ಸುದೀಪ್ 46ನೇ ಸಿನಿಮಾಗೆ ಟೈಟಲ್ ಫೈನಲ್ ಆಗಿಲ್ಲ. ಸದ್ಯ ‘Demon War Begins’ ಶೀರ್ಷಿಕೆಯಿಂದ ಹೆಸರಿಸಲಾಗುತ್ತಿದೆ. ಈಗಾಗ್ಲೇ ಸಣ್ಣ ಟೀಸರ್ ಅನಾವರಣಗೊಂಡಿದ್ದು, ದಕ್ಷಿಣ ಭಾರತದಲ್ಲಿ ಸಖತ್ ಟಾಕ್ ಆಗುತ್ತಿದೆ. ತಮ್ಮ ಮುಂದಿನ ಬಹುನಿರೀಕ್ಷಿತ ಸಿನಿಮಾ ಬಗ್ಗೆ ಕಿಚ್ಚ ಸುದೀಪ್ ಮಾತನಾಡಿದ್ದಾರೆ.ಕನ್ನಡ ಮಾತ್ರವಲ್ಲ, ಸೌತ್ ಸಿನಿಮಾ ಇಂಡಸ್ಟ್ರಿಯಲ್ಲೇ ವಿಭಿನ್ನ ಸ್ಟಾರ್ ಡಮ್ ಹೊಂದಿರುವ ನಟ ಕಿಚ್ಚ ಸುದೀಪ್. ‘ವಿಕ್ರಾಂತ್ ರೋಣ’ ಬಳಿಕ ಕಿಚ್ಚ ಅಭಿನಯಸುತ್ತಿರುವ ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿವೆ.ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಮ್ಮ ಮುಂದಿನ ಸಿನಿಮಾ ಕುರಿತು ಹಲವು ಮಾಹಿತಿ ಹಂಚಿಕೊಂಡಿದ್ದಾರೆ.
ಚಿತ್ರತಂಡದಲ್ಲಿ ಹೆಚ್ಚಿನವರು ಕನ್ನಡದವರೇ…: ಈ ಬಗ್ಗೆ ಮಾತನಾಡಿರುವ ಸುದೀಪ್, ”ವರ್ಷದ ಹಿಂದೆ ಸಿನಿಮಾ ಕಥೆ ಕೇಳಿದೆ. ನಿರ್ಮಾಪಕ ಕಲೈಪುಲಿ ಎಸ್ ಅವರು ಸಿನಿಮಾವನ್ನು ತಮಿಳಿನಲ್ಲಿ ಮಾಡಬೇಕು ಎಂದು ಪ್ಲ್ಯಾನ್ ಮಾಡಿಕೊಂಡಿದ್ದರು. ಆದರೆ ಕನ್ನಡದಲ್ಲೇ ಮಾಡಬೇಕೆಂದು ಅಂತಾ ಹೇಳಿ ಕನ್ನಡದಲ್ಲಿ ಸಿನಿಮಾವನ್ನು ಶುರು ಮಾಡಿದ್ವಿ. ಸುದೀಪ್ ಸಿನಿಮಾ ಶೂಟಿಂಗ್ ಚುರುಕು: ಈಗಾಗಲೇ ಚಿತ್ರದ ಅರ್ಧಭಾಗ ಶೂಟಿಂಗ್ ನಡೆದಿದೆ. ಮುಂದಿನ ಹಂತದ ಚಿತ್ರೀಕರಣ ಶುರುವಾಗಿದೆ. ಚೆನ್ನೈನ ಮಹಾಬಲಿಪುರಂನಲ್ಲಿ ಅದ್ಧೂರಿ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗುತ್ತಿದೆ.
ಸಿನಿಮಾದಲ್ಲಿ ಕಲಾವಿದರು, ತಂತ್ರಜ್ಞರು ಸೇರಿದಂತೆ ಲೈಟ್ ಬಾಯ್ವರೆಗೂ ಕನ್ನಡದವರೇ ಕೆಲಸ ಮಾಡುತ್ತಿರುವುದು ಹೆಮ್ಮೆ. ಓರ್ವ ಸ್ಟಾರ್ ಬೇರೆ ಭಾಷೆಯ ಸಿನಿಮಾ ಮಾಡ್ತಾರಂದ್ರೆ ಆ ಭಾಷೆಯ ಕಲಾವಿದರು ಹಾಗೂ ತಂತ್ರಜ್ಞರು ಇರ್ತಾರೆ ಎಂಬ ಮಾತುಗಳು ಕೇಳಿ ಬರುತ್ತೆ. ಆದರೆ ನನ್ನ 46ನೇ ಚಿತ್ರದಲ್ಲಿ ಕನ್ನಡದವರು ಹೆಚ್ಚಾಗಿ ಕೆಲಸ ಮಾಡುತ್ತಿದ್ದಾರೆ” ಎಂದು ತಿಳಿಸಿದರು. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತವಿದ್ದು, ಶೇಖರ್ ಚಂದ್ರ ಛಾಯಾಗ್ರಹಣವಿದೆ.
ಚೆನ್ನೈ, ಪಾಂಡಿಚೇರಿಯಲ್ಲಿ ಶೂಟಿಂಗ್: ಕಳೆದ ಜುಲೈನಲ್ಲಿ ಈ ಕಥೆಯನ್ನು ಓಕೆ ಮಾಡಲಾಗಿತ್ತು. ಬಳಿಕ ಕಥೆ ಮೇಲೆ ಸಾಕಷ್ಟು ವರ್ಕ್ ನಡೆದಿದೆ. ಸಿನಿಮಾಗೆ ಹೀಗೇ ಬರಬೇಕು ಎಂಬ ಪ್ಲ್ಯಾನ್ನೊಂದಿಗೆ ಮಹಾಬಲಿಪುರಂನಲ್ಲಿ ಅದ್ಧೂರಿ ಸೆಟ್ ಹಾಕಿ ಶೂಟಿಂಗ್ ಮಾಡುತ್ತಿದ್ದೇವೆ. ಬಹುಶಃ ಬ್ರೇಕ್ ಕೊಡದೇ ಈ ತಿಂಗಳು ಪೂರ್ತಿ ಚೆನ್ನೈ ಹಾಗೂ ಪಾಂಡಿಚೇರಿಯಲ್ಲಿ ಶೂಟಿಂಗ್ ಮಾಡಲಿದ್ದೇವೆ ಎಂದು ನಟ ತಿಳಿಸಿದರು.
ಡಿಸೆಂಬರ್ನಲ್ಲೇ ಸಿನಿಮಾ ರಿಲೀಸ್: ಅಷ್ಟೇ ಅಲ್ಲ, ಸಿನಿಮಾವನ್ನು 2023ರ ಡಿಸೆಂಬರ್ನಲ್ಲೇ ರಿಲೀಸ್ ಮಾಡಬೇಕು ಎಂಬ ಗುರಿಯೊಂದಿಗೆ ಬ್ರೇಕ್ ಇಲ್ಲದೇ ಶೂಟಿಂಗ್ನಲ್ಲಿ ಭಾಗಿಯಾಗಿದ್ದೇವೆ. ಈ ವರ್ಷ ಏನೇ ಆದರೂ ನನ್ನ 46ನೇ ಸಿನಿಮಾ ಬಿಡುಗಡೆ ಆಗೋದು ಪಕ್ಕಾ ಅಂತಾ ಸುದೀಪ್ ಹೇಳಿದ್ದಾರೆ
ಅಭಿಮಾನಿಗಳ ಪ್ರೀತಿ ಭಯ ಹುಟ್ಟಿಸಿದೆ: ಇತ್ತೀಚಿನ ದಿನಗಳಲ್ಲಿ ಕೆಲ ಅಭಿಮಾನಿಗಳು ತೋರಿಸುವ ಪ್ರೀತಿ ನೋಡಿದ್ರೆ ನನಗೆ ಭಯ ಆಗುತ್ತೆ. ಇತ್ತೀಚೆಗೆ, ಶಿವಮೊಗ್ಗದ ವೈಷ್ಣವಿ ದೀಪು ಎಂಬ ಅಭಿಮಾನಿ ರಕ್ತದಲ್ಲಿ ನನ್ನ ಭಾವಚಿತ್ರ ಬಿಡಿಸಿದ್ದರು. ಅದು ಒಂದು ಕಡೆ ಖುಷಿ ಕೊಟ್ಟರೆ, ಮತ್ತೊಂದೆಡೆ ಭಯ ಕೂಡ ಆಯಿತು. ಅಭಿಮಾನಿಗಳ ಪ್ರೀತಿಗೆ ನಾವು ಬೆಲೆ ಕಟ್ಟಲು ಸಾಧ್ಯವಿಲ್ಲ. ಆದ್ರೆ ಅವರ ಅಭಿಮಾನದಿಂದ ಅವರಿಗೆ ಎಲ್ಲಿ ತೊಂದರೆ ಆಗುತ್ತೆ ಅನ್ನೋ ಭಯ ಶುರುವಾಗಿದೆ. ದಯವಿಟ್ಟು ಯಾರೂ ಕೂಡ ಆ ರೀತಿಯ ಅಭಿಮಾನ ತೋರಿಸಬೇಡಿ ಎಂದು ತಮ್ಮ ಕೋಟ್ಯಂತರ ಅಭಿಮಾನಿಗಳಿಗೆ ಸುದೀಪ್ ಕಿವಿ ಮಾತು ಹೇಳಿದರು.
ವಿ. ಕ್ರಿಯೇಶನ್ಸ್ ಆಯಂಡ್ ಕಿಚ್ಚ ಕ್ರಿಯೇಶನ್ಸ್ ಬ್ಯಾನರ್ನಲ್ಲಿ ಕಿಚ್ಚನ 46ನೇ ಸಿನಿಮಾ ಮೂಡಿ ಬರುತ್ತಿದ್ದು, ವಿಜಯ್ ಕಾರ್ತಿಕೇಯ ಆಯಕ್ಷನ್ ಕಟ್ ಹೇಳುತ್ತಿದ್ದಾರೆ. ಕಲೈಪುಲಿ ಎಸ್. ತನು ನಿರ್ಮಾಣದ ಚಿತ್ರಕ್ಕೆ ಬಿ. ಅಜನೀಶ್ ಲೋಕನಾಥ್ ಸಂಗೀತ ಇರಲಿದೆ. ಎಸ್.ಆರ್. ಗಣೇಶ್ ಬಾಬು ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಪಂಚಭಾಷೆಗಳಲ್ಲಿ ಸಿನಿಮಾ ತೆರೆಕಾಣಲಿದೆ.
ಮುಂದಿನ ವರ್ಷದಿಂದ ವರ್ಷಕ್ಕೆರಡು ಸಿನಿಮಾ: ವರ್ಷಕ್ಕೆ ಎರಡು ಸಿನಿಮಾ ಮಾಡಬೇಕು ಅನ್ನೋ ಆಸೆ ನನಗೂ ಇದೆ. ಹೆಚ್ಚಿನ ಸಿನಿ ಕಾರ್ಮಿಕರಿಗೆ ಕೆಲಸ ಸಿಗುತ್ತೆ ಅನ್ನೋ ಅರಿವಿದೆ. ಆದ್ರೀಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾಗಳು ನಿರ್ಮಾಣ ಆಗುತ್ತಿರುವ ಹಿನ್ನೆಲೆಯುಳ್ಳೆ ಕಂಟೆಂಟ್, ಅದ್ಧೂರಿ ಮೇಕಿಂಗ್ ಕಡೆ ಗಮನ ಹರಿಸಬೇಕು. ಆಗಲೇ ಕನ್ನಡ ಸಿನಿಮಾಗಳ ಅದ್ಧೂರಿತನ ಕಾಣುತ್ತೆ. ಹಾಗಾಗಿ ಸದ್ಯ ವರ್ಷಕ್ಕೆ ಒಂದು ಸಿನಿಮಾ ಮಾಡಲು ಸಾಧ್ಯ. ಈಗಾಗ್ಲೇ ನಾಲ್ಕು ಹೊಸ ಕಥೆಗಳನ್ನು ಫೈನಲ್ ಮಾಡಿದ್ದೇನೆ. ಮುಂದಿನ ವರ್ಷದಿಂದ ವರ್ಷಕ್ಕೆ ಎರಡು ಸಿನಿಮಾ ಆದರೂ ಬಿಡುಗಡೆ ಆಗುವಂತೆ ನಾನು ಕೆಲಸ ಮಾಡುತ್ತೇನೆ, ಅದು ನನ್ನ ಅಭಿಮಾನಿಗಳಿಗೆ ಬಹಳ ಖುಷಿ ಕೊಡುತ್ತೆ ಎಂದು ತಿಳಿಸಿದರು