ಮಣಿಪಾಲ: ರೀಲ್ಸ್ ನಲ್ಲಿ ಸ್ಕೂಟರ್ ಸ್ಟಂಟ್ ವೈರಲ್; ಕೇಸು ದಾಖಲಿಸಿದ ಪೊಲೀಸರು

ಮಣಿಪಾಲ: ಯುವಕನೋರ್ವ ರೀಲ್ಸ್ ಗಾಗಿ ಸ್ಕೂಟರನಲ್ಲಿ ಸ್ಟಂಟ್ ಮಾಡಿ ಅದನ್ನು ತಾನೇ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದು, ವೀಡಿಯೋ ವೈರಲ್ ಆದ ಬೆನ್ನಲ್ಲೆ ಪೊಲೀಸರು ಯುವಕನ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.

ಯುವಕನನ್ನು ಪರ್ಕಳ ನಿವಾಸಿ ಅಬೂಬಕ್ಕರ್ ಪುತ್ರ ಆಶಿಕ್ ಎಂದು ಗುರುತಿಸಲಾಗಿದೆ. ಈತ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಗೆ ತೆರಳುವ ರಸ್ತೆಯಲ್ಲಿ ಸ್ಕೂಟಿಯನ್ನು ಯದ್ವಾತದ್ವಾ ಓಡಿಸಿ ಅದನ್ನು ತನ್ನ ಮೊಬೈಲ್ ನಲ್ಲಿ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದ, ಈತನ ಸ್ಟಂಟ್ ಅನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಣಿಪಾಲ ಪೊಲೀಸರ ಮೂಲಕ ಯುವಕನ ಗುರುತನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಂಡಿದ್ದು ಯುವಕನ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.