ನವದೆಹಲಿ: ಆಳವಾದ ಸಾಗರ ಮತ್ತು ಅದರ ಸಂಪನ್ಮೂಲಗಳನ್ನು ಅನ್ವೇಷಿಸುವ ಗುರಿಯನ್ನು ಹೊಂದಿರುವ ಭಾರತದ ಮಹತ್ವಾಕಾಂಕ್ಷೆಯ ಸಮುದ್ರಯಾನ ಯೋಜನೆಯು ಸಬ್‌ಮರ್ಸಿಬಲ್ ವಾಹನದಲ್ಲಿ ಮೂರು ಸಿಬ್ಬಂದಿಯನ್ನು 6000 ಮೀಟರ್ ಆಳಕ್ಕೆ ಕಳುಹಿಸಲು ಸಿದ್ಧವಾಗಿದೆ.
ಕೇಂದ್ರ ಭೂ ವಿಜ್ಞಾನ ಸಚಿವ ಕಿರಣ್ ರಿಜಿಜು ಅವರು ಗುರುವಾರ ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ಈ ಘೋಷಣೆ ಮಾಡಿದ್ದಾರೆ.
ಸಮುದ್ರಯಾನ ಯೋಜನೆ, ಭಾರತದ ಮೊದಲ ಮಾನವಸಹಿತ ಸಾಗರ ಮಿಷನ್ ಆಗಿದ್ದು ಆಳ ಸಮುದ್ರದ ಸಂಪನ್ಮೂಲಗಳನ್ನು ಅಧ್ಯಯನ ಮಾಡಲು ಮತ್ತು ಜೀವವೈವಿಧ್ಯ ಮೌಲ್ಯಮಾಪನಗಳನ್ನು ನಡೆಸಲು ವಿನ್ಯಾಸಗೊಳಿಸಲಾಗಿದೆ. ಸಬ್‌ಮರ್ಸಿಬಲ್ ಅನ್ನು ಕೇವಲ ಪರಿಶೋಧನೆ ಉದ್ದೇಶಗಳಿಗಾಗಿ ಮಾತ್ರ ಬಳಸುವುದರಿಂದ ಮಿಷನ್ ಪರಿಸರ ವ್ಯವಸ್ಥೆಗೆ ಧಕ್ಕೆ ಉಂಟುಮಾದುವುದಿಲ್ಲ ಎನ್ನಲಾಗಿದೆ.
ಯೋಜನೆಯು ದೊಡ್ಡ ಆಳವಾದ ಸಾಗರ ಮಿಷನ್‌ನ ಭಾಗವಾಗಿದೆ, ಇದು ಕೇಂದ್ರದ ನೀಲಿ ಆರ್ಥಿಕ ನೀತಿಯನ್ನು ಬೆಂಬಲಿಸುತ್ತದೆ. ಈ ನೀತಿಯು ದೇಶದ ಆರ್ಥಿಕ ಬೆಳವಣಿಗೆ, ಸುಧಾರಿತ ಜೀವನೋಪಾಯಗಳು, ಉದ್ಯೋಗ ಸೃಷ್ಟಿ ಮತ್ತು ಸಾಗರ ಪರಿಸರ ವ್ಯವಸ್ಥೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಗರ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಗುರಿಯನ್ನು ಹೊಂದಿದೆ.
ಸಮುದ್ರಯಾನ ಯೋಜನೆಯು 2026 ರ ವೇಳೆಗೆ ಸಾಕಾರಗೊಳ್ಳುವ ನಿರೀಕ್ಷೆಯಿದೆ ಮತ್ತು ಇದನ್ನು ಚೆನ್ನೈನಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಷನ್ ಟೆಕ್ನಾಲಜಿ (NIOT) ವಿನ್ಯಾಸಗೊಳಿಸಿದೆ ಮತ್ತು ಅಭಿವೃದ್ಧಿಪಡಿಸುತ್ತಿದೆ. ‘ಮತ್ಸ್ಯ 6000’ ಎಂಬ ಹೆಸರಿನ ಸಬ್‌ಮರ್ಸಿಬಲ್ ವಾಹನವು ಸಾಮಾನ್ಯ ಕಾರ್ಯಾಚರಣೆಯಲ್ಲಿ 12 ಗಂಟೆಗಳ ಮತ್ತು ತುರ್ತು ಸಂದರ್ಭದಲ್ಲಿ 96 ಗಂಟೆಗಳ ಮಾನವ ಸುರಕ್ಷತೆಯನ್ನು ಹೊಂದಿದೆ.
ಸಮುದ್ರಯಾನ ಯೋಜನೆಯನ್ನು ಒಳಗೊಂಡಿರುವ ಡೀಪ್ ಓಷನ್ ಮಿಷನ್‌ನ ವೆಚ್ಚ 4,077 ಕೋಟಿ ರೂಗಳು. ಐದು ವರ್ಷಗಳ ಅವಧಿಯಲ್ಲಿ ವಿವಿಧ ಹಂತಗಳಲ್ಲಿ ಜಾರಿಗೊಳಿಸಲಾಗುವುದು.
ಈ ಮಿಷನ್‌ನೊಂದಿಗೆ, ಯುನೈಟೆಡ್ ಸ್ಟೇಟ್ಸ್, ರಷ್ಯಾ, ಫ್ರಾನ್ಸ್, ಜಪಾನ್ ಮತ್ತು ಚೀನಾ ಸೇರಿದಂತೆ ಆಳ ಸಮುದ್ರ ಮಿಷನ್‌ಗಳನ್ನು ನಡೆಸಲು ವಿಶೇಷ ತಂತ್ರಜ್ಞಾನ ಮತ್ತು ವಾಹನಗಳನ್ನು ಹೊಂದಿರುವ ಗಣ್ಯ ದೇಶಗಳ ಗುಂಪಿಗೆ ಭಾರತವು ಸೇರಿಕೊಳ್ಳಬಹುದು.












