116 ನೇ ಸಂಸ್ಥಾಪನಾ ದಿನ ಆಚರಿಸಿದ ಬ್ಯಾಂಕ್ ಆಫ್ ಬರೋಡಾ

ಮಂಗಳೂರು: ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ ಗುರುವಾರ ತನ್ನ 116ನೇ ಸಂಸ್ಥಾಪನಾ ದಿನವನ್ನು ಆಚರಿಸಿಕೊಂಡಿತು. ಉರ್ವಾದಲ್ಲಿರುವ ಡಾ. ಅಂಬೇಡ್ಕರ್ ಭವನದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕಾರಿ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್ ಮಾತನಾಡಿ, ಸ್ವ-ಸಹಾಯ ಸಂಘಗಳ ಮೂಲಕ ಬ್ಯಾಂಕ್ ಗ್ರಾಹಕರ ಮನೆ ಬಾಗಿಲಿಗೆ ತಲುಪಿದೆ. ಮನೆ, ಉತ್ತಮ ಆಸ್ಪತ್ರೆಗಳ ಸೇವೆ ಸೇರಿದಂತೆ ಎಲ್ಲಾ ಬೇಡಿಕೆಗಳಿಗೆ ಸೂಕ್ತ ಸ್ಪಂದನೆ ಬ್ಯಾಂಕಿನಿಂದ ದೊರೆಯುವಂತಾಗಲಿ ಎಂದರು.

ಬ್ಯಾಂಕ್ ಆಫ್ ಬರೋಡಾದ ಮಹಾಪ್ರಬಂಧಕಿ ಹಾಗೂ ಮಂಗಳೂರು ವಲಯದ ಮುಖ್ಯಸ್ಥೆ ಗಾಯತ್ರಿ ಆರ್. ಮಾತನಾಡಿ, 1908 ರಲ್ಲಿ ಮಹಾರಾಜಾ ಮೂನೇ ಸಯ್ಯಾಜಿರಾವ್ ಗಾಯಕ್‌ವಾಡ್ ಅವರಿಂದ ಸ್ಥಾಪಿಸಲ್ಪಟ್ಟು 17 ದೇಶಗಳು ಸೇರಿದಂತೆ 8200 ಶಾಖೆಗಳನ್ನು ಹೊಂದಿರುವ ವಿಶಾಲ ಹಾಗೂ ಬಲಿಷ್ಠ ಬ್ಯಾಂಕ್ ಆಗಿ ಬೆಳೆದಿದೆ.ವಿಜಯ ಬ್ಯಾಂಕ್ ಹಾಗೂ ದೇನಾ ಬ್ಯಾಂಕ್‌ಗಳನ್ನೂ ಈಗ ಬ್ಯಾಂಕ್ ಆಫ್ ಬರೋಡಾ ಒಳಗೊಂಡಿದೆ. ಪ್ರಸ್ತುತ ಬ್ಯಾಂಕ್ 116 ನೇ ಸಂಸ್ಥಾಪನಾ ದಿನವನ್ನು ಆಚರಿಸುತ್ತಿದ್ದು, ಈ ವರ್ಷ ಸಾಧಿಸು, ಸಹಯೋಗ ನೀಡು ಹಾಗೂ ಉತ್ಕೃಷ್ಟನಾಗು ಎನ್ನುವ ವಿಷಯವನ್ನು ಆರಿಸಿಕೊಂಡಿದೆ ಎಂದರು.

ಬ್ಯಾಂಕ್ ಆಫ್ ಬರೋಡಾ ಮಾಜಿ ಕಾರ್ಯ ನಿರ್ವಾಹಕ ನಿರ್ದೇಶಕ ಕೆ.ಆರ್. ಶೆಣೈ ಮುಖ್ಯ ಮಾತನಾಡುತ್ತಾ, ಬ್ಯಾಂಕ್ ಆಫ್ ಬರೋಡಾದಲ್ಲಿನ ತಮ್ಮ ಅನುಭವ ವ್ಯಕ್ತಪಡಿಸಿ, ಬ್ಯಾಂಕ್ ಆಫ್ ಬರೋಡಾ ಸಧೃಡವಾಗಿದ್ದು, ಇದರಲ್ಲಿ ವಿಲೀನಗೊಂಡಿರುವ ಇತರ ಬ್ಯಾಂಕ್‌ಗಳ ಸಿಬ್ಬಂದಿ ಅದೃಷ್ಟವಂತರು ಎಂದರು.

ಬ್ಯಾಂಕ್ ಸಿಎಸ್‌ಆರ್ ಭಾಗವಾಗಿ ಮಂಗಳ ಸೇವಾ ಸಮಿತಿ ತೊಕ್ಕೊಟ್ಟು, ಸ್ನೇಹದೀಪ ಬಿಜೈ, ಸ್ವಾಮಿ ಶ್ರದ್ಧಾನಂದ ಸೇವಾಶ್ರಮಗಳಿಗೆ ನೆರವು ನೀಡಲಾಯಿತು.

ಬ್ಯಾಂಕ್‌ನ ವಲಯ ಉಪಮುಖ್ಯಸ್ಥ ರಮೇಶ್ ಕಾನಡೆ, ಡಿಜಿಎಂ ನೆಟ್‌ವರ್ಕ್ ಅಶ್ವಿನಿ ಕುಮಾರ್ ಉಪಸ್ಥಿತರಿದ್ದರು.

ಉಪ ವಲಯ ಮುಖ್ಯಸ್ಥ ರಮೇಶ್ ಕಾನಡೆ ಮತ್ತು ಡಿಜಿಎಂ-ನೆಟ್ವರ್ಕ್ ಅಶ್ವಿನಿ ಕುಮಾರ್ ಅವರು ಧ್ವಜಾರೋಹಣ ಮಾಡಿದರು.

ಪ್ರಾದೇಶಿಕ ವ್ಯವಸ್ಥಾಪಕ ಎಂ.ವಿ.ಎಸ್. ಪ್ರಸಾದ್ ಸ್ವಾಗತಿಸಿದರು. ಅನಿತಾ ನಿರೂಪಿಸಿದರು. ಪ್ರಾದೇಶಿಕ ಕಚೇರಿ ಉಪ ವಲಯ ವ್ಯವಸ್ಥಾಪಕ ರಾಜೇಶ್ ವಂದಿಸಿದರು.