ವಂಡ್ಸೆ: ಪೇಟೆಯ ಅನತಿ ದೂರದಲ್ಲಿರುವ ಲಕ್ಷ್ಮಣ ನಾಯ್ಕ್ ಎಂಬುವವರ ಮನೆಯ ಹತ್ತಿರವಿರುವ 30 ವರ್ಷದ ಹಿಂದಿನ ಸೇತುವೆಯ ಎರಡು ಕಬ್ಬಿಣದ ಸರಳು ಪಟ್ಟಿ ಕಿತ್ತು ಹೋಗಿದ್ದರೂ ಸಂಬಂಧಪಟ್ಟವರು ಯಾವುದೇ ರೀತಿಯ ಕ್ರಮ ಕೈಗೊಂಡಿರುವುದಿಲ್ಲ. ಇದು ವಂಡ್ಸೆ ಪಂಚಾಯತ್ ವ್ಯಾಪ್ತಿಗೆ ಸಂಬಂಧಿಸಿದ ಸೇತುವೆ ಆಗಿದ್ದು, ಮತದಾನದ ಸಮಯದಲ್ಲಿ ಇದೇ ಸೇತುವೆ ಮೂಲಕ ತೆರಳಿ ಮತದಾನ ನಡೆಸುತ್ತಾರೆ.
ದಿನನಿತ್ಯ ಈ ಸೇತುವೆಯ ಮೂಲಕ ಸಾರ್ವಜನಿಕರು ತಮ್ಮ ದೈನಂದಿನ ಕೆಲಸಗಳಿಗಾಗಿ ತೆರಳುತ್ತಾರೆ. ಶಾಲಾ ಮಕ್ಕಳು ಕೂಡಾ ಇದೇ ಸೇತುವೆಯನ್ನಾಶ್ರಯಿಸಿ ಶಾಲೆಗೆ ತೆರಳುತ್ತಾರೆ. ಸೇತುವೆಯ ಕಬ್ಬಿಣಕ್ಕೆ ತುಕ್ಕು ಹಿಡಿದಿದ್ದು ಒಂದು ಬದಿ ಕಿತ್ತುಹೋಗಿರುತ್ತದೆ. ಇದು ಅಪಾಯಕ್ಕೆ ಆಹ್ವಾನವೀಯುವಂತಿದೆ. ಮಳೆಗಾಲದ ಸಮಯದಲ್ಲಿ ಪಾದಾಚಾರಿಗಳೇನಾದರೂ ಕಾಲು ಜಾರಿದರೆ ಆಧರಿಸಿಕೊಳ್ಳಲು ಯಾವುದೇ ರೀತಿಯ ಆಧಾರವೂ ಇರುವುದಿಲ್ಲ. ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪರಿಣಾಮ ಕಂಡುಬಂದಿಲ್ಲ.
ಈ ಹಿಂದೆ ವಂಡ್ಸೆ ಗ್ರಾಮ ಪಂಚಾಯತ್ ಗಾಂಧಿ ಗ್ರಾಮ ಪುರಸ್ಕಾರ ಪಡೆದುಕೊಂಡಿದೆ. ಇಲ್ಲಿನ ಎಸ್.ಎಲ್.ಆರ್.ಎಂ ಘಟಕ ದೇಶದ ಗಮನ ಸೆಳೆದಿದೆ. ಘಟಕದ ಅಚ್ಚುಕಟ್ಟು ನೋಡುವುದಕ್ಕಾಗಿಯೇ ಬೇರೆ ಬೇರೆ ಗ್ರಾಮಗಳಿಂದ ಇಲ್ಲಿಗೆ ಭೇಟಿ ನೀಡಿರುತ್ತಾರೆ. ನೆರೆ ಬಂದಾಗ ಇಲ್ಲಿಗೆ ಬರುವುದೇ ಕಷ್ಟವಾಗಿದೆ.
ಜನವರಿ ತಿಂಗಳಲ್ಲಿ ನೀರು ಶೇಖರಣೆಗಾಗಿ ಅಣೆಕಟ್ಟಿಗೆ ಹಲಗೆ ಹಾಕಿ ನೀರು ಶೇಖರಣೆ ಮಾಡುತ್ತಾರೆ. ಮಳೆಗಾಲ ಸಮಯದಲ್ಲಿ ಹಲಗೆಯನ್ನು ತೆಗೆದು ಜನರು ನಡೆದಾಡುವ ದಾರಿಯಲ್ಲಿ ಹಾಕಿ ಸಮಸ್ಯೆ ಸೃಷ್ಟಿಸುತ್ತಾರೆ. ಸುಮಾರು ಎಂಟರಿಂದ ಹತ್ತು ಕುಟುಂಬಗಳು ವಾಸಿಸುವ ಈ ಪರಿಸರದ ಜನರು ಸಂಕಷ್ಟ ಅನುಭವಿಸುತ್ತಾರೆ. ಇನ್ನಾದರೂ ಸಂಬಂಧಪಟ್ಟ ಇಲಾಖೆಗಳು ಹಾಗೂ ಇಲ್ಲಿನ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ದುರಂತ ಸಂಭವಿಸುವ ಮುನ್ನವೇ ಕಾರ್ಯಪ್ರವೃತ್ತರಾಗಿ ಕರ್ತವ್ಯ ಪ್ರಜ್ಞೆ ಮೆರೆಯಬೇಕು ಎಂದು ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ ಕಾರ್ಯದರ್ಶಿ ರಕ್ಷಿತ ಕುಮಾರ ವಂಡ್ಸೆ ಆಗ್ರಹಿಸಿದ್ದಾರೆ.