*ಉಡುಪಿ Xpress ವಿಶೇಷ
ಹಲವು ವರ್ಷಗಳ ಹಿಂದಿನ ಕನ್ನಡ ಶಾಲೆಗಳ ಚಿತ್ರಣ ಪ್ರಸ್ತುತ ಸಂಪೂರ್ಣ ಬದಲಾಗಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ಕನ್ನಡ ಶಾಲೆ ಪ್ರೇಮಿಗಳು ಕನ್ನಡ ಶಾಲೆ ಕಥೆ ಹೇಳುವ ‘ಕಲ್ಪವೃಕ್ಷ’ ಎಂಬ ಸೊಗಸಾದ ಕಿರುಚಿತ್ರ ನಿರ್ಮಿಸಿದ್ದಾರೆ. ಸದ್ಯ ಯೂಟ್ಯೂಬ್‌ನಲ್ಲಿ ಚಿತ್ರ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತಗೊಂಡಿದೆ.
ಕನ್ನಡ ಶಾಲೆಗಳನ್ನು ಉಳಿಸಿ, ಬೆಳೆಸಬೇಕು ಎಂಬ ಉದ್ದೇಶದೊಂದಿಗೆ ಪೂರ್ಣಪ್ರಜ್ಞಾ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕಿ ಡಾ.ಪ್ರಜ್ಞಾ ಮಾರ್ಪಳ್ಳಿ ಅವರ ಪರಿಕಲ್ಪನೆಯೊಂದಿಗೆ ಮೂಡಿ ಬಂದಿರುವ ಚಿತ್ರ ಇದಾಗಿದೆ. 15:29 ನಿಮಿಷ ಅವಧಿಯ ಈ ಚಿತ್ರ ಕನ್ನಡ ಶಾಲೆ ಬಾಲ್ಯದ ನೆನಪುಗಳನ್ನು ಕಾಡುವಂತೆ ಮಾಡುತ್ತದೆ. ಚಿತ್ರವು ತಾಂತ್ರಿಕವಾಗಿ ಉತ್ತಮ ಗುಣಮಟ್ಟದಿಂದ ಕೂಡಿದೆ. ಮೇಘನಾ ಮೇಗರೋಳಿ ಅವರ ಹಿನ್ನಲೆ ಧ್ವನಿ, ನಿರೂಪಣೆ ಶೈಲಿ ಅದ್ಬುತವಾಗಿದೆ. ಶಾಲೆ ಪರಿಸರ, ಆವರಣ, ಮಕ್ಕಳ ಕಲಿಕೆ, ಶಾಲೆಯ ಕೊಠಡಿಯನ್ನು ಸುಂದರ ಫ್ರೇಮ್‌ನಲ್ಲಿ ಸೊಗಸಾಗಿ ಚಿತ್ರಿಕರಿಸಿದ್ದಾರೆ ಅಜಿತ್, ಅನಂತ್‌ರಾಜ್ ವಿಕಾಸ್, ಕೃತಿಕ್‌ರಾಜ್ ಸಂಕಲನ, ಗಿರೀಶ್ ತಂತ್ರಿ ಧ್ವನಿ ಸಂಕಲನ ಕಾರ್ಯ ವ್ಯವಸ್ಥಿತವಾಗಿ ನಿರ್ವಹಿಸಿದ್ದಾರೆ.
ಚಿತ್ರದಲ್ಲಿ ಮಾತೃಭಾಷೆ ಶಿಕ್ಷಣದ ಅವಶ್ಯಕತೆ ಬಗ್ಗೆ ಹೇಳಲಾಗಿದೆ. ಪ್ರಸ್ತುತ ಖಾಸಗೀ ಶಿಕ್ಷಣ ವ್ಯವಸ್ಥೆ – ಕನ್ನಡ ಶಾಲೆಗಳ ಹಿಂದಿನ ಚಿತ್ರಣದ ಅವಲೋಕನವಿದೆ. ಕನ್ನಡ ಶಾಲೆಗಳಲ್ಲಿ ಆಟ-ಪಾಠ, ತುಂಟಾಟದ ಚಿತ್ರಣ ಎಲ್ಲರ ಬಾಲ್ಯವನ್ನು ನೆನಪಿಸುವಂತೆ ಮಾಡಿದೆ. ಚಿತ್ರದಲ್ಲಿ ಗಾಳಿಪಠ, ಜೋಕಾಲಿ, ಗೋಲಿ, ಚುಕುಬುಕು ರೈಲು, ಕೆರೆ-ದಡ, ಕಪ್ಪೆ ಓಟ ಮೊದಲಾದ ಗ್ರಾಮೀಣ ಕ್ರೀಡೆಗಳ ದೃಶ್ಯ ಮನಸೂರೆಗೊಳ್ಳುವಂತೆ ಮಾಡಿದೆ. ಈ ಕಿರುಚಿತ್ರ ನೋಡಲು ಲಿಂಕ್ ಇಲ್ಲಿದೆ: