ಬೆಂಗಳೂರು: ಬೆಂಗಳೂರು ತುಳು ಕೂಟದ 50ನೇ ವರ್ಷಾಚರಣೆ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಕಂಬಳ ನಡೆಸುವ ಬಗ್ಗೆ ಚಿಂತನೆ ನಡೆದಿದೆ. ಇದಕ್ಕೆ ತಕ್ಕಂತೆ ಬೆಂಗಳೂರಿನಲ್ಲಿ ಕಂಬಳವನ್ನು ಆಯೋಜಿಸಲು ತಂಡ ಸಿದ್ಧವಾಗಿದೆ. ಕಂಬಳದ ಕೋಣಗಳನ್ನು ಓಡಿಸಲು ಸ್ಥಳದ ಅವಶ್ಯಕತೆ ಇದ್ದು ಇದಕ್ಕಾಗಿ ಸ್ಥಳವನ್ನು ಆಯ್ಕೆ ಮಾಡಲಾಗಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಂಬಳದ ಕೋಣಗಳನ್ನು ಓಡಿಸಿ, ತುಳುನಾಡಿನ ಸಾಂಪ್ರದಾಯಿಕ ಕ್ರೀಡೆಯನ್ನು ಬೆಂಗಳೂರಿಗರಿಗೆ ಪರಿಚಯಿಸುವ ನಿಟ್ಟಿನಲ್ಲಿ ಕಾರ್ಯಗಳು ನಡೆಯುತ್ತಿವೆ.
ಬೆಂಗಳೂರಿನಲ್ಲಿ ಕಂಬಳ ಆಯೋಜನೆ ಮಾಡುವ ಬಗ್ಗೆ ಪುತ್ತೂರು ಶಾಸಕ ಹಾಗೂ ಉಪ್ಪಿನಂಗಡಿ ವಿಜಯ-ವಿಕ್ರಮ ಜೋಡುಕೆರೆ ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಸಮಿತಿ ರಚನೆಯಾಗಿದ್ದು, ಕಂಬಳಕ್ಕಾಗಿ ಅರಮನೆ ಮೈದಾನದಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಕಂಬಳ ನಡೆಯುವ ದಿನ ಮತ್ತು ಕಂಬಳದ ಕೋಣಗಳ ಆಯ್ಕೆ ಹಾಗೂ ಬೆಂಗಳೂರಿನವರೆಗೆ ಸುದೀರ್ಘ ಪ್ರಯಾಣದ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ.
ಬೆಂಗಳೂರು ತುಳು ಕೂಟದ ಅಧ್ಯಕ್ಷ ಸುಂದರ್ ರಾಜ್ ರೈ, ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ ಕೆ., ತುಳುಕೂಟದ ಗೌರವಾಧ್ಯಕ್ಷ ಹಾಗೂ ಮಹಾನಗರ ಪಾಲಿಕೆ ಮಾಜಿ ಸದಸ್ಯ ರಾಜೇಂದ್ರ ಕುಮಾರ್ ಕೆ.ವಿ., ಮಾಜಿ ಅಧ್ಯಕ್ಷ ದಿನೇಶ್ ಹೆಗ್ಡೆ ಬಿ., ಜಯರಾಮ್ ಸೂಡ, ಚಂದ್ರಹಾಸ ರೈ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಸಂಪತ್ ಕುಮಾರ್, ಅಕ್ಷಯ್ ರೈ ದಂಬೆಕಾನ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರ ಮುತುವರ್ಜಿಯಲ್ಲಿ ಉದ್ಯಾನ ನಗರಿ ಸಿಲಿಕಾನ್ ಸಿಟಿಯಲ್ಲಿ ಕಂಬಳ ನಡೆಸುವ ಬಗ್ಗೆ ಚರ್ಚೆಗಳಾಗುತ್ತಿರುವ ಬಗ್ಗೆ ವರದಿಗಳಾಗಿವೆ.