ಪರಮಾಣು ಕಲುಷಿತ ನೀರು ಜಪಾನ್​ನಿಂದ ಸಮುದ್ರಕ್ಕೆ ಬಿಡುಗಡೆ; ದಕ್ಷಿಣ ಕೊರಿಯಾ ಸೇರಿದಂತೆ ನೆರೆಯ ರಾಷ್ಟ್ರಗಳಲ್ಲಿ ಆತಂಕ!

ಸಿಯೋಲ್ :ದಕ್ಷಿಣ ಕೊರಿಯಾದ ಪೂರ್ವ, ಪಶ್ಚಿಮ ಮತ್ತು ದಕ್ಷಿಣದ ಸಮುದ್ರಗಳಿಂದ, ಹಾಗೆಯೇ ದಕ್ಷಿಣದ ರೆಸಾರ್ಟ್ ನಗರವಾದ ಜೆಜು ನೀರಿನಿಂದ ಮತ್ತು ಹೆಚ್ಚು ದೂರದ ಪ್ರದೇಶಗಳಿಂದಲೂ ಮಾದರಿಗಳನ್ನು ಸಂಗ್ರಹಿಸಲಾಗುವುದು ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಜಪಾನ್ ತನ್ನ ದುರ್ಬಲಗೊಂಡ ಫುಕುಶಿಮಾ ಪರಮಾಣು ಸ್ಥಾವರದಿಂದ ವಿಕಿರಣ ಕಲುಷಿತ ನೀರನ್ನು ಸಮುದ್ರಕ್ಕೆ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ.ಭೂಕಂಪದಿಂದ ಸ್ಥಗಿತಗೊಂಡಿರುವ ಫುಕುಶಿಮಾ ಅಣುಸ್ಥಾವರದಲ್ಲಿ ಸಂಗ್ರಹವಾಗಿರುವ ವಿಕಿರಣಶೀಲ ನೀರನ್ನು ಜಪಾನ್ ಸಮುದ್ರಕ್ಕೆ ಬಿಡುಗಡೆ ಮಾಡಲಿದೆ. ಇದು ನೆರೆಯ ದೇಶಗಳಿಗೆ ಮಾತ್ರವಲ್ಲದೇ ವಿಶ್ವಕ್ಕೇ ಆತಂಕ ಸೃಷ್ಟಿಸಿದೆ.ಆದರೆ, ಇದರಿಂದ ತೀವ್ರ ಕಳವಳಕ್ಕೀಡಾಗಿರುವ ದಕ್ಷಿಣ ಕೊರಿಯಾ ಸಮುದ್ರದಲ್ಲಿ ತಾನು ನಡೆಸುತ್ತಿರುವ ವಿಕಿರಣ ಪರೀಕ್ಷೆಗಳ ಸಂಖ್ಯೆಯನ್ನು ದ್ವಿಗುಣಗೊಳಿಸಿದೆ.

ಇಂಟರ್ ನ್ಯಾಷನಲ್ ಅಟಾಮಿಕ್ ಎನರ್ಜಿ ಏಜೆನ್ಸಿಯು ಎರಡು ವರ್ಷಗಳ ಪರಿಶೀಲನೆಯ ನಂತರ ಟೋಕಿಯೊದ ಪರಮಾಣು ಕಲುಷಿತ ನೀರನ್ನು ಬಿಡುಗಡೆ ಮಾಡುವ ಯೋಜನೆಯು ತನ್ನ ಸುರಕ್ಷತಾ ಮಾನದಂಡಗಳ ಪ್ರಕಾರ ನಡೆಯುತ್ತಿದೆ ಎಂದು ದೃಢಪಡಿಸಿದೆ. ಇದರ ನಂತರ ಜಪಾನ್ ಶೀಘ್ರದಲ್ಲೇ ಫುಕುಶಿಮಾ ಸ್ಥಾವರದಿಂದ ವಿಕಿರಣಶೀಲ ನೀರನ್ನು ಸಮುದ್ರಕ್ಕೆ ಬಿಡುಗಡೆ ಮಾಡಲು ಯೋಜಿಸಿದೆ.ಕಳೆದ ತಿಂಗಳು, ದಕ್ಷಿಣ ಕೊರಿಯಾ ಕೊರಿಯನ್ ಪರ್ಯಾಯ ದ್ವೀಪದ ಸುತ್ತಲೂ 92 ಪಾಯಿಂಟ್‌ಗಳಲ್ಲಿ ಸಮುದ್ರದ ನೀರಿನ ಮೇಲೆ ವಿಕಿರಣ ಪರೀಕ್ಷೆಗಳನ್ನು ನಡೆಸಲು ಪ್ರಾರಂಭಿಸಿದೆ ಮತ್ತು ವಿಕಿರಣಶೀಲತೆಯ ಮಟ್ಟವನ್ನು ಮೇಲ್ವಿಚಾರಣೆ ಮಾಡಲು ಇದು 108 ಕರಾವಳಿ ತಾಣಗಳನ್ನು ಒಳಗೊಂಡಿದೆ ಎಂದು ಕಡಲ ವ್ಯವಹಾರಗಳ ಉಪ ಸಚಿವ ಪಾರ್ಕ್ ಸುಂಗ್-ಹೂನ್ ಫುಕುಶಿಮಾ ಬಗೆಗಿನ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು..

ಜೂನ್‌ನಲ್ಲಿ ಸಿಯೋಲ್ ಸರ್ಕಾರವು ಬೇಸಿಗೆ ರಜೆಯ ಋತುವಿಗೆ ಮುಂಚಿತವಾಗಿ ಜೆಜು ದ್ವೀಪದಲ್ಲಿನ ಹ್ಯಾಮ್‌ಡಿಯೊಕ್ ಬೀಚ್ ಮತ್ತು ಪೂರ್ವ ಕರಾವಳಿ ನಗರವಾದ ಗ್ಯಾಂಗ್‌ನ್ಯೂಂಗ್‌ನಲ್ಲಿರುವ ಜಿಯೊಂಗ್‌ಪೋ ಬೀಚ್ ಸೇರಿದಂತೆ ಅನೇಕ ಬೀಚ್‌ಗಳಲ್ಲಿ ತಪಾಸಣೆ ಪ್ರಾರಂಭಿಸಿದೆ.

ಫುಕುಶಿಮಾ ಡೈಚಿ ಪರಮಾಣು ವಿದ್ಯುತ್ ಸ್ಥಾವರದಲ್ಲಿನ ಟ್ರಿಪಲ್ ರಿಯಾಕ್ಟರ್ ಹಾಳಾದ ಹನ್ನೆರಡು ವರ್ಷಗಳ ನಂತರ, ಜಪಾನ್ ಬೃಹತ್ ಪ್ರಮಾಣದ ಸಂಸ್ಕರಿಸಿದ ವಿಕಿರಣಶೀಲ ತ್ಯಾಜ್ಯ ನೀರನ್ನು ಸಮುದ್ರಕ್ಕೆ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ. ನೀರಿನ ಬಿಡುಗಡೆಯು ಅನಿವಾರ್ಯವಾಗಿದೆ ಮತ್ತು ಶೀಘ್ರದಲ್ಲೇ ಪ್ರಾರಂಭಿಸಬೇಕಿದೆ ಎಂದು ಜಪಾನಿನ ಅಧಿಕಾರಿಗಳು ಹೇಳುತ್ತಾರೆ.ಸಾಮಾನ್ಯವಾಗಿ ಎರಡು ತಿಂಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುವ ಸಾಂಪ್ರದಾಯಿಕ ತಪಾಸಣೆ ವಿಧಾನಗಳನ್ನು ಬಳಸುವುದಕ್ಕಿಂತ ಬದಲಾಗಿ ತ್ವರಿತ ಗತಿಯಲ್ಲಿ ಫಲಿತಾಂಶಗಳನ್ನು ಪಡೆಯಲು ದಕ್ಷಿಣ ಕೊರಿಯಾ ಕ್ಷಿಪ್ರ ವಿಶ್ಲೇಷಣಾ ವಿಧಾನವನ್ನು ಬಳಸಿಕೊಳ್ಳುತ್ತಿದೆ ಎಂದು ಪಾರ್ಕ್ ಸುಂಗ್ – ಹೂನ್ ತಿಳಿಸಿದರು. ಕ್ಷಿಪ್ರ ವಿಶ್ಲೇಷಣಾ ವಿಧಾನದಲ್ಲಿ ವಿಶ್ಲೇಷಣೆಯ ಫಲಿತಾಂಶಗಳನ್ನು ಸುಮಾರು ನಾಲ್ಕು ದಿನಗಳಲ್ಲಿ ಪಡೆಯಬಹುದು. ಇತ್ತೀಚಿನ ವಿಕಿರಣ ಪರೀಕ್ಷೆಗಳ ಪ್ರಕಾರ ದೇಶದ 20 ಪ್ರಮುಖ ಬೀಚ್‌ಗಳಲ್ಲಿನ ನೀರು ಸುರಕ್ಷಿತವಾಗಿರುವುದು ಕಂಡುಬಂದಿದೆ” ಎಂದು ಅವರು ಹೇಳಿದರು