ಬೆಳ್ತಂಗಡಿ: ಸೌಜನ್ಯ ಪ್ರಕರಣದ ರಹಸ್ಯ ಬಿಚ್ಚಿಟ್ಟರೆ ನನ್ನನ್ನು ಸಾಯಿಸಬಹುದು. ಆದರೆ ಆ ರಹಸ್ಯವನ್ನು ಸಾಯುವ ಮುನ್ನ ನಾನು ಹೇಳದೇ ಬಿಡುವುದಿಲ್ಲ ಎಂದು ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಬೆಳ್ತಂಗಡಿಯ ಸೌಜನ್ಯ ಪ್ರಕರಣವನ್ನು ಉದ್ದೇಶಪೂರ್ವಕವಾಗಿ ದಾರಿ ತಪ್ಪಿಸಲಾಗಿದ್ದು ಇದರ ಹಿಂದೆ ಇರುವವರು ಯಾರೆಂದು ನನಗೆ ಗೊತ್ತಿದೆ ಎಂದರು.
ನಾನು ಶಾಸಕನಾಗಿದ್ದಾಗ ಅಧಿವೇಶನದಲ್ಲಿ ಸೌಜನ್ಯಾ ಕೇಸ್ ಅನ್ನು ಸಿಬಿಐಗೆ ವಹಿಸಲು ಆಗ್ರಹಿಸಿದ್ದೆ. ಸಿದ್ದರಾಮಯ್ಯನವರು ಕೆಲವರನ್ನ ತುಂಬಾ ಒಳ್ಳೆಯವರು ಎಂದು ನಂಬಿದ್ದರು. ಅಧಿವೇಶನಕ್ಕೂ ಮುನ್ನ ನನ್ನನ್ನು ಕರೆದು, ಇದನ್ನ ಪ್ರಸ್ತಾಪ ಮಾಡಬೇಡ, ಪ್ರಕರಣ ಸಿಬಿಐಗೆ ವಹಿಸಲು ಸಾಧ್ಯವಿಲ್ಲ ಎಂದಿದ್ದರು. ಆದರೆ ವಿಧಾನಸಭೆ ಕೊಠಡಿಯಲ್ಲಿ ನಾನು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಿದ್ದೆ. ಸೌಜನ್ಯಾ ಮಾತ್ರವಲ್ಲ ಬೆಳ್ತಂಗಡಿಯಲ್ಲಿ ನಡೆದ ಅಮಾನುಷ ಹತ್ಯೆಗಳ ಬಗ್ಗೆ ಅವರಿಗೆ ಮನವರಿಕೆ ಮಾಡಿದ್ದೆ ಎಂದರು.
ಕೊನೆಗೆ ಸಿದ್ದರಾಮಯ್ಯನವರು ಅಧಿವೇಶನದಲ್ಲಿ ಸೌಜನ್ಯಾ ಪ್ರಕರಣವನ್ನು ಸಿಬಿಐಗೆ ವಹಿಸ್ತೇನೆ ಎಂದಿದ್ದರು.
ಸಿಬಿಐ ತನಿಖೆಯ ಮೂಲಕ ನ್ಯಾಯ ಸಿಗುತ್ತದೆ ಎಂಬ ಭಾವನೆ, ನಂಬಿಕೆ ನನಗಿತ್ತು. ಆದರೆ ಸಿಬಿಐ ತನಿಖೆ ಅರ್ಧದಲ್ಲಿರುವಾಗಲೇ ಇದರಲ್ಲಿ ಮೋಸ ಆಗಿದೆ ಎಂದು ತಿಳಿದುಬಂತು. ಮೋಸವೇನು, ಇದಕ್ಕೆ ಯಾರು ಕಾರಣ ಎನ್ನುವುದನ್ನು ಸಾರ್ವಜನಿಕವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಸಂದರ್ಭ ಬಂದಾಗ ಈ ವಿಚಾರ ಹೇಳುತ್ತೇನೆ. ಸೌಜನ್ಯಾ ಪ್ರಕರಣದ ದಿಕ್ಕು ತಪ್ಪಿಸಿದ್ದು ಯಾರು? ಅನ್ಯಾಯ, ತೊಂದರೆ ಕೊಟ್ಟಿದ್ದು ಯಾರು ಎಂದು ಹೇಳುತ್ತೇನೆ. ಅದಕ್ಕೂ ಮೊದಲು ನನ್ನನ್ನು ಸಾಯಿಸಿದ್ರೂ ಸಾಯಿಸಬಹುದು. ಸಾಯಿಸಲು ಅಷ್ಟು ಸುಲಭ ಇಲ್ಲ. ನಾನೂ ದೈವ ಭಕ್ತ. ಆದರೆ ನಾನು ಸಾಯುವುದರೊಳಗೆ ಸೌಜನ್ಯ ಪ್ರಕರಣಕ್ಕೆ ನ್ಯಾಯ ಕೊಡಿಸಿಯೇ ಸಿದ್ಧ ಎಂದು ಅವರು ಹೇಳಿದರು.