ಲಕ್ನೋ: ವಾರಣಾಸಿ ನ್ಯಾಯಾಲಯವು ಶುಕ್ರವಾರ ಜ್ಞಾನವಾಪಿ ಮಸೀದಿ ಆವರಣದ ವೈಜ್ಞಾನಿಕ ಸಮೀಕ್ಷೆ ನಡೆಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್ಐ) ಅನುಮತಿ ನೀಡಿದೆ. ಆದಾಗ್ಯೂ, ಶಿವಲಿಂಗವನ್ನು ಹೋಲುವ ರಚನೆ ಕಂಡುಬಂದಿರುವ ವುಝುಖಾನಾ (ಸ್ನಾನದ ಸ್ಥಳ) ಅನ್ನು ಸಮೀಕ್ಷೆಯ ವ್ಯಾಪ್ತಿಯಿಂದ ಹೊರಗಿಡಬೇಕು ಎಂದು ನ್ಯಾಯಾಲಯ ಹೇಳಿದೆ.
ಇಡೀ ಜ್ಞಾನವಾಪಿ ಮಸೀದಿ ಆವರಣದ ವೈಜ್ಞಾನಿಕ ಸಮೀಕ್ಷೆಗಾಗಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನಿರ್ದೇಶನ ನೀಡುವಂತೆ ಕೋರಿ ಹಿಂದೂ ಪಕ್ಷದವರು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ. ಜುಲೈ 14 ರಂದು ನ್ಯಾಯಾಲಯವು ಈ ವಿಷಯದ ಬಗ್ಗೆ ವಾದವನ್ನು ಪೂರ್ಣಗೊಳಿಸಿತು.
ಪ್ರಕರಣದಲ್ಲಿ ಹಿಂದೂ ಪಕ್ಷವನ್ನು ಪ್ರತಿನಿಧಿಸುತ್ತಿರುವ ವಿಷ್ಣು ಶಂಕರ್ ಜೈನ್ ಅವರು ಸುದ್ದಿ ಸಂಸ್ಥೆ ಎಎನ್ಐ ಜೊತೆ ಮಾತನಾಡಿ, “ನನ್ನ ಅರ್ಜಿಯನ್ನು ಅನುಮೋದಿಸಲಾಗಿದೆ ಎಂದು ನನಗೆ ತಿಳಿಸಲಾಗಿದೆ ಮತ್ತು ಮೊಹರು ಮಾಡಲಾದ ವಾಜು ಟ್ಯಾಂಕ್ ಅನ್ನು ಹೊರತುಪಡಿಸಿ ಜ್ಞಾನವಾಪಿ ಮಸೀದಿ ಸಂಕೀರ್ಣದ ಎಎಸ್ಐ ಸಮೀಕ್ಷೆಯನ್ನು ನಡೆಸಲು ನ್ಯಾಯಾಲಯವು ಸೂಚಿಸಿದೆ” ಎಂದು ಹೇಳಿದ್ದಾರೆ.
ಜ್ಞಾನವಾಪಿ ಮಸೀದಿ ಸಮಿತಿಯು ಈ ನಿರ್ಧಾರದ ಬಗ್ಗೆ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದೆ ಮತ್ತು ಮುಂದಿನ ವಾರ ಅಲಹಾಬಾದ್ ಹೈಕೋರ್ಟ್ಗೆ ಹೋಗುವುದಾಗಿ ಹೇಳಿದೆ. ಹಿಂದೂ ಪಕ್ಷಗಳ ವಾದವನ್ನು ತಿರಸ್ಕರಿಸಿರುವ ಸಮಿತಿಯು ಸರ್ವೆಗೆ ವಿರೋಧ ವ್ಯಕ್ತಪಡಿಸಿದೆ ಮತ್ತು ಔರಂಗಜೇಬ್ ಕ್ರೂರಿಯಾಗಿರಲೂ ಇಲ್ಲ, ಆತ ಆದಿ ವಿಶ್ವೇಶ್ವರ ದೇವಸ್ಥಾನವನ್ನು ಹಾಳುಗೆಡವಲೂ ಇಲ್ಲ ಎಂದು ವಾದಿಸಿದೆ. ಮಸೀದಿಯೊಳಗೆ ಇರವುದು ಶಿವಲಿಂಗವಲ್ಲ ಅದು ಕಾರಂಜಿ ಎಂದು ಕೂಡಾ ಅದು ವಾದಿಸಿದೆ.
ಜ್ಞಾನವಾಪಿ ಮಸೀದಿಯ ಆವರಣದಲ್ಲಿರುವ ಶೃಂಗಾರ್ ಗೌರಿ, ಗಣೇಶ, ಹನುಮಾನ್ ಮತ್ತು ನಂದಿ ದೇವರ ವಿಗ್ರಹಗಳನ್ನು ಪ್ರತಿನಿತ್ಯ ಪೂಜಿಸಲು ಅನುಮತಿ ಕೋರಿ ಮತ್ತೊಂದು ಈ ವರ್ಷ ಮೇ ತಿಂಗಳಲ್ಲಿ ಐವರು ಮಹಿಳೆಯರು ಅರ್ಜಿ ಸಲ್ಲಿಸಿದ್ದರು.