ವಿವಿಧ ಪ್ರಕರಣಗಳ ಆರೋಪಿಗಳಿಗೆ ಶಿಕ್ಷೆ

ಉಡುಪಿ: ಉಡುಪಿಯ ಬೈಕಾಡಿ ಗ್ರಾಮದ ಗೋಪಾಲ ಹಾಗೂ ಪುತ್ತೂರು ಗ್ರಾಮದ ಬಾಲಕೃಷ್ಣ ಇವರುಗಳ ಪೈಕಿ ಆರೋಪಿ ಬಾಲಕೃಷ್ಣ ಮಣಿಪಾಲದ ದೂರದರ್ಶನ ಕಛೇರಿಯಲ್ಲಿ ನೌಕರನಾಗಿದ್ದು, ಅದೇ ಕಛೇರಿಯಲ್ಲಿರುವ ಪುರುಷ ಸಿಬ್ಬಂದಿಯೊಂದಿಗೆಮಹಿಳಾ ಸಹೋದ್ಯೋಗಿ ಸಲುಗೆಯಿಂದ ಒಟ್ಟಿಗೆ ಇರುವ ವೇಳೆ, ಅವರಿಗೆ ತಿಳಿಯದಂತೆ, ಅವರ ಅಶ್ಲೀಲ ಛಾಯಾಚಿತ್ರವನ್ನು ಮೊಬೈಲ್‌ನಲ್ಲಿ ತೆಗೆದು ಅದನ್ನು ಗೋಪಾಲನಿಗೆ ನೀಡಿದ್ದು, ಇವರಿಬ್ಬರೂ ಮಹಿಳೆಗೆ ಲೈಂಗಿಕ ಬೇಡಿಕೆ ಇಡುತ್ತಿದ್ದು, ಸದ್ರಿಯವರು ಇದಕ್ಕೆ ಒಪ್ಪದಿದ್ದಾಗ ಆರೋಪಿ ಗೋಪಾಲನು ಊರಿನಲ್ಲಿ ಅವರ ಅಶ್ಲೀಲ ಛಾಯಾಚಿತ್ರಗಳನ್ನು ತೋರಿಸಿ ಅವರ ಮಾನಕ್ಕೆ ಧಕ್ಕೆಯನ್ನು ಉಂಟು ಮಾಡಿರುತ್ತಾರೆ.

2014 ಜನವರಿ 4 ರಂದು ಈ ಇಬ್ಬರೂ ಆರೋಪಿಗಳು ತಕ್ಷೀರು ಮಾಡುವ ಸಮಾನ ಉದ್ದೇಶದಿಂದ ಸದ್ರಿ ಮಹಿಳೆಯ ಮನೆಯ ಸಮೀಪ ಬಾವಿಕಟ್ಟೆಯ ಬಳಿ ನಡೆದುಕೊಂಡು ಹೋಗುತ್ತಿದ್ದ ಈಕೆಯನ್ನು ತಡೆದು ನಿಲ್ಲಿಸಿ, ಅವರ ಮೇಲೆ ಲೈಂಗಿಕವಾಗಿ ಹಲ್ಲೆ ಮಾಡಿ, ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಲೈಂಗಿಕ ಸಂಪರ್ಕಕ್ಕೆ ಸಮ್ಮತಿ ನೀಡದಿದ್ದರೆ , ಅಶ್ಲೀಲ ಛಾಯಾಚಿತ್ರಗಳನ್ನು ಊರಿನವರಿಗೆ ತೋರಿಸಿ ಜೀವನ ಹಾಳು ಮಾಡುವುದಾಗಿ ಬೆದರಿಕೆ ಹಾಕಿರುವುದು ತಕ್ಷೀರು ಸ್ಥಳ ಪಂಚನಾಮೆ, ಸಾಕ್ಷಿದಾರರ ಹೇಳಿಕೆಯಿಂದ ಮತ್ತು ತನಿಖೆಯಿಂದ ಸಾಬೀತಾಗಿರುವುದರಿಂದ ಈ ಪ್ರಕರಣದ ಆರೋಪಿತರ ಪೈಕಿ 1ನೇ ಆರೋಪಿ ಗೋಪಾಲ ಮೃತಪಟ್ಟಿದ್ದು, 2ನೇ ಆರೋಪಿತನಾದ ಬಾಲಕೃಷ್ಣ ಇವರ ಮೇಲೆ ಭಾ.ದಂ.ಸಂ: ಕಲಂ: 341, 354, 354(ಎ), 354(ಸಿ),
354(ಡಿ), 504 ಜೊತೆಗೆ 34 ರಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಈ ಬಗ್ಗೆ ಮಲ್ಪೆ ಠಾಣೆಯ ಪಿ.ಎಸ್.ಐ ಗಿರಿಶ್ ಕುಮಾರ್ ಎಸ್ ತನಿಖೆ ನಡೆಸಿ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆ, ನಗರದ 1ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶ ಶ್ಯಾಮ್ ಪ್ರಕಾಶ್ ಅವರು ಆರೋಪಿ ಬಾಲಕೃಷ್ಣನಿಗೆ 3 ವರ್ಷ ಕಾರಾಗೃಹ ವಾಸ ಶಿಕ್ಷೆ ಮತ್ತು 10,000 ರೂ. ದಂಡ ವಿಧಿಸಿ, ತೀರ್ಪು ನೀಡಿರುತ್ತಾರೆ.

ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಮೋಹಿನಿ.ಕೆ ವಾದ ಮಂಡಿಸಿದ್ದು, ಕು.ಮಮ್ತಾಜ್ ಸಾಕ್ಷಿ ವಿಚಾರಣೆ ನಡೆಸಿರುತ್ತಾರೆ.

ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿದ ಆರೋಪಿಗೆ ಶಿಕ್ಷೆ

ಜಿಲ್ಲೆಯ ಬ್ರಹ್ಮಾವರ ತಾಲೂಕು, ಹಾರಾಡಿ ಗ್ರಾಮದ ಕುಕ್ಕುಡೆ ಕೀರ್ತಿ ನಗರ್ ನಿವಾಸಿ ಸುಕೇಶ್ ಎಂಬಾತನು 2021 ಜನವರಿ 3 ರಂದು ಕೀರ್ತಿ ನಗರದಲ್ಲಿ ಬಸಪ್ಪ ಮತ್ತು ಅವರ ಮಗಳಾದ ಲಲಿತಾ ಇವರು ಅವರ ಮನೆಯ ಸಮೀಪ ಬಸಳೆ ಬಳ್ಳಿ ನೆಟ್ಟಿದ್ದ ಜಾಗಕ್ಕೆ ಸೌದೆಯನ್ನು ತಂದು ಎಸೆಯುತ್ತಿದ್ದಾಗ ಆರೋಪಿಯನ್ನು ಕರೆದು ನೀನು ಬಸಳೆ ಬಳ್ಳಿ ನೆಟ್ಟ ಜಾಗಕ್ಕೆ ಯಾಕೆ ಸೌದೆ ಎಸೆಯುತ್ತೀಯಾ ಎಂದು ಕೇಳಿದ್ದು, ಆಗ ಆರೋಪಿಯು ಬಸಪ್ಪ ಮತ್ತು ಅವರ ಮಗಳಾದ ಲಲಿತಾ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಮರದ ರೀಪಿನ ತುಂಡಿನಿಂದ ಲಲಿತಾ ಅವರಿಗೆ ಹಲ್ಲೆ ಮಾಡಿದ್ದು, ಇದನ್ನು ತಡೆಯಲು ಬಂದ ಬಸಪ್ಪ ಇವರ ಕುತ್ತಿಗೆಗೆ ಕೈ ಹಾಕಿ ದೂಡಿ, ಅಲ್ಲಿಯೆ ಇದ್ದ ಹಳೆಯ ಮೆಟ್ಟುಕತ್ತಿಯಿಂದ ಬಲ ಕಾಲಿನ ಮೊಣಗಂಟಿಗೆ ಹೊಡೆದು ತೀವ್ರ ಗಾಯಗೊಳಿಸಿ ಅವಾಚ್ಯ ಶಬ್ದಗಳಿಂದ ಬೈದಿರುತ್ತಾನೆ. ಅಲ್ಲದೇ ದೂಡಿ ಹಾಕಿದ್ದರಿಂದ ಬಸಪ್ಪ ಅವರಿಗೆ ಎಡ ಕಾಲಿನ ಮೊಣಗಂಟಿಗೆ ತರಚಿದ ಗಾಯವಾಗಿರುತ್ತದೆ. ಮರದ ರೀಪಿನ ತುಂಡಿನಿಂದ ಹಲ್ಲೆ ಮಾಡಿದ್ದರಿಂದ ಲಲಿತಾ ಇವರಿಗೆ ತಲೆಗೆ
ಗಾಯವಾಗಿರುವ ಹಿನ್ನೆಲೆ, ಆರೋಪಿಯ ಮೇಲೆ ಭಾ.ದಂ.ಸಂ: ಕಲಂ: 504, 323, 324, 326ರಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಈ ಬಗ್ಗೆ ಬ್ರಹ್ಮಾವರ ಠಾಣೆಯ ಪಿ.ಎಸ್.ಐ ಗುರುನಾಥ್ ಬಿ ತನಿಖೆ ನಡೆಸಿ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆ, ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ
ನ್ಯಾಯಾಲಯದ ನ್ಯಾಯಾಧೀಶ ಶ್ಯಾಮ್ ಪ್ರಕಾಶ್ ಅವರು 3 ವರ್ಷದ ಕಾರಾಗೃಹ ವಾಸ ಶಿಕ್ಷೆ ಮತ್ತು 10,000 ರೂ. ದಂಡ ರೂಪದ ಶಿಕ್ಷೆ ವಿಧಿಸಿ ತೀರ್ಪು ನೀಡಿರುತ್ತಾರೆ.

ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಮೋಹಿನಿ.ಕೆ ವಾದ ಮಂಡಿಸಿರುತ್ತಾರೆ.