ಕಾರ್ಕಳ: ಪಠ್ಯ ಶಿಕ್ಷಣದ ಜೊತೆಗೆ ಎನ್.ಎಸ್.ಎಸ್ ನಂತಹ ಪಠ್ಯೇತರ ಚಟುವಟಿಕೆಗಳು ನಮ್ಮ ಶೈಕ್ಷಣಿಕ ಜೀವನದಲ್ಲಿ ಜೀವನ ಕೌಶಲ್ಯಗಳನ್ನು ಕಲಿಸಿಕೊಡುತ್ತದೆ ಎಂದು ಜ್ಞಾನಸುಧಾ ವಾಣಿಜ್ಯ ವಿಭಾಗದ ಹಳೆವಿದ್ಯಾರ್ಥಿಗಳಾದ ಸಿ.ಎ. ರಘುರಾಮ್ ಪ್ರಭು ಹೇಳಿದರು.
ಕಾರ್ಕಳ ಜ್ಞಾನಸುಧಾ ಪಿಯು ಕಾಲೇಜಿನ ಎನ್.ಎಸ್.ಎಸ್. ಕಾರ್ಯಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ಎನ್.ಎಸ್.ಎಸ್.ನ ವಿವಿಧ ಚಟುವಟಿಕೆಗಳು ಶೈಕ್ಷಣಿಕ ಜೀವನದ ನಂತರ ನಮ್ಮ ವೃತ್ತಿ ಜೀವನಕ್ಕೆ, ಸಾಮಾಜಿಕ ಬದುಕಿಗೆ ಸಹಕಾರಿಯಾಗುತ್ತದೆ. ವಾಣಿಜ್ಯ ವಿಭಾಗದ ಸ್ಪರ್ಧಾತ್ಮಕ ಪ್ರಪಂಚಕ್ಕೆ ನಾವು ಕೌಶಲ್ಯಭರಿತರಾಗಿ ತೆರೆದುಕೊಳ್ಳಬೇಕಾಗಿದೆ ಎಂದರು.
ಸಿಎ ಪವನ್ ಮಾತನಾಡಿ, ಜೀವನದಲ್ಲಿ ಯಾವುದೂ ಸುಲಭದಲ್ಲಿ ಸಿಗುವುದಿಲ್ಲ, ಒಂದಷ್ಟು ಸಮಯದ ಸಂಘಟಿತ ಪ್ರಯತ್ನದ ಪ್ರತಿಫಲವೇ ಯಶಸ್ಸು, ಅಂತಹ ಯಶಸ್ಸಿನ ಹಾದಿಗೆ ಶೈಕ್ಷಣಿಕ ಜೀವನವನ್ನು ಸರಿಯಾಗಿ ಬಳಸಿಕೊಳ್ಳಬೇಕೆಂದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾಂತಾವರ ಗ್ರಾಮ ಪಂಚಾಯತ್ನ ಮಾಜಿ ಅಧ್ಯಕ್ಷರು ಹಾಗೂ ಪ್ರಗತಿಪರ ಕೃಷಿಕ ಜಯ ಕೋಟ್ಯಾನ್ ಎನ್.ಎಸ್.ಎಸ್. ಸ್ವಯಂಸೇವಕರಿಗೆ ಶುಭಹಾರೈಸಿದರು.
ಇದೇ ಸಂದರ್ಭದಲ್ಲಿ ಕಾಲೇಜಿನ ಹಳೆವಿದ್ಯಾರ್ಥಿಳಾದ ಸಿಎ ರಘುರಾಮ್ ಪ್ರಭು, ಸಿಎ ಪವನ್ ಅವರನ್ನು ಸನ್ಮಾನಿಸಲಾಯಿತು. ಕಳೆದ ವರ್ಷದ ಎನ್.ಎಸ್.ಎಸ್. ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಿಇಒ ಹಾಗೂ ಕಾಲೇಜಿನ ಪ್ರಾಂಶುಪಾಲ ದಿನೇಶ್ ಎಂ. ಕೊಡವೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಉಪ ಪ್ರಾಂಶುಪಾಲ ಹಾಗೂ ವಾಣಿಜ್ಯ ವಿಭಾಗ ಮುಖ್ಯಸ್ಥ ಸಾಹಿತ್ಯ ಉಪಸ್ಥಿತರಿದ್ದರು.
ಕನ್ನಡ ಉಪನ್ಯಾಸಕ ಸಂತೋಷ್ ನೆಲ್ಲಿಕಾರು ಕಾರ್ಯಕ್ರಮ ನಿರೂಪಿಸಿ, ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ರವಿ ಜಿ. ಸ್ವಾಗತಿಸಿ, ವಿದ್ಯಾರ್ಥಿ ಪ್ರತಿನಿಧಿ ಧೀರಜ್ ಪ್ರತಿಜ್ಞಾವಿಧಿ ಬೋಧಿಸಿ, ಸಮಿಯಾ ಹೆಗ್ಡೆ ವಂದಿಸಿದರು.