ನವದೆಹಲಿ : ದುಬಾರಿಯಾಗಿರುವ ಟೊಮ್ಯಾಟೊ ಬೆಲೆಯ ಹೊರೆಯನ್ನು ಕಡಿತಗೊಳಿಸಲು ಕೇಂದ್ರ ಸರ್ಕಾರ ನೆರವು ನೀಡಲು ಸೂಕ್ತ ಕ್ರಮ ಕೈಗೊಂಡಿದೆ. ಈ ಭಾಗವಾಗಿ ದೆಹಲಿ-ಎನ್ಸಿಆರ್ ಪ್ರದೇಶದಲ್ಲಿ ನ್ಯಾಷನಲ್ ಕೋ-ಆಪರೇಟಿವ್ ಕನ್ಸ್ಯೂಮರ್ಸ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (NCCF) ಪ್ರತಿ ಕೆಜಿಗೆ 70 ರೂ.ಗೆ ಟೊಮ್ಯಾಟೊ ನೀಡಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಹೇಳಿದರು.: ಕಳೆದ ಎರಡು ತಿಂಗಳಿನಿಂದ ದೇಶದ ಹಲವು ರಾಜ್ಯಗಳಲ್ಲಿ ಟೊಮ್ಯಾಟೊ ಬೆಲೆ ಗಗನಕ್ಕೇರಿತ್ತು. ಕೆಜಿಗೆ ಬರೋಬ್ಬರಿ 190-250 ರೂ. ಏರಿಕೆಯಾಗುವ ಮೂಲಕ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದ್ದ ಟೊಮ್ಯಾಟೊ ದರದಲ್ಲಿ ಇದೀಗ ಕೊಂಚ ಇಳಿಕೆ ಕಾಣುತ್ತಿದೆ.
ಬಿಹಾರ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಮತ್ತು ರಾಜಸ್ಥಾನ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಜುಲೈ 14 ರಿಂದ ಇದೇ ರೀತಿಯ ಕ್ರಮಗಳನ್ನು ಮಾಡಲಾಗಿದೆ. ಆಮದು ಮೇಲಿನ ಮಿತಿಗಳನ್ನು ಸಡಿಲಿಸಿದ ನಂತರ ಸರ್ಕಾರವು ನೇಪಾಳದಿಂದ ಟೊಮ್ಯಾಟೊಗಳನ್ನು ಆಮದು ಮಾಡಿಕೊಳ್ಳಲು ಪ್ರಾರಂಭಿಸಿದೆ ಎಂದು ಸಚಿವೆ ಹೇಳಿದರು. ಶುಕ್ರವಾರದ ವೇಳೆಗೆ ವಾರಣಾಸಿ, ಲಕ್ನೋ ಮತ್ತು ಕಾನ್ಪುರಕ್ಕೆ ಟೊಮ್ಯಾಟೊ ಮೊದಲ ಸಾಗಣೆಯು ಬರುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ,
ಈ ಕುರಿತು ಮಾತನಾಡಿದ ನಿರ್ಮಲಾ ಸೀತಾರಾಮನ್, ಎನ್ಸಿಸಿಎಫ್ ರಾಷ್ಟ್ರೀಯ ರಾಜಧಾನಿಯಾದ್ಯಂತ ಪ್ರತಿ ಕೆಜಿಗೆ 70 ರೂ.ಗೆ ಟೊಮ್ಯಾಟೊ ಕೊಡಲಿದೆ. ಮನೆಗೆ ಬಳಸುವ ದಿನನಿತ್ಯದ ಸಾಮಾಗ್ರಿಗಳನ್ನು ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳ ಎನ್ಸಿಸಿಎಫ್ (NCCF) ಮತ್ತು ಎನ್ಎಎಫ್ಇಡಿ (NAFED) ನಂತಹ ಸಹಕಾರಿ ಸಂಸ್ಥೆಗಳ ಮೂಲಕ ಖರೀದಿಸಲಾಗುತ್ತದೆ ಎಂದು ಹೇಳಿದರು.