ಮುಂಬೈ: ಬಿಎಸ್ಇ ಬೆಂಚ್ ಮಾರ್ಕ್ ಸೆನ್ಸೆಕ್ಸ್ 307.63 ಪಾಯಿಂಟ್ಸ್ ಅಥವಾ ಶೇಕಡಾ 0.47 ರಷ್ಟು ಕುಸಿದು 65,688.18 ಕ್ಕೆ ತಲುಪಿದ್ದರೆ, ಎನ್ಎಸ್ಇ ನಿಫ್ಟಿ 89.45 ಪಾಯಿಂಟ್ಸ್ ಅಥವಾ ಶೇಕಡಾ 0.46 ರಷ್ಟು ಕುಸಿದು 19,543.10 ಕ್ಕೆ ತಲುಪಿದೆ.ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್ಬಿಐ) ಹಣಕಾಸು ನೀತಿ ಸಮಿತಿಯು ಪ್ರಮುಖ ಬಡ್ಡಿ ದರಗಳನ್ನು ಶೇಕಡಾ 6.50 ಕ್ಕೆ ಯಥಾಸ್ಥಿತಿಯಲ್ಲಿ ಕಾಯ್ದುಕೊಂಡ ನಂತರ ದೇಶೀಯ ಶೇರು ಮಾರುಕಟ್ಟೆಗಳು ಗುರುವಾರ ಕುಸಿದವು.
ಇಂದಿನ ಶೇರು ಮಾರುಕಟ್ಟೆ ವಹಿವಾಟಿನಲ್ಲಿ ಸೆನ್ಸೆಕ್ಸ್ 308 ಅಂಕ ಮತ್ತು ನಿಫ್ಟಿ 89 ಅಂಕ ಕುಸಿತ ಕಂಡಿವೆ.
ಇಂದು ಆರ್ಬಿಐನ ದ್ವೈಮಾಸಿಕ ನೀತಿಯನ್ನು ಪ್ರಕಟಿಸಿ ಮಾತನಾಡಿದ ಗವರ್ನರ್ ಶಕ್ತಿಕಾಂತ್ ದಾಸ್, ಮೇ 2023 ರಲ್ಲಿ ಶೇಕಡಾ 4.3 ಕ್ಕೆ ಇಳಿದಿದ್ದ ಮುಖ್ಯ ಹಣದುಬ್ಬರವು ಜೂನ್ನಲ್ಲಿ ಏರಿಕೆಯಾಗಿದೆ ಮತ್ತು ತರಕಾರಿ ಬೆಲೆಗಳ ಕಾರಣದಿಂದ ಜುಲೈ ಮತ್ತು ಆಗಸ್ಟ್ನಲ್ಲಿ ಹಣದುಬ್ಬರ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದರು. ತರಕಾರಿ ಬೆಲೆ ಹೆಚ್ಚಳದಿಂದಾಗಿ ಆರ್ಬಿಐ 2023-24 ಹಣಕಾಸು ವರ್ಷದ ಸಿಪಿಐ ಹಣದುಬ್ಬರ ಮುನ್ಸೂಚನೆಯನ್ನು ಶೇಕಡಾ 5.1 ರಿಂದ ಶೇಕಡಾ 5.4 ಕ್ಕೆ ಹೆಚ್ಚಿಸಿದೆ, ಆದರೆ ಜಿಡಿಪಿ ಮುನ್ಸೂಚನೆಯನ್ನು ಶೇಕಡಾ 6.5ರಲ್ಲಿ ಉಳಿಸಿಕೊಂಡಿದೆ.
ಏತನ್ಮಧ್ಯೆ, ಸೋನಿ ಇಂಡಿಯಾದೊಂದಿಗೆ ಕಂಪನಿಯನ್ನು ವಿಲೀನಗೊಳಿಸಲು ಎನ್ಸಿಎಲ್ಟಿ ಅನುಮೋದನೆ ನೀಡಿದ ನಂತರ ಮತ್ತು ಎಲ್ಲ ಆಕ್ಷೇಪಣೆಗಳನ್ನು ತಳ್ಳಿಹಾಕಿದ ನಂತರ ಜೀ ಎಂಟರ್ಟೈನ್ಮೆಂಟ್ ಶೇರುಗಳ ಲಾಭದಿಂದಾಗಿ ನಿಫ್ಟಿ ಮೀಡಿಯಾ ಶೇಕಡಾ 6.63 ರಷ್ಟು ಏರಿಕೆಯಾಗಿದೆ. ಜೀ ಷೇರು ಇಂದು ಶೇಕಡಾ 20 ರಷ್ಟು ಏರಿಕೆಯಾಗಿತ್ತು. ಆದರೆ ಎನ್ಎಸ್ಇಯಲ್ಲಿ ಶೇಕಡಾ 16.18 ರಷ್ಟು ಕುಸಿದು 281 ರೂ.ಗೆ ತಲುಪಿದೆ.
ನಿಫ್ಟಿ ಸ್ಮಾಲ್ ಕ್ಯಾಪ್-50 ಶೇಕಡಾ 0.52, ನಿಫ್ಟಿ ಸ್ಮಾಲ್ ಕ್ಯಾಪ್-250 ಶೇಕಡಾ 0.25, ನಿಫ್ಟಿ 100 ಮತ್ತು ನಿಫ್ಟಿ ಸ್ಮಾಲ್ ಕ್ಯಾಪ್ 100 ಶೇಕಡಾ 0.47 ಮತ್ತು ನಿಫ್ಟಿ 200 ಶೇಕಡಾ 0.41 ರಷ್ಟು ಕುಸಿದಿವೆ. ಅದಾನಿ ಎಂಟರ್ ಪ್ರೈಸಸ್, ಅದಾನಿ ಪೋರ್ಟ್ಸ್, ಇಂಡಸ್ಇಂಡ್ ಬ್ಯಾಂಕ್, ಟೈಟನ್, ಒಎನ್ಜಿಸಿ, ಜೆಎಸ್ಡಬ್ಲ್ಯೂ ಸ್ಟೀಲ್, ಎಂ &ಎಂ, ಬಿಪಿಸಿಎಲ್, ಬಜಾಜ್ ಫೈನಾನ್ಸ್, ಟೆಕ್ ಮಹೀಂದ್ರಾ, ಪವರ್ ಗ್ರಿಡ್, ರಿಲಯನ್ಸ್, ಬಜಾಜ್ ಫಿನ್ಸರ್ವ್ ಮತ್ತು ದಿವಿಸ್ ಲ್ಯಾಬ್ ಇಂದು ಹೆಚ್ಚು ಲಾಭ ಗಳಿಸಿದ ಶೇರುಗಳಾಗಿವೆ.
ಏಷ್ಯನ್ ಪೇಂಟ್ಸ್, ಕೋಟಕ್ ಮಹೀಂದ್ರಾ ಬ್ಯಾಂಕ್, ಬ್ರಿಟಾನಿಯಾ, ಐಟಿಸಿ, ನೆಸ್ಲೆ ಇಂಡಿಯಾ, ಅಪೊಲೊ ಆಸ್ಪತ್ರೆ, ಟಾಟಾ ಕನ್ಸೂಮರ್ಸ್, ಎಸ್ಬಿಐ ಲೈಫ್, ಆಕ್ಸಿಸ್ ಬ್ಯಾಂಕ್, ಭಾರ್ತಿ ಏರ್ಟೆಲ್, ಐಸಿಐಸಿಐ ಬ್ಯಾಂಕ್ ಮತ್ತು ಎಚ್ಡಿಎಫ್ಸಿ ಬ್ಯಾಂಕ್ ನಷ್ಟ ಅನುಭವಿಸಿದ ಪ್ರಮುಖ ಶೇರುಗಳಾಗಿವೆ.ಆರ್ಬಿಐ ಹಣದುಬ್ಬರದ ಮುನ್ಸೂಚನೆಯನ್ನು ಹೆಚ್ಚಿಸಿದ ನಂತರ ಮತ್ತು ಮುಂದಿನ ದಿನಗಳಲ್ಲಿ ನಗದು ಹರಿವನ್ನು ಬಿಗಿಗೊಳಿಸಲು ನಗದು ಮೀಸಲು ಅನುಪಾತ (ಸಿಆರ್ಆರ್) ಅಡಿಯಲ್ಲಿ ಠೇವಣಿಗಳ ಹೆಚ್ಚಿನ ಭಾಗವನ್ನು ಮೀಸಲಿಡುವಂತೆ ಬ್ಯಾಂಕುಗಳಿಗೆ ಸೂಚಿಸಿದ ನಂತರ ಎಫ್ಎಂಸಿಜಿ ಮತ್ತು ಬ್ಯಾಂಕ್ ಶೇರುಗಳು ಇಂದು ಮತ್ತೆ ಕುಸಿತ ಕಂಡವು. ನಿಫ್ಟಿ ಎಫ್ಎಂಸಿಜಿ ಶೇಕಡಾ 0.91 ರಷ್ಟು ಕುಸಿದರೆ, ಪಿಎಸ್ಯು ಬ್ಯಾಂಕ್ ಸೂಚ್ಯಂಕ ಶೇಕಡಾ 0.81 ರಷ್ಟು ಕುಸಿದಿದೆ. ನಿಫ್ಟಿ ಹೆಲ್ತ್ ಕೇರ್ ಸೂಚ್ಯಂಕ ಶೇಕಡಾ 0.85, ಹಣಕಾಸು ಸೇವೆ ಸೂಚ್ಯಂಕ ಶೇಕಡಾ 0.77, ನಿಫ್ಟಿ ಬ್ಯಾಂಕ್ ಶೇಕಡಾ 0.76 ಮತ್ತು ಫಾರ್ಮಾ ಶೇಕಡಾ 0.74 ರಷ್ಟು ಕುಸಿದಿವೆ.