ಶಕ್ತಿ ಯೋಜನೆಯಿಂದ ವ್ಯಾಪಾರ ತತ್ತರ: ಖಾಸಗಿ ವಾಹನಗಳ ಮಾಲೀಕರ ಒಕ್ಕೂಟದಿಂದ ಪರಿಹಾರಕ್ಕೆ ಆಗ್ರಹ

ಬೆಂಗಳೂರು: ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಗೆ ಬಂದಾಗಿನಿಂದ ತಮ್ಮ ವ್ಯಾಪಾರಕ್ಕೆ ಶೇ 50ರಷ್ಟು ಹೊಡೆತ ಬಿದ್ದಿದೆ ಎಂದು ಆರೋಪಿಸಿರುವ ಕರ್ನಾಟಕ ಖಾಸಗಿ ವಾಹನಗಳ ಮಾಲೀಕರ ಒಕ್ಕೂಟವು ಸಾರಿಗೆ ನಿಗಮಗಳಿಗೆ ನೀಡಿದಂತೆ ತಮಗೂ ಪರಿಹಾರ ನೀಡದಿದ್ದಲ್ಲಿ ಜುಲೈ 28 ರಂದು ರಾಜ್ಯಾದ್ಯಂತ ಮುಷ್ಕರ ನಡೆಸುವುದಾಗಿ ಬೆದರಿಕೆ ಹಾಕಿದೆ.

ಗುರುವಾರದಂದು ಮಾಧ್ಯಮಗಳೊಂದಿಗೆ ಮಾತನಾಡಿದ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮಾ, ಮಹಿಳೆಯರಿಗೆ ಉಚಿತ ಬಸ್ ಸೇವೆ ನೀಡಿರುವುದು ನಮ್ಮ ವ್ಯಾಪಾರವನ್ನು ಹಾಳು ಮಾಡಿದೆ. ನಮ್ಮ ವ್ಯಾಪಾರವು ಸುಮಾರು 60% ರಷ್ಟು ಕಡಿಮೆಯಾಗಿದೆ ಮತ್ತು ಬಸ್ ನಿರ್ವಾಹಕರು ಮತ್ತು ಚಾಲಕರು ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಇಎಂಐ ಪಾವತಿ, ಸಾಲ ಮರುಪಾವತಿ, ನಿರ್ವಹಣಾ ವೆಚ್ಚ ಪೂರೈಕೆ ಮತ್ತು ನಮ್ಮ ದಿನನಿತ್ಯದ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಅದರ ಮೇಲೆ, ವಾಹನದ ಪ್ರಕಾರವನ್ನು ಅವಲಂಬಿಸಿ ಪ್ರತಿ ತ್ರೈಮಾಸಿಕದಲ್ಲಿ ರಸ್ತೆ ತೆರಿಗೆಗಾಗಿ 1 ಲಕ್ಷ ರೂ.ಗಳನ್ನು ಪಾವತಿಸಬೇಕು. ಡೀಸೆಲ್ ಬೆಲೆ ಗಗನ ಮುಟ್ಟಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ, ಖಾಸಗಿ ಸಾರಿಗೆ ಸೇವೆಗಳನ್ನು ನಡೆಸುತ್ತಿರುವ ಲಕ್ಷಾಂತರ ಜನರ ಜೀವನವು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅಪಾಯಕ್ಕೀಡಾಗಲಿದೆ ಎಂದರು.

ಜ್ಞಾಪನಾ ಪತ್ರವನ್ನು ಸಲ್ಲಿಸಿದ ನಂತರ ಸರ್ಕಾರಕ್ಕೆ 7 ದಿನಗಳ ಗಡು ನೀಡುತ್ತೇವೆ. ಅವರು ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ಶಕ್ತಿ ಯೋಜನೆಯನ್ನು ಹಿಂದೆಗೆದುಕೊಳ್ಳಲು ಸಾಧ್ಯವಾಗದಿದ್ದರೆ, ಕನಿಷ್ಠ ಖಾಸಗಿ ವಾಹನ ಮಾಲೀಕರಿಗೆ ಪರಿಹಾರ ನೀಡಬೇಕು. ಸರ್ಕಾರ ಹೆಚ್ಚುವರಿ ಅನುದಾನ ನೀಡಿ ಆಟೋ ಚಾಲಕರನ್ನು ಬೆಂಬಲಿಸಬೇಕು ಎಂದು ನಾವು ಬಯಸುತ್ತೇವೆ. ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡುತ್ತೇವೆ ಎಂದು ಶರ್ಮಾ ಹೇಳಿದರು.

ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಮನವಿ ಪತ್ರ ಸಲ್ಲಿಸಲಾಗುವುದು ಮತ್ತು ಈ ಬಗ್ಗೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಒಂದು ವಾರ ಕಾಲಾವಕಾಶ ನೀಡುವುದಾಗಿ ಖಾಸಗಿ ವಾಹನ ಮಾಲೀಕರ ಒಕ್ಕೂಟ ತಿಳಿಸಿದೆ. ರಾಜ್ಯವು ಪರಿಹಾರ ನೀಡಲು ವಿಫಲವಾದರೆ ಜುಲೈ 28 ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಒಕ್ಕೂಟವು ಎಚ್ಚರಿಸಿದೆ. ಆಟೋ ರಿಕ್ಷಾ ಚಾಲಕರ ಸಂಘಗಳು, ಖಾಸಗಿ ಬಸ್ ನಿರ್ವಾಹಕರ ಸಂಘ ಮತ್ತು ಮ್ಯಾಕ್ಸಿ ಕ್ಯಾಬ್ ಚಾಲಕರನ್ನು ಒಳಗೊಂಡ ಒಕ್ಕೂಟವು ತೆರಿಗೆ ವಿನಾಯಿತಿ, ಆಟೋ ಚಾಲಕರಿಗೆ ಮಾಸಿಕ 10,000 ರೂ ಅನುದಾನ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆಗೆ ಒತ್ತಾಯಿಸಿದೆ.