ಕೋಲ್ಕತ್ತಾ (ಪಶ್ಚಿಮ ಬಂಗಾಳ) : ಚಂದ್ರನತ್ತ ಐತಿಹಾಸಿಕ ಪಯಣ ಆರಂಭಿಸಿರುವ ಇಸ್ರೋ ನಿನ್ನೆಯಷ್ಟೇ ಚಂದ್ರಯಾನ-3 ನೌಕೆಯನ್ನು ಚಂದ್ರನ ಕಕ್ಷೆಗೆ ಯಶಸ್ವಿಯಾಗಿ ಸೇರಿಸಿ ವಿಕ್ರಮ ಮೆರೆದಿದೆ.
ಚಂದ್ರನ ಕಕ್ಷೆ ಸೇರಿಸುವ ಕಾರ್ಯ ಮುಗಿದಿದ್ದು, ಆಗಸ್ಟ್ 6 (ಭಾನುವಾರ) ರಾತ್ರಿ 11 ಗಂಟೆಗೆ ಕಕ್ಷೆ ಇಳಿಸುವ ಯತ್ನ ನಡೆಸಲಾಗುವುದು. ಈ ಮೂಲಕ ಚಂದ್ರನಲ್ಲಿಗೆ ಇನ್ನೂ ಹತ್ತಿರಕ್ಕೆ ತೆರಳಲಿದೆ ಎಂದು ವಿಜ್ಞಾನಿಗಳು ತಿಳಿಸಿದರು. ಈಗ ಅದು ಚಂದ್ರನ ಪರಿಭ್ರಮಣೆ ಶುರು ಮಾಡಿದ್ದು, ಮೂರನೇ ಎರಡರಷ್ಟು ಹತ್ತಿರಕ್ಕೆ ತೆರಳಿದೆ ಎಂದು ಇಸ್ರೋ ತಿಳಿಸಿದೆ.ನಮ್ಮ ರಾಕೆಟ್ಗಳು ಹೆಚ್ಚಿನ ವೇಗದ ನಿಯಂತ್ರಣ ಹೊಂದಿಲ್ಲ. ಅವುಗಳು ಕಕ್ಷೆ ಸೇರುವ ವೇಳೆ ಸ್ಲಿಂಗ್-ಸ್ಲಾಟ್ ವಿಧಾನವನ್ನು ಬಳಸಲಾಗುತ್ತದೆ ಎಂದು ಇಸ್ರೋ ಮಾಜಿ ವಿಜ್ಞಾನಿ ತಪನ್ ಮಿಶ್ರಾ ಹೇಳಿದ್ದಾರೆ.
ಇದೇ ವೇಳೆ ಚಂದ್ರಯಾನ ನೌಕೆಯ ಬಗ್ಗೆ ಮಾತನಾಡಿರುವ ಇಸ್ರೋ ಮಾಜಿ ವಿಜ್ಞಾನಿ ತಪನ್ ಮಿಶ್ರಾ ಅವರು, ನಮ್ಮ ರಾಕೆಟ್ಗಳು (ಉಡಾವಣಾ ವಾಹನಗಳು) ಹೆಚ್ಚು ಶಕ್ತಿಯುತವಾಗಿಲ್ಲ. ಒಮ್ಮೆ ರಾಕೆಟ್ ಭೂಮಿಯಿಂದ ಚಿಮ್ಮಿದರೆ, ನಿಮಿಷಕ್ಕೆ 11.2 ಕಿ.ಮೀ ವೇಗದಲ್ಲಿ ಅದು ಚಲಿಸುತ್ತದೆ. ಅದಕ್ಕೆ ಸಮಾನವಾಗಿ ನಮ್ಮ ಯಂತ್ರಗಳು ಕೆಲಸ ಮಾಡಬೇಕು. ಕಕ್ಷೆ ಸೇರಿಸುವ ವೇಳೆ ಅಷ್ಟು ವೇಗದಲ್ಲಿ ನೌಕೆಯನ್ನು ಸೇರಿಸಲು ಸಾಧ್ಯವಿಲ್ಲದ ಕಾರಣ ‘ಸ್ಲಿಂಗ್-ಸ್ಲಾಟ್ ವಿಧಾನ’ (ಬುಲೆಟ್ನಿಂದ ಗುಂಡು ಹಾರಿಸಿದ ಮಾದರಿ) ನಮ್ಮಲ್ಲಿ ಬಳಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಜುಲೈ 14 ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬಾಹುಬಲಿ ಎಂದೇ ಕರೆಯಲಾಗುವ ಜಿಎಸ್ಎಲ್ವಿ ಮಾರ್ಕ್ 3 ನೌಕೆಯಿಂದ ರೋವರ್ ಹೊತ್ತ ರಾಕೆಟ್ ಉಡಾವಣೆಗೊಂಡಿತ್ತು. ಇದು ಭಾರತ ನಡೆಸುತ್ತಿರುವ ಮೂರನೇ ಚಂದ್ರನ ಪರಿಶೋಧನಾ ಕಾರ್ಯಾಚರಣೆಯಾಗಿದೆ.ಚಂದ್ರನ ಗುರುತ್ವದ ಅನುಭವ: ಚಂದ್ರನ ಕಕ್ಷೆ ಸೇರಿರುವ ಚಂದ್ರಯಾನ-3 ನೌಕೆಯು ಈಗಾಗಲೇ ಅದರ ಗುರುತ್ವಕಾರ್ಷಣೆಯನ್ನು ಪಡೆಯುತ್ತಿದೆ. ಕಕ್ಷೆ ಇಳಿಸುವ ಕಾರ್ಯದ ಬಳಿಕ ಅದು ಮತ್ತಷ್ಟು ಪ್ರಭಾವಕ್ಕೆ ಒಳಗಾಗಲಿದೆ. ಆಗಸ್ಟ್ 23ರಂದು ಚಂದ್ರನ ದಕ್ಷಿಣ ಧ್ರುವದ ಮೇಲ್ಮೈಯಲ್ಲಿ ಸಾಫ್ಟ್ ಲ್ಯಾಂಡಿಂಗ್ ನಡೆಸುವುದೇ ಕೌತುಕ ಎಂದು ಇಸ್ರೋ ಟ್ವೀಟ್ನಲ್ಲಿ ಹಂಚಿಕೊಂಡಿದೆ.
ಯಾರೂ ಇಳಿಯದ ಜಾಗಕ್ಕೆ ಇಸ್ರೋ: ಚಂದ್ರನ ದಕ್ಷಿಣ ಧ್ರುವದಲ್ಲಿ ಈವರೆಗೂ ಯಾವುದೇ ದೇಶಗಳ ನೌಕೆಗಳು ಹೋಗಿಲ್ಲ. ಪ್ರಪ್ರಥಮ ಬಾರಿಗೆ ಇಸ್ರೋ ಈ ಸಾಹಸವನ್ನು ನಡೆಸುತ್ತಿದೆ. ಈ ಹಿಂದೆ ಚಂದ್ರಯಾನ-2 ನೌಕೆಯನ್ನು ದಕ್ಷಿಣ ಧ್ರುವದಲ್ಲಿ ಇಳಿಸುವ ಕೊನೆಯ ಕ್ಷಣಗಳಲ್ಲಿ ನೌಕೆ ಸಂಪರ್ಕ ಕಳೆದುಕೊಂಡು ಚಂದ್ರನ ಮೇಲ್ಮೆಗೆ ಅಪ್ಪಳಿಸಿ ನಾಶವಾಗಿತ್ತು. ಬಾಹ್ಯಾಕಾಶ ಲೋಕದಲ್ಲಿ ಚರಿತ್ರೆ ಸೃಷ್ಟಿಸುವ ಅಂಚಿನಲ್ಲಿ ಇಸ್ರೋ ವಿಫಲವಾಗಿತ್ತು. ಈ ಬಾರಿ ನೌಕೆಯನ್ನು ಯಶಸ್ವಿ ಲ್ಯಾಂಡಿಂಗ್ ವಿಧಾನದ ಬದಲಾಗಿ, ವೈಫಲ್ಯ ಆಧರಿತ ಲ್ಯಾಂಡಿಂಗ್ ವಿಧಾನದ ಮೇಲೆ ಇಳಿಸುವ ತಂತ್ರವನ್ನು ಅಳವಡಿಸಿಕೊಳ್ಳಲಾಗಿದೆ.
ಚಂದ್ರನ ಮೇಲ್ಮೈಯಲ್ಲಿ ಇಸ್ರೋ ತನ್ನ ಬಾಹ್ಯಾಕಾಶ ನೌಕೆಯನ್ನು ಇಳಿಸಿದಲ್ಲಿ ಈ ಸಾಧನೆ ಮಾಡಿದ ಅಮೆರಿಕ, ಚೀನಾ ಮತ್ತು ರಷ್ಯಾದ ನಂತರದ ನಾಲ್ಕನೇ ದೇಶವಾಗಿ ಭಾರತ ಹೊರಹೊಮ್ಮಲಿದೆ. ರೋವರ್ ಇಳಿದ ನಂತರ ಒಂದು ಚಂದ್ರನ ದಿನದಷ್ಟು ಕಾರ್ಯನಿರ್ವಹಿಸುತ್ತದೆ. ಅಂದರೆ ಸುಮಾರು 14 ದಿನಗಳು. ಚಂದ್ರನ ಒಂದು ದಿನವು ಭೂಮಿಯ ಮೇಲೆ 14 ದಿನಗಳಿಗೆ ಸಮಾನವಾಗಿರುತ್ತದೆ.