ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ಅಜಯ್ ಸಿಂಗ್​ ನೇಮಕ

ಬೆಂಗಳೂರು: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಅಧ್ಯಕ್ಷರನ್ನಾಗಿ ಅಜಯ್ ಸಿಂಗ್ ಅವರನ್ನು ನೇಮಿಸಿ ಸಿಎಂ ಸಿದ್ದರಾಮಯ್ಯ ಆದೇಶಿಸಿದ್ದಾರೆ.ಅಜಯ್ ಸಿಂಗ್ ಅವರನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಈ ಮೂಲಕ ಜೇವರ್ಗಿ ಶಾಸಕರ ಅಸಮಾಧಾನ ತಗ್ಗಿಸುವ ಕಸರತ್ತು ನಡೆಸಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧಿನಿಯಮ 2013ರ ನಿಯಮಿತ ಅನ್ವಯ ಒಂದು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ 11 ಸದಸ್ಯರನ್ನೊಳಗೊಂಡಂತೆ ಮಂಡಳಿ ಸಮಿತಿಯನ್ನು ರಚಿಸಿ ಆದೇಶಿಸಲಾಗಿದೆ.

ಸಚಿವ ಸ್ಥಾನ ಸಿಗದಿದ್ದಕ್ಕೆ ಜೇವರ್ಗಿ ಕ್ಷೇತ್ರದ ಶಾಸಕ ಅಜಯ್ ಸಿಂಗ್ ತೀವ್ರ ಅಸಮಾಧಾನಗೊಂಡಿದ್ದರು. ಈ ಸಂಬಂಧ ಕೆಲ ದಿನಗಳಿಂದ ಪಕ್ಷದ ಚಟುವಟಿಕೆಯಿಂದ ಅಂತರ ಕಾಯ್ದುಕೊಂಡಿದ್ದರು. ಆಗಸ್ಟ್ 5 ರಂದು ಕಲಬುರಗಿಯಲ್ಲಿ ನಡೆದ ‘ಗೃಹ ಜ್ಯೋತಿ’ ಕಾರ್ಯಕ್ರಮದಲ್ಲಿ ಕೂಡ ಅಜಯ್ ಸಿಂಗ್ ಗೈರಾಗಿ ತಮ್ಮ ಅಸಮಾಧಾನ ಹೊರ ಹಾಕಿದ್ದರು. ಸಚಿವ ಸ್ಥಾನದಿಂದ‌ ವಂಚಿತರಾದ ನಂತರ ಕಾಂಗ್ರೆಸ್ ಪಕ್ಷದ ವಾಟ್ಸಾಪ್ ಗ್ರೂಪ್​​ನಿಂದ ಕೂಡ ಅಜಯ್ ಸಿಂಗ್ ಹೊರ ಹೋಗಿದ್ದರು. ಜೊತೆಗೆ ಈಚೆಗೆ ಸಚಿವರಾದ ಪ್ರಿಯಾಂಕ್ ಖರ್ಗೆ ಹಾಗೂ ಡಾ. ಶರಣಪ್ರಕಾಶ ಪಾಟೀಲ್ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕಲಬುರಗಿ ಅಭಿವೃದ್ಧಿ ಕುರಿತ ಅಧಿಕಾರಿಗಳ ಸಭೆಗೆ ಶಾಸಕರನ್ನು ಆಹ್ವಾನಿಸದಿರುವುದು ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು.‌ ಇದೀಗ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ಅಜಯ್ ಸಿಂಗ್ ರನ್ನು ನೇಮಿಸಿ ಸರ್ಕಾರ ಆದೇಶಿಸಿದೆ. ಆ ಮೂಲಕ ಸಿಎಂ ಸಿದ್ದರಾಮಯ್ಯ ಅಸಮಾಧಾನ ತಗ್ಗಿಸುವ ಕಸರತ್ತು ನಡೆಸಿದ್ದಾರೆ.

ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ನಿರಾಶೆ: ಮಾಜಿ ಸಿಎಂ ಧರ್ಮಸಿಂಗ್ ಪುತ್ರ ಹಾಗೂ ಶಾಸಕ ಡಾ.ಅಜಯ್ ಸಿಂಗ್ ಅವರು ಮೂರು ಶಾಸಕರಾಗಿದ್ದು, ಈ ಬಾರಿಯ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದ್ರೆ ಈ ಬಾರಿಯೂ ಅವರಿಗೆ ಸಚಿವ ಸ್ಥಾನ ಕೈ ತಪ್ಪಿ ಹೋಗಿತ್ತು. ಇದರಿಂದಾಗಿ ಅವರು ಅಸಮಾಧಾನಗೊಂಡಿದ್ದರು.ಅಜಯ್ ಸಿಂಗ್ ಅವರು ಇದೀಗ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ 371 (ಜೆ) ವಿಧಿ ಅನುಷ್ಠಾನದ ಕ್ಯಾಬಿನೆಟ್ ಉಪಸಮಿತಿಯ ಅಧ್ಯಕ್ಷರಾಗಿದ್ದಾರೆ.ಮಂಡಳಿ ಸಮಿತಿ ಸದಸ್ಯರು ಯಾರು?: ರಾಜ್ಯಸಭಾ ಸದಸ್ಯ ಸಯ್ಯದ್ ನಜೀರ್ ಹುಸೇನ್, ಶಾಸಕ ಅರವಿಂದ ಅರಳಿ ಯಲಕನೂರು, ಎಂಎಲ್​ಸಿ ತಿಪ್ಪಣ್ಣಪ್ಪ ಕಾಮಕನೂರು, ಶಾಸಕರಾದ ಅಜಯ್ ಸಿಂಗ್, ಬಿ.ಆರ್.ಪಾಟೀಲ್, ರಾಜಾ ವೆಂಕಟಪ್ಪ ನಾಯ್ಕ್, ಹಂಪನಗೌಡ ಬಾದರ್ಲಿ, ಬಸವರಾಜ ರಾಯರೆಡ್ಡಿ, ರಾಘವೇಂದ್ರ ಹಿಟ್ನಾಳ್, ತುಕಾರಾಮ್, ಹೆಚ್.ಆರ್.ಗವಿಯಪ್ಪ ಅವರನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಸಮಿತಿಯ ಸದಸ್ಯರಾಗಿ ನೇಮಿಸಲಾಗಿದೆ.