ಬೆಂಗಳೂರು:2022-23ನೇ ಸಾಲಿನಿಂದ ಜಾರಿಗೆ ಬರುವಂತೆ ಕರ್ನಾಟಕ ರಾಜ್ಯದಿಂದ ಪುಣ್ಯಕ್ಷೇತ್ರಗಳಾದ ವಾರಣಾಸಿ, ಅಯೋಧ್ಯೆ ಮತ್ತು ಪ್ರಯಾಗ್‌ರಾಜ್ ಕ್ಷೇತ್ರಗಳಿಗೆ ಕಡಿಮೆ ವೆಚ್ಚದಲ್ಲಿ ತೆರಳಲು ಅನುಕೂಲವಾಗುವಂತೆ ರಿಯಾಯಿತಿ ದರದಲ್ಲಿ ಪ್ಯಾಕೇಜ್ ರೂಪಿಸಿ “ಕರ್ನಾಟಕ ಭಾರತ್ ಗೌರವ ಕಾಶಿ ದರ್ಶನ” ಯೋಜನೆಯನ್ನು ಐಆರ್‌ಸಿಟಿಸಿ ಮತ್ತು ಭಾರತೀಯ ರೈಲ್ವೇ ಇಲಾಖೆಯ ಸಹಯೋಗದೊಂದಿಗೆ ವಿಶೇಷ ರೈಲಿನ ಮೂಲಕ ಕೈಗೊಳ್ಳಲಾಗಿದೆ.
ಕಾಶಿ ದರ್ಶನ ಮಾಡಲಿಚ್ಛಿಸಿರುವ ಯಾತ್ರಾತ್ರಿಗಳು ಆನ್ ಲೈನ್ ಮೂಲಕ ತಮ್ಮ ಟಿಕೆಟ್ಗಳನ್ನು ಕಾಯ್ದಿರಿಸಿಕೊಳ್ಳಬಹುದು ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಕರ್ನಾಟಕ ಭಾರತ್ ಗೌರವ ಕಾಶಿ ದರ್ಶನ ಯೋಜನೆಯಡಿ ನಾಲ್ಕನೇ ರೈಲು ಜುಲೈ 29ರಂದು ಬೆಂಗಳೂರಿನಿಂದ ಹೊರಡಲಿದೆ.ಕರ್ನಾಟಕ ಭಾರತ್ ಗೌರವ ಕಾಶಿ ದರ್ಶನ ಯೋಜನೆಯಲ್ಲಿ ಮೂರು ಟ್ರಿಪ್ ಪೂರ್ಣಗೊಂಡಿದ್ದು, 4ನೇ ಟ್ರಿಪ್ ಇದೇ ಜುಲೈ 29ರಂದು ಆರಂಭವಾಗಲಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಈ ಯೋಜನೆಯಡಿ ಪ್ರಯಾಣಿಸುವ ಯಾತ್ರಾರ್ಥಿಗಳಿಗೆ ತಲಾ ರೂ. 20,000/-ಗಳಂತೆ ಪ್ಯಾಕೇಜ್ ರೂಪಿಸಿದ್ದು, ಈ ಮೊತ್ತದಲ್ಲಿ ತಲಾ ರೂ. 5,000/-ಗಳನ್ನು ರಾಜ್ಯ ಸರ್ಕಾರದ ವತಿಯಿಂದ ಭರಿಸಿ ಉಳಿದ ಮೊತ್ತ ರೂ. 15,000/-ಗಳನ್ನು ಯಾತ್ರಾರ್ಥಿಗಳು ಪಾವತಿಸಬೇಕಿದೆ. ವಿಶೇಷ ರೈಲಿನಲ್ಲಿ ತೆರಳುವ ಯಾತ್ರಾರ್ಥಿಗಳಿಗೆ ಉಪಹಾರ, ಊಟ, ತಂಗುವಿಕೆ, ಸ್ಥಳೀಯ ಸಾರಿಗೆ ಮತ್ತು ಸ್ಥಳೀಯ ವೀಕ್ಷಣೆ ವ್ಯವಸ್ಥೆ ಇದ್ದು, ಒಟ್ಟು 07 ದಿನಗಳ ಪ್ರವಾಸವಾಗಿದೆ ಎಂದು ಸಚಿವರು ತಿಳಿಸಿದರು.
ಭಾರತ್ ಗೌರವ ಕಾಶಿ ದರ್ಶನ ರೈಲಿನ ವಿಶೇಷತೆ: 2022 ನವೆಂಬರ್ನಲ್ಲಿ ಪ್ರಧಾನಿ ಮೋದಿ ಅವರು ಯೋಜನೆಗೆ ಚಾಲನೆ ನೀಡಿದ್ದರು. ಅತ್ಯಂತ ಕಡಿಮೆ ವೆಚ್ಚದಲ್ಲಿ ಕಾಶಿ ವಿಶ್ವನಾಥ ಹಾಗೂ ಅಯೋಧ್ಯೆಯ ರಾಮಲಲ್ಲ ದೈವ ಭೂಮಿಯ ವೈಭವ ಸವಿಯುವ ಅವಕಾಶವಿದು. ಭವ್ಯ ಕಾಶಿ-ದಿವ್ಯ ಕಾಶಿಯನ್ನು ರಾಜ್ಯದ ಜನರು ಕಡಿಮೆ ವೆಚ್ಚದಲ್ಲಿ ಕಣ್ತುಂಬಿಕೊಳ್ಳಲಿ ಎನ್ನುವುದು ಇದರ ಉದ್ದೇಶ. ದಕ್ಷಿಣ ಭಾರತದಲ್ಲೇ ಪ್ರಪ್ರಥಮ ಬಾರಿಗೆ ಭಾರತ್ ಗೌರವ್ ರೈಲನ್ನು ಕರ್ನಾಟಕ ರಾಜ್ಯದ ಧಾರ್ಮಿಕ ದತ್ತಿ ಇಲಾಖೆ ಪ್ರಾರಂಭಿಸಿದೆ. ಪ್ರಯಾಣಿಕರ ಅನುಕೂಲಕ್ಕಾಗಿ 3 ಟಯರ್ ಎಸಿಯ ವ್ಯವಸ್ಥೆ ಮಾಡಲಾಗಿದ್ದು, 14 ಬೋಗಿಗಳ ಮೇಲೂ ರಾಜ್ಯದ 28 ದೇವಸ್ಥಾನಗಳ ಛಾಯಾಚಿತ್ರಗಳ ಬ್ರಾಂಡಿಂಗ್ ಮಾಡಿರುವುದು ಗಮನಾರ್ಹ.
ನಾಲ್ಕನೇ ಟ್ರಿಪ್ಪಿನಲ್ಲಿ ತೆರಳುವ ಯಾತ್ರಾರ್ಥಿಗಳು ಐಆರ್‌ಸಿಟಿಸಿ (IRCTC) ಪೋರ್ಟಲ್ ಮೂಲಕ ಅಥವಾ https://www.irctctourism.com ಲಿಂಕ್ ಮೂಲಕ ಟಿಕೆಟ್ ಕಾಯ್ದಿರಿಸಿಕೊಳ್ಳಬಹುದು. ಹೊಸದಾಗಿ ಸುಸಜ್ಜಿತ ಎಲ್‌ಹೆಚ್‌ಬಿ ಕೋಚ್‌ಗಳನ್ನು ಅಳವಡಿಸಲಾಗಿದ್ದು, ಸ್ಥಳದಲ್ಲಿಯೇ ಅಡುಗೆ ತಯಾರು ಮಾಡುವ ಅಡುಗೆ ಮನೆ (PANTRY CAR) ಒಳಗೊಂಡಿದೆ. ಯಾತ್ರಾರ್ಥಿಗಳ ಹಿತದೃಷ್ಟಿಯಿಂದ ಇಬ್ಬರು ವೈದ್ಯರು ಸಹ ಪ್ರಯಾಣಿಸುವರು. ಈ ಸೌಲಭ್ಯ ಭಕ್ತಾದಿಗಳು ಸದುಪಯೋಗಪಡಿಸಿಕೊಂಡು ಕಾಶಿ ವಿಶ್ವನಾಥ ಸ್ವಾಮಿಯ ದರ್ಶನ ಪಡೆಯುವಂತೆ ರಾಮಲಿಂಗಾರೆಡ್ಡಿ ಮನವಿ ಮಾಡಿದ್ದಾರೆ.