ದೂದ್ ಸಾಗರ್​ನಲ್ಲಿ ಅಡ್ಡಾದಿಡ್ಡಿ ಓಡಾಡಿದ್ರೆ ಶಿಕ್ಷೆ ನೈಋತ್ಯ ರೈಲ್ವೆ ಇಲಾಖೆಯಿಂದ ಎಚ್ಚರಿಕೆ

ಕಾರವಾರ: ಕರ್ನಾಟಕ-ಗೋವಾ ಗಡಿಭಾಗದಲ್ಲಿರುವ ಪ್ರಸಿದ್ಧ ದೂದ್ ಸಾಗರ್ ಜಲಪಾತ ವೀಕ್ಷಣೆಗೆ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ.ಅದರಲ್ಲಿಯೂ ಈಗ ಮಳೆ ಬರುತ್ತಿರುವುದರಿಂದ ಅದರ ಸೊಬಗು ಮತ್ತಷ್ಟು ಹೆಚ್ಚಾಗಿದೆ. ಆದರೆ ಪ್ರವಾಸಕ್ಕೆಂದು ಬರುವ ಜನರು ಅಲ್ಲಿ ಮೋಜು ಮಸ್ತಿ ಮಾಡಿ ಪ್ರಕೃತಿಯನ್ನು ಹಾಳು ಮಾಡುವುದರಲ್ಲಿ ಹಿಂಜರಿಯುವುದಿಲ್ಲ. ಹೀಗಾಗಿ ಈ ಸಂಭ್ರಮಕ್ಕೆ ಕಡಿವಾಣ ಬೀಳಲಿದೆ. ಇನ್ಮುಂದೆ ಪ್ರವಾಸಿಗರು ದೂದ್ ಸಾಗರ್​ನಲ್ಲಿ ಅಡ್ಡಾದಿಡ್ಡಿ ಓಡಾಡುವಂತಿಲ್ಲ. ಈ ಬಗ್ಗೆ ರೈಲ್ವೆ ಇಲಾಖೆ ಎಚ್ಚರಿಕೆ ನೀಡಿದೆ.ರೈಲಿನ ಬೋಗಿಯೊಳಗಿನಿಂದಲೇ ಪ್ರವಾಸಿಗರು ದೂದ್​ ಸಾಗರ್ ಸೌಂದರ್ಯವನ್ನು ವೀಕ್ಷಿಸುವಂತೆ ನೈಋತ್ಯ ರೈಲ್ವೆಯು ಮನವಿ ಮಾಡಿದೆ.

ಸ್ವಂತ ಸುರಕ್ಷತೆಗೆ ಅಪಾಯ ಉಂಟಾಗುವ ಸಾಧ್ಯತೆ: ಸೌತ್ ವೆಸ್ಟರ್ನ್ ರೈಲ್ವೆ ಖಾತೆಯಿಂದ ಟ್ವಿಟ್ ಮಾಡಿ, ದೂದ್​ಸಾಗರ ಸೌಂದರ್ಯವನ್ನು ರೈಲ್ವೆ ಬೋಗಿಯಿಂದಲೇ ನೋಡಿ ಆನಂದಿಸಿ. ಹಳಿಗಳ ಮೇಲೆ, ಹಾದಿಯಲ್ಲಿ ನಡೆಯುವುದು ನಿಮ್ಮ ಸ್ವಂತ ಸುರಕ್ಷತೆಗೆ ಅಪಾಯ ಉಂಟಾಗುವ ಸಾಧ್ಯತೆ ಇದೆ. ಅಲ್ಲದೆ ಇದು ರೈಲ್ವೆ ಕಾಯಿದೆಯ ಸೆಕ್ಷನ್ 147, 159 ರ ಅಡಿಯಲ್ಲಿ ಅಪರಾಧವಾಗಿದೆ. ಇದು ರೈಲುಗಳ ಸುರಕ್ಷತೆಗೂ ಅಪಾಯ ತಂದೊಡ್ಡುವ ಸಾಧ್ಯತೆಗಳಿರುವುದರಿಂದ ರೈಲಿನಿಂದಲೇ ಸೌಂದರ್ಯ ಸವಿಯುವಂತೆ ತಿಳಿಸಿದೆ.

ಪ್ರವಾಸಿಗರಿಗೆ ಉಠಾ ಬಸ್ಕಿ ಹೊಡೆಸಿ ಶಿಕ್ಷೆ: ನಿಷೇಧದ ನಡುವೆಯೂ ಕರ್ನಾಟಕ-ಗೋವಾ ಗಡಿಭಾಗದಲ್ಲಿರುವ ಪ್ರಸಿದ್ಧ ದೂದ್ ಸಾಗರ್ ಜಲಪಾತ ವೀಕ್ಷಣೆಗೆ ಭಾರಿ ಸಂಖ್ಯೆಯಲ್ಲಿ ಟ್ರೆಕ್ಕಿಂಗ್​ಗೆ ತೆರಳಿದ್ದ ಯುವಕರನ್ನು ತಡೆದ ರೈಲ್ವೇ ಹಾಗೂ ಗೋವಾದ 50ಕ್ಕೂ ಹೆಚ್ಚು ಪೊಲೀಸರು ಉಠಾ ಬಸ್ಕಿ ಹೊಡೆಸಿ ಶಿಕ್ಷೆ ನೀಡಿದ ಘಟನೆ ಭಾನುವಾರ ನಡೆದಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿಯೂ ವೈರಲ್ ಆಗಿದೆ. ಬಳಿಕ ಜಲಪಾತ ವೀಕ್ಷಣೆಗೆ ಅವಕಾಶ ನೀಡದೆ ಎಲ್ಲರನ್ನು ಟ್ರೇನ್ ಒಂದಕ್ಕೆ ಹತ್ತಿಸಿ ಕಳುಹಿಸಿದ್ದಾರೆ.
ನಿಲ್ದಾಣದಲ್ಲಿ ರೈಲಿನಿಂದ ಇಳಿಯುವುದು ನಿಷೇಧ: ದೂದ್ ಸಾಗರ್ ಬಳಿ ಅಥವಾ ಬ್ರಗಾಂಜಾ ಗೇಟ್‌ನಿಂದ ಯಾವುದೇ ನಿಲ್ದಾಣದಲ್ಲಿ ರೈಲಿನಿಂದ ಇಳಿಯುವುದನ್ನು ನಿಷೇಧಿಸಲಾಗಿದೆ. ಇದಕ್ಕೆ ಪ್ರಯಾಣಿಕರು ಸಹಕರಿಸಬೇಕು ಮತ್ತು ನಿಮ್ಮ ಸುರಕ್ಷತೆಗಾಗಿ ರೂಪಿಸಿರುವ ನಿಯಮಗಳನ್ನು ಪಾಲಿಸಬೇಕು ಎಂದು ರೈಲ್ವೆ ಇಲಾಖೆ ಮನವಿ ಮಾಡಿದೆ.