ಅಗ್ನಿಶಾಮಕ ದಳ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ಮಸೂದೆ ವಿಧಾನ ಪರಿಷತ್ ನಲ್ಲಿ ಅಂಗೀಕಾರ

ಬೆಂಗಳೂರು: ಅಪಘಾತಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ರಸ್ತೆ ಸುರಕ್ಷತಾ ಪ್ರಾಧಿಕಾರ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದ್ದು, ಕಾಯ್ದೆ (ತಿದ್ದುಪಡಿ) ಮಸೂದೆಯನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಂಡಿಸಿದರು.ವಿಧಾನ ಪರಿಷತ್‌ನಲ್ಲಿ ಕರ್ನಾಟಕ ಅಗ್ನಿಶಾಮಕ ದಳ (ತಿದ್ದುಪಡಿ) ಮಸೂದೆ ಮತ್ತು ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ (ತಿದ್ದುಪಡಿ) ಮಸೂದೆ ಬುಧವಾರ ಅಂಗೀಕಾರಗೊಂಡಿತು.
ಈ ತಿದ್ದುಪಡಿ ಸಂಬಂಧ ಹಿಂದಿನ ಸರ್ಕಾರ ಕಳೆದ ಮಾರ್ಚ್‌ 24ರಂದು ಸುಗ್ರೀವಾಜ್ಞೆ ಹೊರಡಿಸಿತ್ತು.ಬಿಜೆಪಿ, ಜೆಡಿಎಸ್‌ನ ಕೆಲವು ಸದಸ್ಯರು ಎರಡೂ ಮಸೂದೆಗಳ ಕುರಿತು ನಡೆದ ಚರ್ಚೆಯಲ್ಲಿ ಭಾಗವಹಿಸಿ, ಕೆಲವು ಸಲಹೆಗಳನ್ನು ನೀಡಿದರು.
ಅಗ್ನಿಶಾಮಕ ದಳ (ತಿದ್ದುಪಡಿ) ಮಸೂದೆಯನ್ನು ಮಂಡಿಸಿದ ಗೃಹ ಸಚಿವ ಜಿ. ಪರಮೇಶ್ವರ, ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆಯಲು ಅಗತ್ಯವಿರುವ ಕಟ್ಟಡಗಳ ಎತ್ತರವನ್ನು 15 ಮೀಟರ್‌ನಿಂದ 21 ಮೀಟರ್‌ಗೆ ಹೆಚ್ಚಿಸುವ ಉದ್ದೇಶದಿಂದ ಮಸೂದೆ ಮಂಡಿಸಲಾಗಿದೆ ಎಂದರು.