ್ರ ಬದ್ರಿನಾಥ್ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ.ಇಂದು ಸೂಪರ್ ಸ್ಟಾರ್ ರಜನಿಕಾಂತ್ ಅವರು ಬದ್ರಿನಾಥ್ ದೇವಸ್ಥಾನಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದ್ದಾರೆ.
ಬದ್ರಿನಾಥ್ ದೇವಸ್ಥಾನಕ್ಕೆ ಭೇಟಿ: ಇಂದು ಬೆಳಗ್ಗೆ ಬದ್ರಿನಾಥ್ ದೇವಸ್ಥಾನಕ್ಕೆ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸಿದರು. ಸೂಪರ್ ಸ್ಟಾರ್ ಅವರನ್ನು ಬದ್ರಿನಾಥ್ – ಕೇದಾರನಾಥ ದೇವಾಲಯ ಸಮಿತಿ ಸದಸ್ಯರು ಆತ್ಮೀಯವಾಗಿ ಸ್ವಾಗತಿಸಿದರು. ದೇವರ ದರ್ಶನ ಪಡೆದ ನಟ ದೇವಾಲಯದ ಸೇವೆಗಳಲ್ಲಿ ಭಾಗಿಯಾದರು.
ಬಳಿಕ ಸಮಿತಿ ಸದಸ್ಯರು ಪ್ರತಿಭಾನ್ವಿತ ನಟನನ್ನು ಸನ್ಮಾನಿಸಿ, ತೀರ್ಥ ಪ್ರಸಾದ ನೀಡಿದರು. ನಂತರ ದೇವಾಲಯದ ಆವರಣದಲ್ಲಿದ್ದು ಅಭಿಮಾನಿಗಳೊಂದಿಗೆ ಕೆಲ ಹೊತ್ತು ಮಾತುಕತೆ ನಡೆಸಿದರು. ಅಭಿಮಾನಿಗಳಿಗೆ ಸೆಲ್ಫಿ ಕೂಡ ಕೊಟ್ಟರು. ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ತಮ್ಮ ಮೆಚ್ಚಿನ ನಟನನ್ನು ನೋಡಲು ದೇವಸ್ಥಾನದ ಆವರಣದಲ್ಲಿ ಬಂದು ಸೇರಿದ್ದರು.
ಜೈಲರ್ ಯಶಸ್ಸಿನಲ್ಲಿ ರಜನಿ: ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರುವ ಸೂಪರ್ ಸ್ಟಾರ್ ತಲೈವಾ ರಜನಿಕಾಂತ್ ಸದ್ಯ ಜೈಲರ್ ಯಶಸ್ಸಿನಲ್ಲಿ ತೇಲುತ್ತಿದ್ದಾರೆ. ಎರಡು ವರ್ಷಗಳ ಬ್ರೇಕ್ ಬಳಿಕ ಬಂದ ಸಿನಿಮಾ ಸದ್ದು ಮಾಡುವಲ್ಲಿ ಯಶಸ್ಸು ಕಂಡಿದೆ. ನೆಲ್ಸನ್ ದಿಲೀಪ್ ಕುಮಾರ್ ಅವರ ಜೈಲರ್ ಪ್ರೇಕ್ಷಕರನ್ನು ತಲುಪಿ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ.
ಜೈಲರ್ ಕಲೆಕ್ಷನ್: ಆಗಸ್ಟ್ 10 ರಂದು ಜೈಲರ್ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. ಮೊದಲ ದಿನವೇ ಸಿನಿಮಾ ಭರ್ಜರಿ ಸದ್ದು ಮಾಡಿ, ಪಾಸಿಟಿವ್ ಟಾಕ್ ಸ್ಪ್ರೆಡ್ ಆಗಿದೆ. ಮೊದಲ ವಾರಾಂತ್ಯದಲ್ಲೇ ಸಿನಿಮಾ 100 ಕೋಟಿ ರೂ. ಗಳಿಸುವಲ್ಲಿ ಯಶಸ್ವಿ ಆಗಿದೆ. ಜೈಲರ್ ತೆರೆಕಂಡ ಮೊದಲ ದಿನ 48.35 ಕೋಟಿ ರೂ. ಸಂಪಾದಿಸಿತು. ಎರಡನೇ ದಿನ 25.75 ಕೋಟಿ ರೂ. ಮತ್ತು ಮೂರನೇ ದಿನ 45 ಕೋಟಿ ರೂ. ಕಲೆಕ್ಷನ್ ಮಾಡಿತು. ಇಂದು ಭಾನುವಾರ ಆದ ಹಿನ್ನೆಲೆ ಕಲೆಕ್ಷನ್ ಏರುವ ಸಾಧ್ಯತೆ ಹೆಚ್ಚಿದೆ.ದಯಾನಂದ ಗುರೂಜಿ ಆಶ್ರಮಕ್ಕೆ ಭೇಟಿ: ಶನಿವಾರದಂದು ನಟ ಹಿಮಾಲಯ ಪ್ರವಾಸದ ಭಾಗವಾಗಿ ರಿಷಿಕೇಶದಲ್ಲಿರುವ ದಯಾನಂದ ಗುರೂಜಿ ಆಶ್ರಮಕ್ಕೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲೂ ಅಲ್ಲಿ ನೆರೆದಿದ್ದವರೊಂದಿಗೆ ಹಲವು ವಿಚಾರಗಳನ್ನು ಹಂಚಿಕೊಂಡರು. ಹಲವು ನಿರೀಕ್ಷೆಗಳೊಂದಿಗೆ ಜೈಲರ್ ಸಿನಿಮಾ ತೆರೆಕಂಡಿದೆ. ಚಿಂತೆ ಮಾಡುವ ಅಗತ್ಯವಿಲ್ಲ. ಸಿನಿಮಾ ಖಂಡಿತ ಯಶಸ್ಸು ಕಾಣಲಿದೆ ಎಂದು ಸ್ವಾಮೀಜಿ ತಿಳಿಸಿದ್ದಾರೆಂದು ರಜನಿಕಾಂತ್ ಹೇಳಿದರು.