ಅಮೇರಿಕಾದ ಪ್ರತಿಷ್ಠಿತ ನೋವಾ ಸಯನ್ಸ್ ಪಬ್ಲಿಷರ್ಸ್ ನಲ್ಲಿ ಜ್ಞಾನಸುಧಾ ಕಾಲೇಜಿನ ಡಾ. ಪ್ರಜ್ವಲ್ ಕುಲಾಲ್ ಅವರ ಸಂಶೋಧನಾ ಲೇಖನ ಪ್ರಕಟ

ಕಾರ್ಕಳ : ಕಾರ್ಕಳ ಜ್ಞಾನಸುಧಾ ಪದವಿ ಪೂರ್ವಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಪ್ರಜ್ವಲ್ ಕುಲಾಲ್‌ ಅವರ ಸಂಶೋಧನಾ ಲೇಖನವು ಅಮೇರಿಕಾದ ಪ್ರತಿಷ್ಠಿತ ನೋವಾ ಸಯನ್ಸ್ ಪಬ್ಲಿಷರ್ಸ್ನಲ್ಲಿ ಪ್ರಕಟಗೊಂಡಿದೆ.

ನೀರಿನ ಶುದ್ಧೀಕರಣ ಕ್ಷೇತ್ರದಲ್ಲಿ ಸಸ್ಯಜನಕ ಪಾಲಿಸ್ಯಾಕರೈಡ್‌ಗಳನ್ನು ನ್ಯಾನೋ ಕಾಂಪೊಸಿಟ್‌ಗಳಾಗಿ ಪರಿಣಾಮಕಾರಿಯಾಗಿ ಬಳಸುವ ಸಂಶೋಧನೆಯನ್ನು ಗುರುತಿಸಿ 2022ರಲ್ಲಿ ಅಮೇರಿಕಾದ ಪ್ರತಿಷ್ಠಿತ ನೋವಾ ಸಯನ್ಸ್ ಪಬ್ಲಿಷರ್ಸ್ ತಮ್ಮ ವಿಜ್ಞಾನ ಸಂಬಂಧಿ ಸಂಪಾದನಾ ಕೃತಿಯ ಒಂದು ಅಧ್ಯಾಯಕ್ಕೆ
ಲೇಖನಾ ಪ್ರಬಂಧವನ್ನು ಇವರಿಂದ ಅಹ್ವಾನಿಸಿದ್ದರು.

ಇರಾನಿನ ಊರ್ಮಿಯಾ ವಿವಿಯ ಕೆಮಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಪ್ರೋ. ಮಹಮ್ಮದ್
ಸಿರೌಸಾಝರ್‌ರವರ ಪ್ರಧಾನ ಸಂಪಾದಕತ್ವದಲ್ಲಿ ರೂಪುಗೊಂಡ ಕೃತಿಯಾದ ‘ನ್ಯಾನೋ ಕಾಂಪೋಸಿಟ್ ಹೈಡ್ರೋಜೆಲ್ಸ್ ಆಂಡ್ ದೆಯರ್ ಎಮರ್ಜಿಂಗ್ ಅಪ್ಲಿಕೇಶನ್ಸ್’ ಇದರ 13ನೇ ಅಧ್ಯಾಯವಾಗಿ ಪ್ರಜ್ವಲ್‌ರವರ ಪ್ರಬಂಧವು ಪ್ರಕಟಗೊಂಡಿರುವುದು ಹೆಮ್ಮೆಯ ಸಂಗತಿ. ಈ ಅಧ್ಯಾಯದಲ್ಲಿ ಸಸ್ಯಜನಕ ಪಾಲಿಸ್ಯಾಕರೈಡ್‌ಗಳನ್ನು ನ್ಯಾನೋ ಕಾಂಪೊಸಿಟ್ ಹೈಡ್ರೋಜೆಲ್ ಗಳಾಗಿ ಪರಿವರ್ತಿಸಿ ನೀರನ್ನು ಕಲುಷಿತ ಗೊಳಿಸುವ ವಿಷಕಾರಿ ಪಾದರಸದ ಅಯಾನುಗಳನ್ನು ಬೇರ್ಪಡಿಸಿ ನೀರನ್ನು ಶುದ್ಧೀಕರಣಗೊಳಿಸುವ ಹಲವಾರು ಪ್ರಯೋಗಗಳನ್ನು ಲೇಕಖರು ಸಂಪೂರ್ಣವಾಗಿ ವಿವರಿಸಿದ್ದಾರೆ.

ಈ ಸಂಪಾದನಾ ಕೃತಿಯಲ್ಲಿ ವಿಶ್ವದ ವಿವಿಧ ದೇಶಗಳ ಪರಿಣತ ರಸಾಯನ ಶಾಸ್ತ್ರ ಸಂಶೋಧಕರಿಂದ ಪ್ರಕಟಗೊಂಡ ಒಟ್ಟು 14 ಅಧ್ಯಾಯಗಳಲ್ಲಿ ಭಾರತದ ಮೂವರ ಅಧ್ಯಾಯವು ಸೇರ್ಪಡೆಗೊಂಡಿರುತ್ತದೆ. ಆ
ಮೂವರಲ್ಲಿ ಡಾ. ಪ್ರಜ್ವಲ್‌ರವರು ಓರ್ವರಾಗಿದ್ದಾರೆ. ಡಾ. ಪ್ರಜ್ವಲ್ ಕುಲಾಲ್ ಮಂಗಳೂರು ವಿವಿಯ
ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ವಿಶಾಲಾಕ್ಷಿ ಬಿ.ಯವರ ಮಾರ್ಗದರ್ಶನದಲ್ಲಿ ಈ
ಸಂಶೋದನಾ ಲೇಖನವನ್ನು ಸಿದ್ದಪಡಿಸಿದ್ದರು. ಜೊತೆಗೆ 2020 ರಲ್ಲಿ ಕೋಲ್ಕತ್ತಾದ ಇಂಡಿಯನ್
ಕೆಮಿಕಲ್ ಸೊಸೈಟಿಯವರು ಕೊಡಮಾಡಿದ ‘ಯುವ ವಿಜ್ಞಾನಿ’ ಪುರಸ್ಕಾರಕ್ಕೂ ಭಾಜನರಾಗಿದ್ದರು
ಮತ್ತು 2022ರಲ್ಲಿ ಮಂಗಳೂರು ವಿವಿಯಿಂದ ಡಾಕ್ಟರೇಟ್ ಪದವಿಯನ್ನು ಪಡೆದಿರುವುದನ್ನು
ಇಲ್ಲಿ ಸ್ಮರಿಸಿಕೊಳ್ಳಬಹುದು.

ಕಾರ್ಕಳದ ಹಿರ್ಗಾನ ಗ್ರಾಮದ ಜಲಜ ಕುಲಾಲ್ ಮತ್ತು ಚಂದ್ರಶೇಖರ ದಂಪತಿಗಳ ಪುತ್ರ ಪ್ರಜ್ವಲ್ ಕುಲಾಲ್‌ ಅವರ ಸಾಧನೆಗೆ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿಯವರು ಹರ್ಷ ವ್ಯಕ್ತ ಪಡಿಸಿದ್ದು, ಜ್ಞಾನಸುಧಾ ಪರಿವಾರ ಅಭಿನಂದನೆ ಸಲ್ಲಿಸಿದೆ.