ನವದೆಹಲಿ: ಹಣಕಾಸು ವರ್ಷ 2022-23ಕ್ಕೆ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸಲು ಜುಲೈ 31 ಕೊನೆ ದಿನವಾಗಿದ್ದು ಮತ್ತು ಗಡು ವಿಸ್ತರಣೆಯಾಗುವ ಬಗ್ಗೆ ಕೇಂದ್ರ ಸರ್ಕಾರದಿಂದ ಯಾವುದೇ ಸುಳಿವು ನೀಡಲಾಗಿಲ್ಲ.
ಆದಾಯ ತೆರಿಗೆ ಇಲಾಖೆಯ ಮಾಹಿತಿ ಪ್ರಕಾರ, ಇದುವರೆಗೆ 6 ಕೋಟಿಗೂ ಹೆಚ್ಚು ಐಟಿಆರ್ ದಾಖಲಾಗಿದೆ. ಭಾನುವಾರದಂದು ಸರಿ ಸುಮಾರು 27 ಲಕ್ಷ ಐಟಿಆರ್ ಗಳನ್ನು ಫೈಲ್ ಮಾಡಲಾಗಿದೆ.
ಐಟಿಆರ್ ಫೈಲಿಂಗ್, ತೆರಿಗೆ ಪಾವತಿಗಳು ಮತ್ತು ಸಂಬಂಧಿತ ಸೇವೆಗಳಲ್ಲಿ ತೆರಿಗೆದಾರರಿಗೆ ಸಹಾಯ ಮಾಡಲು ಅದರ ಹೆಲ್ಪ್ಡೆಸ್ಕ್ 24×7 ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದೆ. ಕರೆಗಳು, ಲೈವ್ ಚಾಟ್ಗಳು, ವೆಬ್ಎಕ್ಸ್ ಸೆಷನ್ಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಬೆಂಬಲವನ್ನು ಒದಗಿಸಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.
ಆಗಸ್ಟ್ 1 ಮತ್ತು ಡಿಸೆಂಬರ್ 31 ರ ನಡುವೆ ರಿಟರ್ನ್ ಸಲ್ಲಿಸಿದರೆ ಗರಿಷ್ಠ 5000 ರೂ ದಂಡವನ್ನು ವಿಧಿಸಲಾಗುತ್ತದೆ. ಆದಾಗ್ಯೂ, ಹಣಕಾಸಿನ ವರ್ಷದಲ್ಲಿ ಒಟ್ಟು ಆದಾಯ 5 ಲಕ್ಷ ರೂ. ಕ್ಕಿಂತ ಕಡಿಮೆ ಇರುವ ವ್ಯಕ್ತಿಗಳಿಗೆ ಗರಿಷ್ಠ ದಂಡವು 1000 ರೂ ಆಗಿದೆ. ಡಿಸೆಂಬರ್ 31 ರ ನಂತರ ಸಲ್ಲಿಸುವ ಐಟಿಆರ್ಗಳಿಗೆ 10,000 ರೂ ದಂಡ ವಿಧಿಸಲಾಗುತ್ತದೆ.