ನಂದಿನಿ ಹಾಲು ಹಾಗೂ ಮೊಸರಿನ ದರದಲ್ಲಿ ನಾಳೆಯಿಂದ ಏರಿಕೆ

ಬೆಂಗಳೂರು:ನಾಳೆಯಿಂದಲೇ ನೂತನ ದರ ಜಾರಿಗೆ ಬರಲಿದೆ ಎಂದು ಕೆಎಂಎಫ್​ ಪ್ರಕಟಣೆಯಲ್ಲಿ ತಿಳಿಸಿದೆ. ಕೆಎಂಎಫ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದ ಭೀಮಾನಾಯ್ಕ ಕೆಎಂಎಫ್ ಹಾಲಿನ ದರವನ್ನು ಕನಿಷ್ಠ 5 ರೂ. ಏರಿಕೆ ಮಾಡುವುದಾಗಿ ಸುಳಿವು ನೀಡಿದ್ದರು. ಜುಲೈ 21ರಂದು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಾಲಿನ ದರವನ್ನು 3 ರೂಪಾಯಿಗೆ ಏರಿಕೆ ಮಾಡಲು ನಿರ್ಧಾರ ಕೈಗೊಳ್ಳಲಾಗಿತ್ತು.
ನಂದಿನಿ ಹಾಲು ಪ್ರತಿ ಲೀಟರ್​ಗೆ ಹಾಗೂ ಮೊಸರಿನ ದರ ಪ್ರತಿ ಕೆಜಿಗೆ 3 ರೂಪಾಯಿ ಹಚ್ಚಳ ಮಾಡಲಾಗಿದೆ.ರಾಜ್ಯದಲ್ಲಿ ಹೈನೋದ್ಯಮನ್ನು ಉತ್ತೇಜಿಸಿ ಪ್ರೋತ್ಸಾಹಿಸಲು ಹೆಚ್ಚುವರಿ ಮಾಡಿರುವ ಮಾರಾಟ ದರವನ್ನು ರೈತರಿಗೆ ವರ್ಗಾಯಿಸಲಾಗುವುದು ಎಂದು ಕೆಎಂಎಫ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಹಿನ್ನಲೆಯಲ್ಲಿ ಗ್ರಾಹಕರು, ರೈತರನ್ನು ದೃಷ್ಟಿಯಲ್ಲಿಟ್ಟುಕೊಂಡು 3 ರೂ. ಹೆಚ್ಚಳ ಮಾಡುವ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಕೆಎಂಎಫ್ ಅಧಿಕಾರಿಗಳು ತಿಳಿಸಿದ್ದಾರೆ. 2022ನೇ ಸಾಲಿನಲ್ಲಿ ಸತತವಾಗಿ ರಾಜ್ಯದಲ್ಲಿ ಸುರಿದ ಮಳೆಯಿಂದಾಗಿ ಮೇವಿನ ತೊಂದರೆ. ಜಾನುವಾರುಗಳಲ್ಲಿ ಉಂಟಾದ ಚರ್ಮಗಂಟು ರೋಗ, ಹಾಲಿನ ಮಾರಾಟ ದರ ಹೆಚ್ಚಳದ ವಿಳಂಬ, ಪಶು ನಿರ್ವಹಣಾ ವೆಚ್ಚ ಹಾಗೂ ಇತ್ಯಾದಿಗಳಿಂದ ರಾಜ್ಯ ವ್ಯಾಪ್ತಿಯಲ್ಲಿ ಸುಮಾರು 35 ಸಾವಿರಕ್ಕೂ ಹೆಚ್ಚು ಹೈನುಗಾರರು ಹೈನುಗಾರಿಕೆಯಿಂದ ವಿಮುಖರಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ನೂತನ ದರದಲ್ಲಿ ನಂದಿನಿ ಹಾಲು: ಟೋಲ್ಡ್ ಮಿಲ್ಕ್ – ಹಿಂದಿನ ದರ 39 ರೂ – ಪರಿಷ್ಕೃತ ದರ 42 ರೂ, ಹೋಮೋಜೆನೈಸ್ಡ್ ಹಿಂದಿನ ದರ 40 ರೂ – ಪರಿಷ್ಕೃತ ದರ 43 ರೂ, ಹಸುವಿನ ಹಾಲು ( ಹಸಿರು ಪೊಟ್ಟಣ ) ಹಿಂದಿನ ದರ 43 ರೂ – ಪರಿಷ್ಕೃತ ದರ 46 ರೂ, ಶುಭಂ ಹಾಲು – ಹಿಂದಿನ ದರ 45 ರೂ – ಇಂದಿನ ದರ 48 ರೂ, ಮೊಸರು ಪ್ರತಿ ಕೆಜಿ – ಹಿಂದಿನ ದರ 47 ರೂ- ಈಗಿನ ದರ 50 ರೂ, ಮಜ್ಜಿಗೆ 200 ಎಂ.ಎಲ್ – ಹಿಂದಿನ ದರ 8 ರೂ – ಪರಿಷ್ಕೃತ 9 ರೂ ಆಗಿದೆ ಎಂದು ಕೆಎಂಎಫ್​ ತಿಳಿಸಿದೆ.

ಸದ್ಯ ಜಿಲ್ಲಾ ಹಾಲು ಒಕ್ಕೂಟಗಳಲ್ಲಿ ಹಾಲಿನ ಶೇಖರಣೆ ಕಡಿಮೆಯಾಗಿ, ಪ್ರಸ್ತುತ ದಿನವಹಿ ಅಂದಾಜು 10 ಲಕ್ಷ ಲೀಟರ್ ಹಾಲು ಶೇಖರಣೆ ಕಡಿಮೆಯಾಗಿದೆ. ಈ ಸಂದರ್ಭದಲ್ಲಿ ಹಾಲು ಉತ್ಪಾದಕರನ್ನು ಉತ್ತೇಜಿಸಲು ಉತ್ತಮ ಹಾಲು ಖರೀದಿ ದರ ನೀಡುವುದು ಅತ್ಯವಶ್ಯವಾಗಿದೆ ಎಂದು ತಿಳಿಸಿದ್ದಾರೆ. ಹೆಚ್ಚಾಗುತ್ತಿರುವ ಹಾಲು ಉತ್ಪಾದನಾ, ಹಾಲು ಸಂಸ್ಕರಣಾ ವೆಚ್ಚಗಳು ಮತ್ತು ರಾಜ್ಯದಲ್ಲಿ ಹೈನೋದ್ಯಮನ್ನು ಉತ್ತೇಜಿಸಿ ಪ್ರೋತ್ಸಾಹಿಸಲು ಹೆಚ್ಚುವರಿ ಮಾಡಿರುವ ಮಾರಾಟ ದರವನ್ನು ರೈತರಿಗೆ ವರ್ಗಾಹಿಸಲಾಗುವುದು ಎಂದು ಕೆಎಂಎಫ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.