ಬಾಕ್ಸ್ ಆಫೀಸಿನಲ್ಲಿ ಸ್ಟಾರ್ ನಟರ ಮುಖಾಮುಖಿ: ಸನ್ನಿ ಡಿಯೋಲ್ ನ ಗದರ್- 2 ವರ್ಸಸ್ ಅಕ್ಷಯ್ ಕುಮಾರ್ ನ ಓಎಂಜಿ- 2 ಇಂದು ಬೆಳ್ಳಿತೆರೆಗೆ

ಬಹುನಿರೀಕ್ಷಿತ ಚಲನಚಿತ್ರಗಳಾದ ಗದರ್- 2 ಮತ್ತು ಓಎಂಜಿ- 2 ದೊಡ್ಡ ಪರದೆಯ ಮೇಲೆ ಇಂದು ಮುಖಾಮುಖಿಯಾಗಿದ್ದು, ಬಾಲಿವುಡ್ ನ ಇಬ್ಬರು ದೊಡ್ಡ ತಾರೆಗಳಾದ ಸನ್ನಿ ಡಿಯೋಲ್ ಮತ್ತು ಅಕ್ಷಯ್ ಕುಮಾರ್ ಎದುರು ಬದುರಾಗಿದ್ದಾರೆ.

ವಿಶೇಷವೆಂದರೆ, ಎರಡೂ ಚಲನಚಿತ್ರಗಳ ಮೊದಲನೆ ಭಾಗವು ಅದಾಗಲೇ ಹಲವು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದು, ಗಲ್ಲಾ ಪೆಟ್ಟಿಗೆಯನ್ನು ಕೊಳ್ಳೆಹೊಡೆದಿದ್ದವು. ಇದೀಗ ಎರಡೂ ಚಿತ್ರಗಳ ಎರಡನೆ ಭಾಗಗಳು ಮುಖಾಮುಖಿಯಾಗಿದ್ದು ಗಲ್ಲಾಪೆಟ್ಟಿಗೆಯ ರಾಜ ಯಾರಾಗುತ್ತಾರೆ ಎನ್ನುವುದನ್ನು ಕಾಲವೆ ಹೇಳಬೇಕು.

ಭಾರತ-ಪಾಕಿಸ್ತಾನ ವಿಭಜನೆಯ ಕಥಾ ಹಂದರದಲ್ಲಿ ಹದಿನೇಳು ವರ್ಷಗಳ ಹಿಂದೆ ಮೂಡಿಬಂದಿದ್ದ ಗದರ್-1, ಸನ್ನಿ ಡಿಯೋ ಮತ್ತು ಅಮಿಶಾ ಪಟೇಲ್ ಮುಖ್ಯ ತಾರಾಗಣದಲ್ಲಿ ಇಡೀ ದೇಶದಲ್ಲಿ ಮೆಚ್ಚುಗೆ ಪಡೆದಿತ್ತು. ಅತ್ತ ಹನ್ನೊಂದು ವರ್ಷ ಹಿಂದೆ ಬಿಡುಗಡೆಯಾಗಿದ್ದ ಓಹ್ ಮೈ ಗಾಡ್-1 ಭಾಗವೂ ಅಕ್ಷಯ್ ಕುಮಾರ್ ಮತ್ತು ಪರೇಶ್ ರಾವಲ್ ಮುಖ್ಯ ಭೂಮಿಕೆಯಲ್ಲಿದ್ದು ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

ಈ ಬಾರಿ ವೀಕ್ಷಕ ಯಾರಿಗೆ ಮೆಚ್ಚುಗೆ ಸೂಸುತ್ತಾನೆ, ಯಾರನ್ನು ಬದಿಗೆ ಸರಿಸುತ್ತಾನೆ ಎನ್ನುವುದು ಇನ್ನಷ್ಟೇ ತಿಳಿಯಬೇಕು. ಆರಂಭಿಕ ಬುಕ್ಕಿಂಗ್ ಟ್ರೆಂಡ್ ನಲ್ಲಿ ಸನ್ನಿ ಡಿಯೋಲ್ ನಾಯಕನಾಗಿರುವ ಗದರ್-2 ಮುಂದಿತ್ತು. ಅಲ್ಲದೆ, ಅಕ್ಷಯ್ ಕುಮಾರ್ ನ ಓಎಂಜಿ-2 ಗೆ ಸೆನ್ಸರ್ ಬೋರ್ಡ್ ‘ಎ’ ಸರ್ಟಿಫಿಕೇಟ್ ನೀಡಲಾಗಿದ್ದು ಕೇವಲ ವಯಸ್ಕರು ಮಾತ್ರ ಹೋಗುವಂತಿದೆ. ಆದಾಗ್ಯೂ, ಇಂದು ಎರಡೂ ಚಿತ್ರಗಳಿಗೆ ಅಗ್ನಿಪರೀಕ್ಷೆಯಾಗಿದ್ದು ಪ್ರೇಕ್ಷಕ ಯಾರಿಗೆ ಒಲಿಯುತ್ತಾನೆ ಎನ್ನುವುದು ಕೆಲದಿನಗಳಲ್ಲೇ ಗೊತ್ತಾಗಲಿದೆ.