ಉಡುಪಿ: ತೋಟಗಾರಿಕೆ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಉಡುಪಿ ತಾಲೂಕಿನಲ್ಲಿ ಅನುಷ್ಠಾನಗೊಳ್ಳಲಿರುವ ವಿವಿಧ ಯೋಜನೆಯಡಿ ಸಹಾಯಧನ ಸೌಲಭ್ಯ ಪಡೆಯಲು ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ರೈತರಿಗೆ ಕಾಳಮೆಣಸು, ಗೇರು, ಜಾಯಿಕಾಯಿ, ಅನಾನಸು, ಅಂಗಾಂಶ ಬಾಳೆ, ರಾಗದ ಕಂದು ಬಾಳೆ, ಅಪ್ರಧಾನ ಹಣ್ಣುಗಳಾದ ರಾಂಬುಟಾನ್, ಮಾಂಗೋಸ್ಟೀನ್ ಮತ್ತು ಡ್ರಾಗನ್ ಫ್ರೂಟ್ ಹೊಸ ತೋಟಗಳ ಸ್ಥಾಪನೆಗೆ ಶೇ. 40 ರ ಸಹಾಯಧನ, ಸಣ್ಣ ಸಸ್ಯಾಗಾರಗಳ ನರ್ಸರಿ ಸ್ಥಾಪನೆಗೆ ಶೇ. 50 ರ ಸಹಾಯಧನ, ಅಂಗಾಂಶ ಕೃಷಿ ಘಟಕ ಸ್ಥಾಪನೆಗೆ ಶೇ.40 ರಂತೆ ಸಹಾಯಧನ, ನೀರು ಸಂಗ್ರಹಣ ಘಟಕ (20*20*3 ಮೀ. ಅಳತೆ) ನಿರ್ಮಾಣಕ್ಕೆ ಗರಿಷ್ಠ 0.75 ಲಕ್ಷ ರೂ.ಗಳ ಸಹಾಯಧನ ಲಭ್ಯವಿದೆ.
ವಿವಿಧ ತೋಟಗಾರಿಕೆ ಬೆಳೆಗಳಿಗೆ ಹಾನಿಯುಂಟು ಮಾಡುವ ರೋಗ/ಕೀಟಗಳ ನಿಯಂತ್ರಣಕ್ಕಾಗಿ ಸಸ್ಯ ಸಂರಕ್ಷಣಾ ಔಷಧಿಗಳಿಗೆ ಶೇ. 30 ರಿಂದ ಶೇ. 75 ರ ಸಹಾಯಧನ, ಅಡಿಕೆ ತೋಟ ಹೊಂದಿರುವ ರೈತರಿಗೆ ಅಡಿಕೆ ಸಂರಕ್ಷಣೆ ಒಣಗಿಸಲು ಸೋಲಾರ್ ಶೀಟ್ ಖರೀದಿಗೆ ಶೇ.40 ರ ಸಹಾಯಧನ, ವಿವಿಧ ಜಾತಿಯ ಅಣಬೆ ಉತ್ಪಾದನೆಗಾಗಿ ಅಣಬೆ ಉತ್ಪಾದನಾ ಘಟಕ, ಸ್ಪಾನ್ ಉತ್ಪಾದನಾ ಘಟಕಗಳ ಸ್ಥಾಪನೆಗೆ ಶೇ. 40 ರ ಸಹಾಯಧನ, ರೈತರ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ವಿವಿಧ ಸಂಸ್ಥೆಗಳು ಸ್ಥಾಪಿಸುವ ಗ್ರಾಮೀಣ ಮಾರುಕಟ್ಟೆ, ರೈತ ಸಂತೆ ಹಾಗೂ ನೇರ ಮಾರುಕಟ್ಟೆ ಸ್ಥಾಪಿಸಲು ಶೇ.40 ರಂತೆ ಗರಿಷ್ಠ ರೂ. 10.00 ಲಕ್ಷಗಳ ಸಾಲ ಆಧಾರಿತ ಸಹಾಯಧನ ಪಡೆಯಲು ಅವಕಾಶವಿರುತ್ತದೆ.
ತೋಟಗಾರಿಕೆ ಬೆಳೆಗಳ ಪ್ರಾಥಮಿಕ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಶೇ.40, ಪ್ಯಾಕ್ ಹೌಸ್ಗಳ ನಿರ್ಮಾಣಕ್ಕೆ ಗರಿಷ್ಠ 2 ಲಕ್ಷ ರೂ. ವರೆಗೆ ಶೇ. 50 ರ ಸಹಾಯಧನ ಹಾಗೂ ರೈತರ ಯಾಂತ್ರೀಕರಣ ಅವಶ್ಯಕತೆಗೆ 20 ಹೆಚ್ಪಿ ಗಿಂತ ಕಡಿಮೆ ಸಾಮರ್ಥ್ಯದ ಟ್ರ್ಯಾಕ್ಟರ್ ಖರೀದಿಗೆ ರೂ. 75,000 ದಿಂದ 1 ಲಕ್ಷ ರೂ. ವರೆಗೆ ಸಹಾಯಧನ ಲಭ್ಯವಿದೆ.
ಹಳೆ ತೆಂಗು ತೋಟಗಳಲ್ಲಿ ಶೇ. 10 ರಷ್ಟು ಹಳೆ ಮರಗಳನ್ನು ತೆಗೆದು ಹೊಸ ಗಿಡಗಳ ನಾಟಿ, ಬುಡ ಮಾಡಿ ಗೊಬ್ಬರ ಕೊಡುವುದು, ಸಸ್ಯ ಸಂರಕ್ಷಣೆ ಹಾಗೂ ನೀರಿನ ಸಂರಕ್ಷಣೆ ಕಾರ್ಯಕ್ರಮಗಳನ್ನು ಕೈಗೊಂಡು ಪುನಶ್ಚೇತನಗೊಳಿಸಲು, ಪ್ರಾತ್ಯಕ್ಷತೆ ತಾಕುಗಳ ನಿರ್ಮಾಣಕ್ಕಾಗಿ ಹಾಗೂ ತೆಂಗು ಬೆಳೆಗೆ ತಗಲುವ ರೋಗ ಮತ್ತು ಕೀಟಗಳ ನಿಯಂತ್ರಣಕ್ಕಾಗಿ ಕೀಟ ಮತ್ತು ರೋಗಗಳಿಗನುಗುಣವಾಗಿ ಒಟ್ಟು ಘಟಕ ವೆಚ್ಚದ
ಶೇ. 50 ರಂತೆ ಹಾಗೂ ಹೊಸ ತೆಂಗು ತೋಟ ಮಾಡಲಿಚ್ಛಿಸುವ ರೈತರಿಗೆ ಕೂಡ ಸಹಾಯಧನ ಲಭ್ಯವಿದೆ.
ಕೃಷಿ ಯಾಂತ್ರೀಕರಣ ಉಪ ಅಭಿಯಾನ ಹಾಗೂ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಗಳಡಿ ತೋಟಗಾರಿಕೆ ಯಾಂತ್ರಿಕರಣ ಕಾರ್ಯಕ್ರಮದಡಿ ಅನುಮೋದಿತ ವಿವಿಧ ಯಂತ್ರೋಪಕರಣಗಳಿಗೆ ಶೇ. 40/50 ರ ಸಹಾಯಧನ ಹಾಗೂ ದೊಡ್ಡ ಗಾತ್ರದ ನೀರು ಸಂಗ್ರಹಣಾ ಘಟಕ, ಪ್ಯಾಕಿಂಗ್ ಮತ್ತು ಸಂಗ್ರಹಣಾ ಘಟಕಗಳ ನಿರ್ಮಾಣಕ್ಕೆ ಮತ್ತು ನೀರಿನಲ್ಲಿ ಕರಗುವ ರಸಗೊಬ್ಬರ ಮತ್ತು ಲಘು ಪೋಷಕಾಂಶಗಳ ಖರೀದಿಗೆ ಸಹಾಯಧನ ಸಿಗಲಿದೆ.
ತೋಟಗಾರಿಕೆ ಬೆಳೆಗಳಲ್ಲಿ ನೀರಿನ ಸಮರ್ಪಕ ಬಳಕೆಗಾಗಿ ಹನಿ ನೀರಾವರಿ/ತುಂತುರು ನೀರಾವರಿ ಅಳವಡಿಕೆಗೆ ಪ್ರರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇ. 90 ರಷ್ಟು ಹಾಗೂ ಇತರೇ ವರ್ಗದ ರೈತರಿಗೆ ಶೇ. 75 ರಷ್ಟು ಸಹಾಯಧನ ಲಭ್ಯವಿದೆ. ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ಕಾರ್ಯಾದೇಶ ಪಡೆದು ಇಲಾಖೆಯಿಂದ ಅನುಮೋದಿತ ಡೀಲರ್ಗಳ ಮೂಲಕ ರೈತರು ಹನಿ ನೀರಾವರಿ ಆಳವಡಿಸಿಕೊಂಡು ಸಹಾಯಧನ ಪಡೆಯಬಹುದಾಗಿದೆ.
ತಾಳೆಬೆಳೆ ಯೋಜನೆಯಡಿ ಹೊಸದಾಗಿ ತಾಳೆ ಬೆಳೆ ಪ್ರದೇಶ ವಿಸ್ತರಣೆಗೆ ಹಾಗೂ ತಾಳೆ ಬೆಳೆ ಬೆಳೆಯುವ ರೈತರಿಗೆ ಬೋರ್ವೆಲ್, ಬಾವಿ ನಿರ್ಮಿಸಿಕೊಳ್ಳಲು, ವಿದ್ಯುತ್, ಡೀಸೆಲ್ ಪಂಪ್ ಮತ್ತು ಯಂತ್ರೋಪಕರಣ ಖರೀದಿಗೆ ಹಾಗೂ ಜೇನು ಸಾಕಾಣಿಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ 2 ದಿನಗಳ ತರಬೇತಿಯೊಂದಿಗೆ ಜೇನು ಕುಟುಂಬ ಸಹಿತ ಗರಿಷ್ಠ 4 ಪೆಟ್ಟಿಗೆ ಖರೀದಿಗೆ ಶೇ. 75 ರಿಂದ 90 ರ ಸಹಾಯಧನ ಲಭ್ಯವಿದೆ.
ಮಹಾತ್ಮಾ ಗಾಂಧೀ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ, ಹಳೆ ತೋಟಗಳ ಪುನಶ್ಚೇತನ ಹಾಗೂ ಪೌಷ್ಟಿಕ ತೋಟಗಳ ನಿರ್ಮಾಣಕ್ಕೆ, ಗ್ರಾಮ ಪಂಚಾಯತಿಯಲ್ಲಿ ಅರ್ಜಿ ಸಲ್ಲಿಸಿ, ಈ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ.
ಈ ಎಲ್ಲಾ ಯೋಜನೆಗಳ ಪ್ರಯೋಜನೆ ಪಡೆಯಲು ಆಸಕ್ತ ರೈತರು ಪ್ರಥಮ ಹಂತದಲ್ಲಿ, ನೋಂದಣಿ ಅರ್ಜಿಯೊಂದಿಗೆ ಬೆಳೆ ನಮೂದಿಸಿರುವ ಇತ್ತೀಚಿನ ಪಹಣಿ ಪತ್ರ ಮತ್ತು ಅಗತ್ಯ ಪ್ರಮಾಣ ಪತ್ರಗಳೊಂದಿಗೆ ಇಲಾಖೆಯಲ್ಲಿ ನೋಂದಾಯಿಸಿಕೊಳ್ಳಬೇಕು. ಇಲಾಖಾ ಮಾರ್ಗಸೂಚಿ ಅನುಸಾರ ಅರ್ಜಿಗಳನ್ನು ಜೇಷ್ಠತೆಯ ಆಧಾರದಲ್ಲಿ, ಇಲಾಖೆ ನಿಗಧಿಪಡಿಸಿದ ಗುರಿಗೆ ಅನುಗುಣವಾಗಿ ಸಹಾಯಧನಕ್ಕೆ ಪರಿಗಣಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕ ನಿರ್ದೇಶಕರು, ಜಿಲ್ಲಾ ಪಂಚಾಯತ್, ಉಡುಪಿ ಮೊ.ನಂ: 8095991105 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.