ಮಣಿಪಾಲ: ಕೇಂದ್ರ ಸರಕಾರದ ಗಂಗಾ ನದಿಯನ್ನು ಸ್ವಚ್ಛ ಮತ್ತು ಪುನರ್ಜೀವನಗೊಳಿಸುವ ‘ನಮಾಮಿ ಗಂಗಾ’ ಯೋಜನೆಯು ಜಗತ್ತಿನ ಅತ್ಯಂತ ಪ್ರಮುಖ ಯೋಜನೆಗಳಲ್ಲಿ ಒಂದಾಗಿದ್ದು ಇದಕ್ಕೆ ಕೇಂದ್ರ ಸರಕಾರವು 20 ಸಾವಿರಕ್ಕೂ ಮಿಕ್ಕಿ ಕೋಟಿ ರೂಪಾಯಿಯನ್ನು ತೆಗೆದಿರಿಸಿದೆ. ಕಳೆದ 9 ವರ್ಷಗಳಲ್ಲಿ 450ಕ್ಕೂ ಮಿಕ್ಕಿ ವಿವಿಧ ಕಾಮಗಾರಿಗಳನ್ನು ಕಾರ್ಯರೂಪಗೊಳಿಸಿ ಗಂಗಾ ನದಿಯನ್ನು ಪುನರ್ಜೀವನಗೊಳಿಸುವ
ಕಾರ್ಯ ನಡೆದಿದೆ. ಇದಕ್ಕೆ ಸಾಕಷ್ಟು ಪ್ರತಿಫಲವು ದೊರಕಿದ್ದು ಈ ನಿಟ್ಟಿನಲ್ಲಿ ಹತ್ತು ಹಲವು ಕಾರ್ಯ ಯೋಜನೆಗಳು ಕಾರ್ಯಗತಗೊಳ್ಳುತ್ತಿದೆ. ಅವಿರಲಧಾರ ಗಂಗಾ , ನಿರ್ಮಲಧಾರ ಗಂಗಾ, ಜ್ಞಾನ ಗಂಗಾ, ಜನ ಗಂಗಾ ಮತ್ತು ಅರ್ಥಗಂಗೆ ಮತ್ತು ಪರಿಸರ ಸಂರಕ್ಷಣೆ ಈ ಐದು ಪ್ರಮುಖ ಅಂಶಗಳ ಮೂಲಕ ಈ ನಮಾಮಿ ಗಂಗೆಗೆ ಚಾಲನೆ ನೀಡಲಾಗಿದೆಯೆಂದು ನ್ಯಾಷನಲ್ ಮಿಷನ್ ಫಾರ್ ಕ್ಲೀನ್ ಗಂಗಾ ಮಹಾ ನಿರ್ದೇಶಕ ಅಶೋಕ್ ಕುಮಾರ್ ಐ.ಎ.ಎಸ್ ಅಭಿಪ್ರಾಯಪಟ್ಟರು.
ಮಾಹೆಯ ಎಂ ಸಿ ಎನ್ ಎಸ್ ನಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಉಡುಪಿ, ಕಾರ್ಕಳ, ಬ್ರಹ್ಮಾವರ ಭಾಗದ ಶಿಕ್ಷಕರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಉಡುಪಿ ಡಿಡಿಪಿಐ ಗಣಪತಿ ಮಾತನಾಡಿ ಅಧ್ಯಾಪಕರು ಮಕ್ಕಳಲ್ಲಿ ಜಲ, ಪರಿಸರ, ನದಿ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕು. ಪರಿಸರ ಸಂರಕ್ಷಣೆಯಲ್ಲಿ ಅಧ್ಯಾಪಕರ ಹೊಣೆ ಮತ್ತು ಕೊಡುಗೆ ಬಹಳ ಮಹತ್ವವಾದುದು. ಈ ನಿಟ್ಟಿನಲ್ಲಿ ನಾವು ಕಾರ್ಯಗತರಾಗೋಣ ಎಂದರು.
ಮಾಹೆ ಪ್ರೊ ಚಾನ್ಸೆಲರ್ ಡಾ. ಎಚ್.ಎಸ್. ಬಲ್ಲಾಳ್ ಮಾತನಾಡಿ ವಿಶ್ವವಿದ್ಯಾಲಯದಿಂದ ನಮಾಮಿ ಗಂಗೆ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಂಡಿರುವ ಪರಿಸರ ಹಾಗೂ ನೀರಿನ ಸಂರಕ್ಷಣೆ ಯೋಜನೆಗಳ ಬಗ್ಗೆ ಹರ್ಷ ವ್ಯಕ್ತಪಡಿಸಿ ಶುಭ ಹಾರೈಸಿದರು.
ಡಾ. ರಾಘವೇಂದ್ರ ಹೊಳ್ಳ ಮತ್ತು ಡಾ. ನಾರಾಯಣ ಶೆಣೈ ಕೆ ಇವರು ಗಂಗೆ ಮತ್ತು ಭಾರತ ದೇಶದ ನದಿಗಳ ಮಹತ್ವ ಮತ್ತು ಪುನರ್ಜೀವನ ಕಾರ್ಯದ ಬಗ್ಗೆ ಮಾಹಿತಿ ನೀಡಿದರು.
ಪ್ರೊ ವೈಸ್ ಚಾನ್ಸ್ ಲರ್ ಡಾ. ನಾರಾಯಣ್ ಸಭಾಹಿತ್ ಮಾತನಾಡಿ ನೀರಿನ ಸಮಸ್ಯೆ, ಜಾಗತಿಕ ತಾಪಮಾನ ವೈಪರೀತ್ಯದ ಈ ಸಂದರ್ಭದಲ್ಲಿ, ನದಿ ಮೂಲಗಳ ಸಂರಕ್ಷಣೆಯ ಅಗತ್ಯದ ಬಗ್ಗೆ ವಿವರಿಸಿದರು.
ಮಣಿಪಾಲ್ ಸೆಂಟರ್ ಫಾರ್ ನ್ಯಾಚುರಲ್ ಸೈನ್ಸ್ ನಿರ್ದೇಶಕ ಡಾ. ಶ್ರೀಕುಮಾರ್ ಪಿ. ಸ್ವಾಗತಿಸಿದರು. ಎಂ.ಐ.ಟಿ ಮಣಿಪಾಲ್ ಜಂಟಿ ನಿರ್ದೇಶಕ ಡಾ. ಸೋಮಶೇಖರ ಭಟ್ ಜಂಟಿ ವಂದಿಸಿದರು. ಕುಮಾರಿ ಸೃಜನರಾವ್ ಮತ್ತು ತಂಡ ಪಾರ್ಥಿಸಿದರು. ಡಾ. ಸೌಮ್ಯ ಎಸ್ ಮತ್ತು ಡಾ. ಭಾಗ್ಯ ನಾವಾಡ ನಿರೂಪಿಸಿದರು.