ಮಂಗಳೂರು: ಕವಿತಾ ಟ್ರಸ್ಟ್ ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದಲ್ಲಿ `ಸಾದ್ ಸೈಮಾಚೊ’ (ಪ್ರಕೃತಿಯ ನಾದಗಳು) ಎಂಬ ಕಾವ್ಯ ಮತ್ತು ಕಥಾ ಪ್ರಸ್ತುತಿಯ ವಿಭಿನ್ನ ಪ್ರಯೋಗವನ್ನು ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಪ್ರತಿಷ್ಠಾನದ ಸಹಕಾರದಲ್ಲಿ ಆಗಸ್ಟ್ 06 ರಂದು ಆಯೋಜಿಸಲಾಯಿತು. ಗೋವಾದ ಢಾಯಿ ಆಖಾರ್ (ಎರಡುವರೆ ಅಕ್ಷರ) ತಂಡವು ಪ್ರಕೃತಿಯ ದನಿಗಳಿಗೆ ಸಂಬಂಧಪಟ್ಟ ಹಿಂದಿ ಮತ್ತು ಕೊಂಕಣಿ ಸಾಹಿತ್ಯವನ್ನು ಪ್ರಸ್ತುತ ಪಡಿಸಿತು.
ಕೇದಾರ್‌ನಾಥ್ ಸಿಂಗ್ ಇವರ ’ಬಾಘ್’, ಸಲೀಲ್ ಚತುರ್ವೇದಿಯ ’ಕಹಾಂ ಗಯೀ ಓ ನದೀ ಕೀ ಧಾರ್’ ಮತ್ತು ಜಾರ್ಕಂಡಿನ ಜಾಸಿಂತಾ ಕೆರ್ಕಟ್ಟಾ ಇವರ ’ನದೀ, ಪಹಾಡ್ ಔರ್ ಬಜಾರ್’ – ಹಿಂದಿ ಕವಿತೆಗಳನ್ನು ಹಾಗೂ ಮಮತಾ ವೆರ್ಲೇಕರ್ ಇವರ ’ಗುಪೀತ್’, ’ಫೊಂಡ್ಕುಲಾಂ’ ಮತ್ತು ಪ್ರಕಾಶ್ ಪರಿಯೆಂಕಾರ್ ಇವರ ’ಪಾಣಿ ಆತಾಂ ದೆಂವ್ತಾ’ ಹಾಗೂ ’ಹಿ ರಾನ್ ಕಾಣಿ’ ಕವಿತೆಗಳನ್ನು ಪ್ರಸ್ತುತಪಡಿಸಿದರು.
ಜ್ಞಾನಪೀಠ ಪುರಸ್ಕಾರ ವಿಜೇತ ಸಾಹಿತಿ ದಾಮೋದರ ಮಾವ್ಜೊ ಇವರ ಕತೆ ’ಭುರ್ಗಿಂ ಮುಗೆಲಿಂ ತಿಂ’ ವಿಷಯ ಮತ್ತು ಪ್ರಸ್ತುತಿಯ ಕಾರಣಕ್ಕಾಗಿ ನೆರೆದ ಕೇಳುಗರ ಕಣ್ಣಲ್ಲಿ ನೀರೂರಿಸಿತು. ಡಾ. ರಮಿತಾ ಗುರವ್, ಡಾ. ಮನೀಷಾ ಖೊರಾಟೆ ಮತ್ತು ಮಮತಾ ವೆರ್ಲೆಕಾರ್ ಸುಂದರವಾಗಿ ಇವನ್ನು ವಾಚಿಸಿದರು. ಆರ್ತಿ ದಾಸ್ ಮತ್ತು ನಿಯತಿ ಪತ್ರೆ ಸಾಹಿತ್ಯ ಮತ್ತು ಸಾಹಿತಿಗಳ ಹಿನ್ನಲೆ ವಿವರಿಸಿದರು.
ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರು ಬಾಳಿಗಾ ಢಾಯಿ ಆಖಾರ್ ಸದಸ್ಯರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಕವಿತಾ ಟ್ರಸ್ಟ್ ಟ್ರಸ್ಟಿಗಳಾದ ವಿಲಿಯಮ್ ಪಾಯ್ಸ್ ಸ್ವಾಗತಿಸಿ, ವಿಕ್ಟರ್ ಮತಾಯಸ್ ವಂದಿಸಿದರು.
ನಂತರ ಸಾಹಿತ್ಯ ಅಕಾಡೆಮಿ ನವದೆಹಲಿ, ಕವಿತಾ ಟ್ರಸ್ಟ್ ಸಹಕಾರದಲ್ಲಿ ಆಯೋಜಿಸಿದ `ಲೋಕ: ವಿವಿಧ ಸ್ವರಗಳು’ ಎಂಬ ಜಾನಪದ ಕಾರ್ಯಕ್ರಮ ನಡೆಯಿತು. ನವ ಸಿದ್ದಿ ಕಲಾ ತಂಡ ಮೈನಳ್ಳಿ ಇವರಿಂದ ಡಮಾಮ್, ಫುಗ್ಡಿ, ಜಾಕಯ್ ಮತ್ತು ಶಿಗ್ಮೊ ಆಟಗಳ ಪ್ರಸ್ತುತಿ ನಡೆಯಿತು. ಕಲಾವಿದ ಸುನೀಲ್ ಸಿದ್ದಿ ಈ ಪ್ರಕಾರಗಳ ವಿವರಣೆ ನೀಡಿದರು.
ಅಕಾಡೆಮಿಯ ಕೊಂಕಣಿ ಸಲಹಾ ಸಮಿತಿಯ ಅಧ್ಯಕ್ಷ ಮೆಲ್ವಿನ್ ರೊಡ್ರಿಗಸ್ ಕಲಾವಿದರನ್ನು ಗೌರವಿಸಿದರು. ಸದಸ್ಯ ಎಚ್ಚೆಮ್ ಪೆರ್ನಾಳ್ ಸ್ವಾಗತಿಸಿದರು. ಇನ್ನೋರ್ವ ಸದಸ್ಯ ಸ್ಟ್ಯಾನಿ ಬೇಳ ವಂದಿಸಿದರು.