ಕೋಲಾರ: 2,000 ಬಾಕ್ಸ್ ಟೊಮೇಟೋ ಮಾರಾಟ ಮಾಡಿ 38 ಲಕ್ಷ ರೂ ಗಳಿಸಿದ ರೈತ ಕುಟುಂಬ!!

ಕೋಲಾರ: ದೇಶಾದ್ಯಂತ ಟೊಮೇಟೊ ಬೆಲೆ ಗಗನಕ್ಕೇರುತ್ತಿರುವ ನಡುವೆಯೇ ರಾಜ್ಯದ ಕೋಲಾರ ಜಿಲ್ಲೆಯ ರೈತರ ಕುಟುಂಬವೊಂದು ಟೊಮೇಟೋ ಬೆಳೆದು ಜಾಕ್ ಪಾಟ್ ಹೊಡೆದಿದೆ. ಈ ಕುಟುಂಬವು 2,000 ಬಾಕ್ಸ್ ಟೊಮೇಟೋಗಳನ್ನು 38 ಲಕ್ಷ ರೂ ಗಳಿಗೆ ಮಾರಾಟ ಮಾಡಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಹೇಳಿದೆ.

ವರದಿಯ ಪ್ರಕಾರ, ಕೋಲಾರ ಜಿಲ್ಲೆಯ ಬೇತಮಂಗಲ ಗ್ರಾಮದ ಪ್ರಭಾಕರ ಗುಪ್ತಾ ಮತ್ತು ಅವರ ಸಹೋದರರು ತಮ್ಮ 40 ಎಕರೆ ಜಮೀನಿನಲ್ಲಿ ಟೊಮೇಟೋ ಬೆಳೆದಿದ್ದಾರೆ. ಪ್ರತಿ ಕೆಜಿ ಟೊಮೇಟೊ ಬಾಕ್ಸ್ ಅನ್ನು 1,900 ರೂಗೆ ಮಾರಾಟ ಮಾಡುವ ಮೂಲಕ 2,000 ಬಾಕ್ಸ್‌ಗಳನ್ನು 38 ಲಕ್ಷ ರೂಗಳಿಗೆ ಮಾರಾಟ ಮಾಡಿದ್ದಾರೆ. ಈ ಹಂಗಾಮಿನಲ್ಲಿ ಟೊಮೇಟೋ ಬೆಳೆ ಕೆಟ್ಟು ತೀವ್ರ ನಷ್ಟ ಅನುಭವಿಸಿದ ರೈತರೂ ಕೂಡಾ ಕೋಲಾರದಲ್ಲಿ ಇದ್ದಾರೆ ಎಂದು ವರದಿಯಾಗಿದೆ.

ಮಾರುಕಟ್ಟೆಯಲ್ಲಿ ಒಂದು ಕೆಜಿ ಟೊಮೇಟೋ 100 ರಿಂದ 120ರೂ ಗಳಿಗೆ ಮಾರಾಟವಾಗುತ್ತಿದ್ದು, ಕೆಲವೆಡೆ ಗದ್ದೆಗಳಿಂದ ಟೊಮೇಟೋ ಕಳವಾಗುತ್ತಿರುವ ಘಟನೆಗಳೂ ವರದಿಯಾಗಿವೆ.