ನೇಪಾಳಕ್ಕೆ 34 ಆಂಬ್ಯುಲೆನ್ಸ್‌ ಮತ್ತು 50 ಶಾಲಾ ಬಸ್‌ ಸೇರಿ 84 ವಾಹನಗಳನ್ನು ಉಡುಗೊರೆ ನೀಡಿದ ಭಾರತ

ಕಠ್ಮಂಡು (ನೇಪಾಳ) : ಭಾರತವು ನೇಪಾಳದ ವಿವಿಧ ಸಂಘ, ಸಂಸ್ಥೆಗಳಿಗೆ 84 ವಾಹನಗಳನ್ನು ಭಾನುವಾರ ಉಡುಗೊರೆ ರೂಪದಲ್ಲಿ ಹಸ್ತಾಂತರಿಸಿದೆ.ಈ ವಾಹನಗಳನ್ನು ನೇಪಾಳದ ಭಾರತೀಯ ರಾಯಭಾರಿ ನವೀನ್​ ಶ್ರೀವಾಸ್ತವ್​ ಅವರು ನೇಪಾಳದ ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ ಸಚಿವ ಅಶೋಕ್​ ಕುಮಾರ್​ ರೈ ಸಮ್ಮುಖದಲ್ಲಿ ಸಂಬಂಧಪಟ್ಟವರಿಗೆ ವಿತರಿಸಿದರುಭಾರತವು ನೇಪಾಳದ ವಿವಿಧ ಸಂಘ, ಸಂಸ್ಥೆಗಳಿಗೆ 34 ಆಯಂಬುಲೆನ್ಸ್​ ಮತ್ತು 50 ಶಾಲಾ ಬಸ್​ ಸೇರಿ ಒಟ್ಟು 84 ವಾಹನಗಳನ್ನು ಉಡುಗೊರೆಯಾಗಿ ನೀಡಿದೆ.

.ಈ ಬಗ್ಗೆ ನೇಪಾಳದ ಭಾರತೀಯ ರಾಯಭಾರಿ ನವೀನ್​ ಶ್ರೀವಾಸ್ತವ್​ ಮಾತನಾಡಿ, “ಇದು ನೇಪಾಳ-ಭಾರತ ಅಭಿವೃದ್ಧಿ ಪಾಲುದಾರಿಕೆ ಕಾರ್ಯಕ್ರಮದ ಅಡಿಯಲ್ಲಿ ಭಾರತ ಸರ್ಕಾರದ ದೀರ್ಘಕಾಲದ ಯೋಜನೆಗಳಲ್ಲಿ ಒಂದು. ನೇಪಾಳ ಸರ್ಕಾರಕ್ಕೆ ತನ್ನ ಮೂಲಸೌಕರ್ಯಗಳನ್ನು ಬಲಪಡಿಸಲು ಭಾರತ ಜೊತೆಯಾಗುತ್ತದೆ.

“ಭಾರತ ಮತ್ತು ನೇಪಾಳದ ಅಭಿವೃದ್ಧಿ ಸಂಬಂಧವು ಸುದೀರ್ಘ ಇತಿಹಾಸ ಮತ್ತು ಪರಂಪರೆ ಹೊಂದಿದೆ. ಅಲ್ಲದೆ ಇದು ನೇಪಾಳದಾದ್ಯಂತ ಭೌಗೋಳಿಕವಾಗಿಯೂ ಹರಡಿದೆ. ಇಲ್ಲಿನ ಜನರ ಜೀವನವನ್ನು ಸ್ಪರ್ಶಿಸಿದೆ. ನೇಪಾಳದ ಅಭಿವೃದ್ಧಿ ಪಯಣದಲ್ಲಿ ಸ್ಪಷ್ಟವಾದ ಪ್ರಗತಿಯನ್ನು ತರಲು ಬಯಸುತ್ತೇವೆ” ಎಂದರು.
“ಭಾರತ ಮತ್ತು ನೇಪಾಳದ ನಡುವೆ ಉತ್ತಮ ಸ್ನೇಹ ಬಾಂಧವ್ಯವಿದೆ. ನೇಪಾಳದ ಮೂಲಭೂತ ಸೌಕರ್ಯ, ಶಿಕ್ಷಣ ಸೇರಿದಂತೆ ವಿವಿಧ ವಲಯಗಳಲ್ಲಿಅಭಿವೃದ್ಧಿ ಸಾಧಿಸಲು ಭಾರತ ತನ್ನದೇ ಆದ ಕೊಡುಗೆಗಳನ್ನು ನೀಡುತ್ತಿದೆ. ಅಲ್ಲದೆ ಆರೋಗ್ಯ ಮತ್ತು ಶಿಕ್ಷಣವಲಯದಲ್ಲಿ ಹೆಚ್ಚಿನ ಮಟ್ಟದಲ್ಲಿ ಅಭಿವೃದ್ಧಿ ಹೊಂದಲು ಸಹಕಾರ ನೀಡುತ್ತಿದೆ. ನೇಪಾಳ ಮತ್ತು ಭಾರತದ ನಡುವೆ ವಿವಿಧ ದೀರ್ಘಕಾಲದ ಅಭಿವೃದ್ಧಿ ಒಪ್ಪಂದವನ್ನು ಕೈಗೊಂಡಿರುವ ಭಾರತ ನೇಪಾಳ ಸರ್ಕಾರಕ್ಕೆ ಮೂಲಭೂತ ಸೌಕರ್ಯವನ್ನು ಅಭಿವೃದ್ಧಿಪಡಿಸಲು ಸಹಕರಿಸುತ್ತಿದೆ. ಈ ಮೂಲಕ ನೇಪಾಳ ಮತ್ತು ಭಾರತದ ನಡುವಿನ ಸಾಂಪ್ರದಾಯಿಕ ಬಾಂಧವ್ಯವನ್ನು ಉಳಿಸಿಕೊಂಡು ಬಂದಿದೆ” ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.ನೇಪಾಳದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗಾಗಿ ಭಾರತ ಸರ್ಕಾರದ ಕಾರ್ಯವನ್ನು ಶ್ಲಾಘಿಸಿದ ಸಚಿವ ಅಶೋಕ್​​ ಕುಮಾರ್​ ರೈ, “ಇದು ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುತ್ತದೆ” ಎಂದು ಅಭಿಪ್ರಾಯಪಟ್ಟರು.ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳು ಭಾರತ ಮತ್ತು ನೇಪಾಳ ನಡುವಿನ ಅತ್ಯಂತ ದೃಢ ಮತ್ತು ಬಲವಾದ ಅಭಿವೃದ್ಧಿಯ ವಿಷಯವಾಗಿದೆ” ಎಂದು ಹೇಳಿದರು.