ಪ್ರತಿ ಸೆಕೆಂಡಿಗೆ Social media ಗೆ 5 ಜನರ ಸೇರ್ಪಡೆ: 500 ಕೋಟಿ ದಾಟಿದಬಳಕೆದಾರರ ಸಂಖ್ಯೆ

ಹೈದರಾಬಾದ್:ವಿಶ್ವದ ಜನಸಂಖ್ಯೆಯ ಶೇ 60ಕ್ಕೂ ಹೆಚ್ಚು ಜನ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ ಎಂದು ಇತ್ತೀಚಿನ ಅಧ್ಯಯನವೊಂದು ಬಹಿರಂಗಪಡಿಸಿದೆ. ವಿಶ್ವದ ಜನಸಂಖ್ಯೆ ಇತ್ತೀಚೆಗೆ 800 ಕೋಟಿ ಗಡಿಯನ್ನು ದಾಟಿದೆ. ಇದರಲ್ಲಿ ಜುಲೈ 2023 ರ ಹೊತ್ತಿಗೆ ಸುಮಾರು 500 ಕೋಟಿ ಜನ (4.88 ಶತಕೋಟಿ ಬಳಕೆದಾರರ ಗುರುತುಗಳು) ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸಕ್ರಿಯರಾಗಿದ್ದಾರೆ ಎಂದು ಅಂದಾಜಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಂಖ್ಯೆ 3.7 ರಷ್ಟು ಹೆಚ್ಚಾಗಿದೆ. ವಿಶ್ವದಲ್ಲಿ ಇಂಟರ್ನೆಟ್ ಸೇವೆಗಳು ಸುಲಭವಾಗಿ ಲಭ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮಗಳ ಬಳಕೆ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ಹೆಚ್ಚಾಗಿದೆ.ವಿಶ್ವದಲ್ಲಿ ದಿನದಿಂದ ದಿನಕ್ಕೆ ಇಂಟರ್ನೆಟ್​ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗೆಯೇ ಸಾಮಾಜಿಕ ಮಾಧ್ಯಮ ಬಳಕೆದಾರರ ಸಂಖ್ಯೆಯೂ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ.

ಜಿಟಲ್ ಸಲಹಾ ಸಂಸ್ಥೆ ಕೆಪಿಯೋಸ್ ನಡೆಸಿದ ಅಧ್ಯಯನದ ಪ್ರಕಾರ, ಪ್ರತಿ 10 ಇಂಟರ್ನೆಟ್ ಬಳಕೆದಾರರಲ್ಲಿ ಒಂಬತ್ತು ಜನ ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತಾರೆ. ಪ್ರತಿ ಸೆಕೆಂಡಿಗೆ 5.5 ಜನ ಹೊಸದಾಗಿ ಸಾಮಾಜಿಕ ಮಾಧ್ಯಮಕ್ಕೆ ಸೇರುತ್ತಿದ್ದಾರೆ. ಕಳೆದ ವರ್ಷವೊಂದರಲ್ಲೇ 17.3 ಕೋಟಿ ಜನ ಹೊಸದಾಗಿ ಸಾಮಾಜಿಕ ಮಾಧ್ಯಮಕ್ಕೆ ಸೇರಿದ್ದಾರೆ ಎಂದು ಅಂದಾಜಿಸಲಾಗಿದೆ.

ಅತಿ ಹೆಚ್ಚು ಬಳಸಲಾಗುವ ಸಾಮಾಜಿಕ ಮಾಧ್ಯಮ ಪ್ಲಾಟ್​ಫಾರ್ಮ್​ಗಳೆಂದರೆ- WhatsApp, Instagram ಮತ್ತು Facebook. ಇವೆಲ್ಲವೂ ಮೆಟಾ ಕಂಪನಿಯ ಒಡೆತನಕ್ಕೆ ಸೇರಿವೆ. ಚೀನಾದ WeChat, TikTok ಮತ್ತು Douins ಇವು ನಂತರದ ಸ್ಥಾನದಲ್ಲಿವೆ. ಟ್ವಿಟರ್, ಮೆಸೆಂಜರ್ ಮತ್ತು ಟೆಲಿಗ್ರಾಮ್ ಅಪ್ಲಿಕೇಶನ್‌ಗಳ ಬಳಕೆಯೂ ಗಮನಾರ್ಹವಾಗಿದೆ ಎಂದು ಇತ್ತೀಚಿನ ವರದಿ ಬಹಿರಂಗಪಡಿಸಿದೆ.

ಸಾಮಾಜಿಕ ಮಾಧ್ಯಮವು ಡಿಜಿಟಲ್ ತಂತ್ರಜ್ಞಾನವಾಗಿದ್ದು, ಇದರ ವರ್ಚುವಲ್ ನೆಟ್‌ವರ್ಕ್‌ಗಳು ಮತ್ತು ಸಮುದಾಯಗಳ ಮೂಲಕ ಪಠ್ಯ ಮತ್ತು ಮಲ್ಟಿಮೀಡಿಯಾವನ್ನು ಹಂಚಿಕೊಳ್ಳಬಹುದು. ಫೇಸ್‌ಬುಕ್, ಯೂಟ್ಯೂಬ್, ವಾಟ್ಸಾಪ್, ಇನ್‌ಸ್ಟಾಗ್ರಾಮ್ ಮತ್ತು ವೀಚಾಟ್ ಅತಿ ದೊಡ್ಡ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಾಗಿವೆ.

ಆದಾಗ್ಯೂ, ನಕಲಿ ಖಾತೆಗಳ ಕಾರಣ, ಪ್ರತಿ ಖಾತೆಯನ್ನು ಒಬ್ಬ ವ್ಯಕ್ತಿಯೆಂದು ಗುರುತಿಸಲಾಗುವುದಿಲ್ಲ. ಹಾಗೆ ಮಾಡಿದರೆ, ಇತ್ತೀಚಿನ ವರದಿಯ ಪ್ರಕಾರ ಈ ಸಂಖ್ಯೆ ವಿಶ್ವದ ಜನಸಂಖ್ಯೆಗಿಂತ ಹೆಚ್ಚಾಗಿರುತ್ತದೆ. ಹಾಗಾಗಿಯೇ ಅವರನ್ನು ಸಾಮಾಜಿಕ ಮಾಧ್ಯಮ ಬಳಕೆದಾರರ ‘ಐಡೆಂಟಿಟಿ’ ಎಂದು ಕರೆಯಲಾಗುತ್ತದೆ ಎಂದು ಕೆಪಿಯೋಸ್ ಸ್ಪಷ್ಟಪಡಿಸಿದೆ.

ಪೂರ್ವ ಮತ್ತು ಮಧ್ಯ ಆಫ್ರಿಕಾದಲ್ಲಿ 11 ಜನರಲ್ಲಿ ಒಬ್ಬರು ಮಾತ್ರ ಸಾಮಾಜಿಕ ಮಾಧ್ಯಮವನ್ನು ಬಳಸುತ್ತಾರೆ. ಭಾರತದಲ್ಲಿ, ಪ್ರತಿ ಮೂವರಲ್ಲಿ ಒಬ್ಬರು ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿರುವುದು ವಿಶೇಷ. ಸಾಮಾಜಿಕ ಮಾಧ್ಯಮದಲ್ಲಿ ಕಳೆದ ಸಮಯ ನೋಡುವುದಾದರೆ- ಪ್ರತಿಯೊಬ್ಬ ಬಳಕೆದಾರರು ದಿನಕ್ಕೆ ಸುಮಾರು 2.26 ಗಂಟೆಗಳಷ್ಟು ಸಮಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಕಳೆಯುತ್ತಾರೆ ಎಂದು ತಿಳಿದುಬಂದಿದೆ. ಬ್ರೆಜಿಲಿಯನ್ನರು ಅತಿ ಹೆಚ್ಚು ಅಂದರೆ ದಿನಕ್ಕೆ 3.49 ಗಂಟೆಗಳ ಕಾಲ ಅವನ್ನು ಬಳಸಿದರೆ, ಜಪಾನ್​ನಲ್ಲಿ ಈ ಸಮಯವು ಒಂದು ಗಂಟೆಗಿಂತ ಕಡಿಮೆಯಾಗಿದೆ ಎಂದು ತಿಳಿದುಬಂದಿದೆ.