ಸದನದಿಂದ ಅಮಾನತು ಶಿಕ್ಷೆ ನೀಡಿದ ಸಭಾಧ್ಯಕ್ಷರಿಗೆ ಪತ್ರ ಬರೆದ ಕಾರ್ಕಳ ಶಾಸಕ ಸುನಿಲ್ ಕುಮಾರ್

ಬೆಂಗಳೂರು: ಸರ್ಕಾರದ ನಡೆಯನ್ನು ಪ್ರಶ್ನಿಸಿದ ಬಿಜೆಪಿ ನಾಯಕರನ್ನು ಅಮಾನತುಗೊಳಿಸಿದ ಸಭಾಧ್ಯಕ್ಷ ಯುಟಿ ಖಾದರ್ ಅವರಿಗೆ ಕಾರ್ಕಳ ಶಾಸಕ ಸುನಿಲ್ ಕುಮಾರ್ ಪತ್ರ ಬರೆದಿದ್ದಾರೆ.

ಶ್ರೀ ಯು.ಟಿ.ಖಾದರ್
ಸನ್ಮಾನ್ಯ ಸಭಾಧ್ಯಕ್ಷರು
ವಿಧಾನಸಭೆ

ವಿಷಯ: ಏಕಪಕ್ಷೀಯವಾಗಿ ಅಮಾನತು ಶಿಕ್ಷೆಕೊಟ್ಟದ್ದಕ್ಕಾಗಿ ಧನ್ಯವಾದ ಸಮರ್ಪಣೆ

ಮಾನ್ಯ ಸಭಾಧ್ಯಕ್ಷರೇ ,

ನಿಮ್ಮಿಂದ ನಾವು ಇಂಥದೊಂದು ನಡೆಯನ್ನು ನಿರೀಕ್ಷಿಸಿರಲಿಲ್ಲ. ಸಭಾಧ್ಯಕ್ಷ ಪೀಠದ ಮೇಲೆ ಕುಳಿತು ಎಲ್ಲರನ್ನೂ ಸಮಾನರೆಂದು ಪರಿಗಣಿಸಿ ಪ್ರಜಾಪ್ರಭುತ್ವದ ಮೌಲ್ಯವನ್ನು ಖಾದರ್ ಸಮರ್ಥವಾಗಿ ಎತ್ತಿ ಹಿಡಿಯಬಹುದೆಂಬ ನಮ್ಮ‌ನಿರೀಕ್ಷೆ ಇಂದು ಉಸುಕಿನ ಸೌಧದಂತೆ ಕುಸಿದು ಹೋಗಿದೆ. ರಾಜ್ಯದ ಶ್ರೇಷ್ಠ ಸ್ಪೀಕರ್ ಎಂದು ಮಾದರಿ ಹೆಜ್ಜೆ ಬಿಟ್ಟು ಹೋದ ದಿ. ವೈಕುಂಠ ಬಾಳಿಗರ ಜಿಲ್ಲೆಯಿಂದ ಬಂದ ನೀವು ಅವರದ್ದೇ ಮಾರ್ಗದಲ್ಲಿ ನಡೆಯಬಹುದೆಂದು ವೈಯಕ್ತಿಕವಾಗಿ ನಾನು ಭಾವಿಸಿದ್ದೆ. ಆದರೆ ನೀವು ನಮ್ಮೆಲ್ಲರ ನಂಬಿಕೆಯನ್ನು ಹುಸಿಗೊಳಿಸಿ ವಿಪಕ್ಷಗಳ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ನಡೆಸಿದಿರಿ. ನನ್ನನ್ನು ಸೇರಿ ಹತ್ತು ಜನರನ್ನು ಅಮಾನತುಗೊಳಿಸುವ ಮೂಲಕ‌ ಕಾಂಗ್ರೆಸ್ ನಾಯಕರ ಎದೆಯಲ್ಲಿ ಅಂತಸ್ಥವಾದ ಹಿಟ್ಲರ್ ನನ್ನು ವಿಧಾನಸಭೆಯ ಮೂಲಕ ಪ್ರದರ್ಶನಕ್ಕೆ ಇಟ್ಟಿರಿ ಎನ್ನದೇ ವಿಧಿ ಇಲ್ಲ.

ಮಾನ್ಯ ಖಾದರ್ ಅವರೇ ನಾನು ಹಾಗೂ ನೀವು ಹೆಚ್ಚು ಕಡಿಮೆ ಒಂದೇ ವರ್ಷ ವಿಧಾನಸಭೆಯನ್ನು ಪ್ರವೇಶ ಮಾಡಿದ್ದೆವು. 2004ರಿಂದ ಇಲ್ಲಿಯವರೆಗೆ ನಾನು ಸದನದಲ್ಲಿ ಹೇಗೆ ನಡೆದುಕೊಂಡಿದ್ದೇನೆ ಎಂಬುದಕ್ಕೆ ನೀವು ಕೂಡಾ ಸಾಕ್ಷಿಯಾಗಿದ್ದೀರಿ. ಅನಾರೋಗ್ಯ ಹಾಗೂ ಅತಿ ತುರ್ತು ಸಂದರ್ಭವನ್ನು ಹೊರತುಪಡಿಸಿದರೆ ನಾನು ಸದನಕ್ಕೆ ಗೈರಾದ ದಿನಗಳೇ ಇಲ್ಲ. ವಿಧಾನಸಭೆಯ ಕಾರ್ಯ‌ ಕಲಾಪಗಳಲ್ಲಿ ಭಾಗಿಯಾಗುವುದು ಪ್ರತಿಯೊಬ್ಬ ಶಾಸಕನ ಕರ್ತವ್ಯ ಎಂದು ಭಾವಿಸಿ ಅದರಂತೆ ನಡೆದುಕೊಂಡವರು ನಾವು. ಆದರೆ ನಿಮ್ಮ ಪಕ್ಷದ ಅಜೆಂಡಾವನ್ನು‌ ಪೋಷಿಸುವುದಕ್ಕಾಗಿ ನಾವು ನಮ್ಮ ಶ್ರದ್ಧಾಕೇಂದ್ರ ಪ್ರವೇಶಿಸುವುದಕ್ಕೆ ನಿರ್ಬಂಧ ಹಾಕಿ‌ಬಿಟ್ಟಿರಲ್ಲ ! ಇದಕ್ಕಾಗಿ ನಿಮಗೊಂದು ದೀರ್ಘದಂಡ ಪ್ರಣಾಮ, ಅನಂತಾನಂಥ ಧನ್ಯವಾದ.

ಮಾನ್ಯ ಸಭಾಧ್ಯಕ್ಷರೇ ಇಂದು ನೀವು ನಡೆದುಕೊಂಡ ರೀತಿ ಆ ಪೀಠಕ್ಕೆ ಒಪ್ಪುವಂತೆ ಇತ್ತೇ ? ಆತ್ಮವಂಚನೆ ಮಾಡಿಕೊಳ್ಳದೇ ಹೇಳಿ. ಮನುಷ್ಯ ಈ‌‌ ಪ್ರಪಂಚದಲ್ಲಿ ಯಾರಿಗೆ ಬೇಕಾದರೂ ವಂಚಿಸಬಹುದು, ಆದರೆ ತನ್ನನ್ನು ತಾನೇ ವಂಚಿಸಿಕೊಳ್ಳಲು ಸಾಧ್ಯವಿಲ್ಲ ತಾನೇ ? ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ಬಜೆಟ್ ಅಧಿವೇಶನದಲ್ಲೇ ಶಾಸಕರನ್ನು ಅಮಾನತು ಮಾಡುವ‌ ಮೂಲಕ ವಿಧಾನಮಂಡಲದ ಇತಿಹಾಸದಲ್ಲೇ‌ ನೀವೊಬ್ಬ ಸರ್ವಾಧಿಕಾರಿ ಸ್ಪೀಕರ್ ಎಂದು ಸಾಬೀತುಪಡಿಸಿದಿರಿ. ಇನ್ನು ನಿಮ್ಮಿಂದ ನಾವೇನು‌ ನಿರೀಕ್ಷಿಸಲು ಸಾಧ್ಯ ? ಈ ಸರ್ಕಾರದ ಮೊದಲ ದಿನದ‌ ಅಧಿವೇಶನದಲ್ಲಿ ವಿಪಕ್ಷ ನಾಯಕರು ಧರಣಿ ನಡೆಸುತ್ತಿರುವಾಗಲೇ ಪ್ರಶ್ನೋತ್ತರ ಕಲಾಪ‌ ನಡೆಸಿದಾಗಲೇ ನೀವು ಪಕ್ಷಪಾತಿಯಾಗಿ ನಡೆದುಕೊಳ್ಳುವ ವಾಸನೆ ನಮಗೆಲ್ಲ ಬಡಿದಿತ್ತು. ಆದರೆ ನೀವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸೋನಿಯಾ ಗಾಂಧಿಯವರ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಔತಣ ಕೂಟದಲ್ಲಿ ಭಾಗಿಯಾದಿರಿ. ಅಯೋಗ್ಯರಿಗೆ ರಾಜಾತಿಥ್ಯ ನೀಡಲು ಐಎಎಸ್ ಅಧಿಕಾರಿಗಳನ್ನು ನಿಯೋಜನೆ ಮಾಡಿದ ಸರ್ಕಾರದ ಕ್ರಮವನ್ನು ಪ್ರಶ್ನಿಸಿದ ನಮ್ಮ ಹೋರಾಟ ಹತ್ತಿಕ್ಕಿ ವಿಧಾನಸಭೆ ಕಲಾಪವನ್ನು ಕಾಂಗ್ರೆಸ್ ಕಲಾಪವನ್ನಾಗಿ ಪರಿವರ್ತಿಸಿದಿರಿ. ಇಂಥ ಸಂವಿಧಾನಬಾಹಿರ, ಕಲಾಪ‌ ನಿಯಮ ವಿರೋಧಿಯಾದ ನಿಮಗೆ ಅಭಿನಂದನೆ ಸಲ್ಲಿಸಲೇಬೇಕಲ್ಲವೇ?

ಖಾದರ್ ಅವರೇ ಸ್ಪೀಕರ್ ಸ್ಥಾನ ಆಳುವರ ಆಸೆಗೆ ಗೋಣು ಆಡಿಸುವ ಅಡ್ಡೆಯಲ್ಲ. ಅದಕ್ಕೊಂದು ಘನ ಇತಿಹಾಸವಿದೆ. ಪರಂಪರೆ ಇದೆ.‌ ಇಂದು ನೀವು ತೋರಿದ ಸರ್ವಾಧಿಕಾರಿ ಧೋರಣೆ ನಿಮಗೆ ಕ್ಷಣಿಕ ಆನಂದ ನೀಡಿರಬಹುದು. ಪಕ್ಷದ ಹೈಕಮಾಂಡ್ ಮೆಚ್ಚುವಂತೆ ನಡೆದೆ ಎಂದು ಉಬ್ಬಿಸಬಹುದು. ಆದರೆ ನೆನಪಿಡಿ, ನೀವು ಕರ್ನಾಟಕದ ಉಜ್ವಲ ಸಂಸದೀಯ ಪರಂಪರೆಗೆ ಈ‌ ಮೂಲಕ ಕಳಂಕ ಅಂಟಿಸಿದಿರಿ. ನಮ್ಮನ್ನು ಅಮಾನತು ಮಾಡಿದ ಮಾತ್ರಕ್ಕೆ ನಮ್ಮ ಧ್ವನಿಯನ್ನು ಅಡಗಿಸಿಬಿಟ್ಟೆ ಎಂಬ ಭ್ರಮೆ ಬೇಡ. ಎಲ್ಲರಿಗೂ ಅವರವರ ಸರದಿ ಕಾಯುತ್ತಿರುತ್ತದೆ. ಆಷಾಡದ ಬಳಿಕ ಶ್ರಾವಣ ಬಂದೇ ಬರುತ್ತದೆ. ಕಾಯಬೇಕಷ್ಟೆ

ಇಂತಿ‌ ನಿಮ್ಮ ವಿಶ್ವಾಸಿ,
ವಿ ಸುನಿಲ್ ಕುಮಾರ್

ಎಂದು ಬರೆದುಕೊಂಡಿದ್ದಾರೆ.