ಕುಂದಾಪುರ: ಕೊಲ್ಲೂರಿನ ಅರಶಿನಗುಂಡಿ ಜಲಪಾತ ವೀಕ್ಷಣೆಗೆಂದು ಹೋಗಿದ್ದ ಶರತ್ ಎಂಬ ವ್ಯಕ್ತಿ ಕಾಲು ಜಾರಿ ಬಿದ್ದು ನೀರು ಪಾಲಾಗಿದ್ದು ಆತನ ಮೃತ ದೇಹ ವಾರದ ಬಳಿಕ ಪತ್ತೆಯಾಗಿದೆ.
ಜುಲೈ 23ರಂದು ಕೊಲ್ಲೂರು ಸಮೀಪದ ಅರಣ್ಯ ಪ್ರದೇಶದಲ್ಲಿರುವ ಅರಶಿನಗುಂಡಿ ಜಲಪಾತ ನೋಡಲು ಭದ್ರಾವತಿ 23 ವರ್ಷದ ಶರತ್ ಕುಮಾರ್ ಸ್ನೇಹಿತನೊಂದಿಗೆ ಹೋಗಿದ್ದರು. ಜಲಪಾತದ ಪಕ್ಕದ ಬಂಡೆ ಕಲ್ಲಿನ ಮೇಲೆ ನಿಂತಿದ್ದು ಅವರು ಜಾರಿ ನೀರಿಗೆ ಬಿದ್ದಿದ್ದರು. ಶರತ್ ಹುಡುಕಾಟಕ್ಕೆ ಹಲವು ತಂಡಗಳು ವಾರಗಳ ಕಾಲ ಶ್ರಮ ವಹಿಸಿದ್ದವು. ಆದರೆ ತೀವ್ರ ಮಳೆ ಮತ್ತು ನೀರಿನ ರಭಸದ ಕಾರಣದಿಂದ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿತ್ತು.
ವಾರದ ಬಳಿಕ ಬಿದ್ದ ಜಾಗದಿಂದ ಹತ್ತು ಮೀಟರ್ ದೂರದಲ್ಲಿ ಶವ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಕೊಲ್ಲೂರು ಪೊಲೀಸರು, ರಾಜ್ಯ ವಿಪತ್ತು ನಿರ್ವಹಣ ತಂಡ (ಎಸ್ಡಿಆರ್ಎಫ್), ಅರಣ್ಯ ಇಲಾಖೆ ಸಿಬಂದಿ, ಅಗ್ನಿ ಶಾಮಕ ದಳದ ಸಿಬಂದಿ, ಸ್ಥಳೀಯರು, ಶರತ್ ಅವರ ಸ್ನೇಹಿತರು, ಸಂಬಂಧಿಕರು ಪ್ರತೀ ದಿನ ಹಗಲಿಡೀ ನಿರಂತರ ಹುಡುಕಾಟ ನಡೆಸಿದ್ದರು.