ಕಾರಿನಲ್ಲಿ ತಿರುಗಾಡುತ್ತಿದ್ದ ಅನ್ಯಕೋಮಿನ ವಿದ್ಯಾರ್ಥಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಹಿಂಜಾವೇ ಕಾರ್ಯಕರ್ತರ ಮೇಲೆ ಕೇಸ್: ಹಿಂಜಾವೇ ಸ್ಪಷ್ಟನೆ

ಕಾರ್ಕಳ: ಕಾರಿನಲ್ಲಿ ತಿರುಗಾಡುತ್ತಿದ್ದ ಅನ್ಯಕೋಮಿನ ಜೋಡಿಗಳನ್ನು ತಡೆದು ಪೊಲೀಸರಿಗೆ ಮಾಹಿತಿ ನೀಡಿದ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರನ್ನೇ ಪೊಲೀಸರು ಬಂಧಿಸಿದ ಘಟನೆ ಭಾನುವಾರ ಕಾರ್ಕಳದಲ್ಲಿ ನಡೆದಿದೆ.

ಪ್ರಕರಣದ ವಿವರ:

ಮಂಗಳೂರಿನ ಪ್ರತಿಷ್ಠಿತ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಅದೇ ಕಾಲೇಜಿನ ಮಹಿಳಾ ಪ್ರೊಫೆಸರ್‌ ಒಂದೇ ಕಾರಿನಲ್ಲಿ ಅನುಮಾನಸ್ಪದವಾಗಿ ತಿರುಗಾಡುತ್ತಿರುವ ಬಗ್ಗೆ ಹಿಂದೂ ಕಾರ್ಯಕರ್ತರಿಗೆ ಮಾಹಿತಿ ಲಭಿಸಿತ್ತು. ಕಾರನ್ನು ಹಿಂಬಾಲಿಸಿದ ಕಾರ್ಯಕರ್ತರಿಗೆ ಕಾರಿನಿಂದ ಕಿರುಚಾಟ ಕೇಳಿದ್ದು ಕಾರನ್ನು ತಡೆದು ಪೊಲೀಸರಿಗೆ ಮಾಹಿತಿ ನೀಡಿದ್ಧಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ನೈತಿಕ ಪೊಲೀಸ್‌ ಗಿರಿ ಆರೋಪದಲ್ಲಿ ಐವರು ಕಾರ್ಯಕರ್ತರನ್ನೇ ಬಂಧಿಸಿದ್ದಾರೆ.

ಆರೋಪಿತರನ್ನು ಸಂತೋಷ್ ನಂದಳಿಕೆ, ಕಾರ್ತಿಕ್ ಪೂಜಾರಿ, ಸುನೀಲ್ ಮೂಲ್ಯ ಮಿಯ್ಯಾರು, ಸಂದೀಪ್ ಪೂಜಾರಿ ಮಿಯ್ಯಾರು, ಸುಜಿತ್ ಎಂದು ಗುರುತಿಸಲಾಗಿದೆ. ಕಾರಿನಲ್ಲಿ ಕೇರಳ ಮೂಲದ ಅನ್ಯಕೋಮಿನ ಯುವಕರು ಹಾಗೂ ಒಬ್ಬಳು ಮಂಗಳೂರಿನ ಯುವತಿ ಹಾಗೂ ಇನ್ನೊಬ್ಬಳು ಹಾಸನ ಮೂಲದ ಯುವತಿ ಇದ್ದಳೆನ್ನಲಾಗಿದೆ.

ಘಟನಾ ಸ್ಥಳಕ್ಕೆ ಡಿವೈಎಸ್ಪಿ ಅರವಿಂದ ಕಲ್ಲಗುಜ್ಜೆ, ಪೊಲೀಸ್ ವೃತ್ತ ನಿರೀಕ್ಷಕ ನಾಗರಾಜ್, ನಗರ ಠಾಣಾಧಿಕಾರಿ ಸಂದೀಪ್ ಶೆಟ್ಟಿ, ಗ್ರಾಮಾಂತರ ಠಾಣಾಧಿಕಾರಿ ದಿಲೀಪ್ ತೆರಳಿ ಐವರು ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಘಟನೆಗೆ ಸಂಂಧಪಟ್ಟಂತೆ ಹಿಂದೂ ಕಾರ್ಯಕರ್ತನನ್ನು ಬಂಧಿಸಿದ ಕಾರಣ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಹಿಂದು ಜಾಗರಣಾ ವೇದಿಕೆ ಸ್ಪಷ್ಟನೆ:

ಅನ್ಯಕೋಮಿನ ಜೋಡಿಗಳು ಒಂದೇ ಕಾರಿನಲ್ಲಿ ಮಂಗಳೂರಿನಿಂದ ಕಲಶಕ್ಕೆ ತೆರಳಿ ಸಂಜೆ ಕಾರ್ಕಳದ ಕುಂಟಲ್ಪಾಡಿ ಮಾರ್ಗವಾಗಿ ಮಂಗಳೂರಿಗೆ ತೆರಳುತ್ತಿದ್ದರು. ಈ ವೇಳೆ ಮಾಳ ಎಸ್ ಕೆ ಬಾರ್ಡರ್ ಬಳಿಯಿಂದ ಇವರ ಕಾರನ್ನು ಹಿಂಬಾಲಿಸಿ ಬಂದ ಕಾರ್ಯಕರ್ತರು ಕುಂಟಲ್ಪಾಡಿ ಎಂಬಲ್ಲಿ ತಡೆದಾಗ ಕಾರಿನ ಒಳಗಡೆಯಿಂದ ಬೊಬ್ಬೆ, ಕಿರುಚಾಟ ಕೇಳಿ ಬಂದಿದೆ. ಹೀಗಾಗಿ ಕಾರನ್ನು ಪರೀಶಿಲಿಸಿದಾಗ ಯುವತಿಯರು ಅರೆಬರೆ ಬಟ್ಟೆಯಲ್ಲಿ ಕಂಡುಬಂದಿದ್ಧಾರೆ. ಕಾರಿನ ಗ್ಲಾಸ್‌ ಹಾಗೂ ಬಾಗಿಲು ತೆಗೆಯದಿದ್ದ ಕಾರಣ ಅನುಮಾನಗೊಂಡು ಘಟನೆ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾರೆ.

ಆದರೆ ಪೊಲೀಸರು ನೈತಿಕ ಪೊಲೀಸ್‌ ಗಿರಿ ಆರೋಪದಲ್ಲಿ ಕಾರ್ಯಕರ್ತರನ್ನೇ ಬಂಧಿಸುವುದು ಯಾವ ನ್ಯಾಯ ಎಂದು ಹಿಂದು ಜಾಗರಣಾ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ.

ನೈತಿಕ ಪೊಲೀಸ್‌ ಗಿರಿ ನಡೆಸಿದ್ದೇ ಆದರೆ ಅವರೇ ಪೊಲೀಸರಿಗೆ ಮಾಹಿತಿ ನೀಡುತ್ತಾರಾ? ಪೊಲೀಸರು ಬರುವಾಗ ಸ್ಥಳದಲ್ಲಿ ಇರುತ್ತಾರಾ ಎಂದು ಪ್ರಶ್ನಿಸಿದ್ದಾರೆ. ಲವ್ ಜಿಹಾದ್ ನಂತಹ ಘಟನೆಗಳು ಪದೇ ಪದೇ ನಡೆಯುತ್ತಿದ್ದರೂ ಈ ರೀತಿ ತಿರುಗಾಡುವ ಜೋಡಿಗಳನ್ನು ಪ್ರಶ್ನಿಸಿದರೆ ಹಿಂದೂ ಕಾರ್ಯಕರ್ತರನ್ನೇ ಬಂಧಿಸುತ್ತಾರೆ ಎಂದು ಹಿಂದು ಜಾಗರಣಾ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ. ಪೊಲೀಸರು ಕಾನೂನನ್ನು ದುರುಪಯೋಗ ಪಡಿಸುತ್ತಿದ್ದಾರೆ. ಹಿಂದೂ ಕಾರ್ಯಕರ್ತರ ವಿರುದ್ಧ ಸುಖಾ ಸುಮ್ಮನೆ ಕೇಸ್‌ ಹಾಕೋದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಜಾಮೀನು ಮೇರೆಗೆ ಬಿಡುಗಡೆಗೊಳಿಸಿದ್ದಾರೆ.