ಮಂಗಳೂರು: ಕುಡ್ಲಗಿಪ್ ಕುಂದಾಪ್ರದರ್ ಬಳಗದಿಂದ ವಿಶ್ವ ಕುಂದಾಪುರ ಕನ್ನಡ ದಿನಾಚರಣೆ

ಮಂಗಳೂರು: ದಿನಕ್ಕೆ ಕಡಿಮೆ ಎಂದರೂ ಹನ್ನೆರಡು ಗಂಟೆ ಕೆಲಸ ಮಾಡುವ ಶ್ರಮಜೀವಿಗಳೆಂದರೆ ಅದು ಕುಂದಾಪುರದವರು. ಪಂಚನದಿಗಳು ಹರಿಯುವ ನಾಡಾದ ಕುಂದಾಪುರದಿಂದ ಬಂದ ಜನರು ಕುಂದಾಪ್ರ ಹಬ್ಬವನ್ನು ಮಂಗಳೂರಿನಲ್ಲಿ ಆಚರಿಸುತ್ತಿದ್ದಾರೆ ಎಂದರೆ ಅದು ಕೇವಲ ಇಲ್ಲಿರುವ ಎಲ್ಲಾ ಕುಂದಾಪ್ರದವರನ್ನು ಒಟ್ಟುಗೂಡಿಸುವ ಉದ್ದೇಶವೇ ಹೊರತು ಇನ್ನಾವುದೇ ಸ್ವಾರ್ಥ ಅಲ್ಲ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಸಹ ಕುಲಾಧಿಪತಿ ಮೊಳಹಳ್ಳಿ ಡಾ. ಶಾಂತರಾಮ ಶೆಟ್ಟಿ ಅಭಿಪ್ರಾಯಪಟ್ಟರು.

ಅರ್ಕುಳದ ಮನಸ್ವಿನಿ ಆಸ್ಪತ್ರೆಯಲ್ಲಿ ನಡೆದ ‘ಕುಡ್ಲಗಿಪ್ ಕುಂದಾಪ್ರದರ್’ ವಾಟ್ಸಾಪ್ ಬಳಗ ಆಯೋಜಿಸಿದ್ದ ವಿಶ್ವ ಕುಂದಾಪುರ ಕನ್ನಡ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡ ಕುಂದಾಪ್ರ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸಿಟಿ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಕೈಲ್ಕೆರೆ ಭಾಸ್ಕರ ಶೆಟ್ಟಿ ಮಾತನಾಡಿ, ನೆರೆಮನೆ ಅಥವಾ ರಾತ್ರಿಯಲ್ಲಾಗಲಿ ಎಲ್ಲೇ ಆಗಲಿ ನಂಬಬಹುದಾದ ಜನರೆಂದರೆ ಅದು ಕುಂದಾಪ್ರದವರು. ನಂಬಿದವರ ಕೈಬಿಡದ ಹೃದಯವಂತರು ಎಂದರು.

ಬಂಟ್ಸ್ ಹಾಸ್ಟೆಲ್ ನ ಶ್ರೀರಾಮಕೃಷ್ಣ ಕಾಲೇಜಿನ ಪ್ರಾಂಶುಪಾಲ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಆಂಗ್ಲರು ಶಾರ್ಟ್ ಹ್ಯಾಂಡ್ ಅನ್ನು ಬಳಕೆಗೆ ತರುವ ಮೊದಲೇ ನಾವು ಕುಂದಾಪುರದವರು ಕುಂದಾಪುರ ಕನ್ನಡದಲ್ಲಿ ಮಾತನಾಡುವ ಶಾರ್ಟ್ ಹ್ಯಾಂಡ್ ಬಳಕೆಗೆ ತಂದವರು. ನಮ್ಮ ಭಾಷೆಗೆ ನಾವೇ ಹಗೆಯಾಗಬಾರದು. ನಮ್ಮ ಭಾಷೆಯನ್ನು ಪ್ರೀತಿಸುವ, ಹೆಮ್ಮೆಯಿಂದ ಬಳಸಿ ಉಳಿಸುವ ಎಂದರು.

ಸಿಎ ಶಾಂತರಾಮ್ ಶೆಟ್ಟಿ ಮತ್ತು ಸಿಎ.ಎಸ್.ಎಸ್.ನಾಯಕ್, ರೋ. ಶೇಖರ್ ಶೆಟ್ಟಿ, ಸಂತೋಷ್ ಶೆಟ್ಟಿ ACE ಬಾಂಡ್ ಉಪಸ್ಥಿತರಿದ್ದರು.

ಮಮತಾ ಜಿ ಐತಾಳ ಪ್ರಾರ್ಥಿಸಿದರು. ದಯಾನಂದ ಶೆಟ್ಟಿ ಸ್ವಾಗತಿಸಿದರು. ಡಾ.ಅಣ್ಣಯ್ಯ ಕುಲಾಲ್ ಪ್ರಸ್ರಾಪಿಸಿದರು. ಮನಸ್ವಿನಿ ಆಸ್ಪತ್ರೆಯ ನಿರ್ದೇಶಕ ಡಾ. ರವೀಶ್ ತುಂಗ ವಂದಿಸಿದರು.

ಮಾತಿನ ಮಂಟಪದಲ್ಲಿ ಕರುಣಾಕರ ಬಳ್ಕೂರು, ಡಾ.ಪ್ರತಿಭಾ ರೈ ಮೊದಲಾದವರು ಮಾತನಾಡಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು.

ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ ಬರವಣಿಗೆಯ ವಿವಿಧ ಸ್ಪರ್ಧೆಯಲ್ಲಿ ವಿಜೇತರ ವಿವರವನ್ನು ನಾಗರಾಜ್ ತಲ್ಲಂಜೆ ಹಾಗೂ ಮಾಲಾ ಶೆಟ್ಟಿ ಮತ್ತಿತರರ ಉಸ್ತುವಾರಿಯಲ್ಲಿ‌ ನಡೆದ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರ ವಿವರವನ್ನು ಆದರ್ಶ್ ಶೆಟ್ಟಿ ನೀಡಿದರು.

ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಸಹಪ್ರಯೋಜಕ ಚೇರ್ ಸ್ಟುಡಿಯೋದ ಮಾಲಕ ರಾಘವೇಂದ್ರ ನೆಲ್ಲಿಕಟ್ಟೆ , ಭಾಷಿ ಅಲ್ಲಾ ಬದ್ಕ್ ಸಂಯೋಜನಾ ಸಮಿತಿ ಸದಸ್ಯರು ಮತ್ತು ಕುಡ್ಲಗಿಪ್ ಕುಂದಾಪ್ರದರ್ ಮತ್ತು ಕುಂದಾಪ್ರ ಕನ್ನಡದ ಅಭಿಮಾನಿಗಳು, ವಿವಿಧ ಸ್ಪರ್ಧೆಗಳ ಬಹುಮಾನದ ಪಾಯೋಜಕರು ಉಪಸ್ಥಿತರಿದ್ದರು.

ಮಂಗಳೂರಿನಲ್ಲಿ ನೆಲೆಸಿರುವ ಕುಂದಾಪುರ ಕನ್ನಡದ ಜನರ ಒಂದು ಕನಸಿನ ಕಾರ್ಯಕ್ರಮವಾಗಿದ್ದು, ಪ್ರಥಮ ಕಾರ್ಯಕ್ರಮ ವಿನೂತನವಾಗಿ ಮೂಡಿಬಂದಿದ್ದು, ಮುಂದಿನ ಬಾರಿಯೂ ಕೂಡ ಈ ಕಾರ್ಯಕ್ರಮವನ್ನು ಇನ್ನೂ ಅದ್ದೂರಿಯಾಗಿ ನಡೆಸುವ ಸಂಕಲ್ಪವನ್ನು ಮಾಡಲಾಯಿತು.

ಆರ್.ಜೆ ನಯನ ಮತ್ತು ಆರ್.ಜೆ ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು. ಶ್ರೀಪತಿ ಆಚಾರ್ಯರು ವಂದಿಸಿದರು.