‘ಕಿಟ್ ಕ್ಯಾಟ್’ ರ್ಯಾಪರ್ ನಲ್ಲಿ ಮರವಂತೆ ಮಿಂಚಿಂಗ್: ನಮ್ಮ ಕರಾವಳಿಯ ಕಡಲ ಕಿನಾರೆಗೆ ಸಿಕ್ತು ಜಾಗತಿಕ ಮನ್ನಣೆ

ಉಡುಪಿ:ನಮ್ಮ ರಾಜ್ಯದ ಚಂದದ  ಕಡಲ ಕಿನಾರೆಗಳ ಪೈಕಿ ಮರವಂತೆಗೆ ಅದರದ್ದೇ ಆದ ಸೌಂದರ್ಯವಿದೆ. ಪ್ರವಾಸಿಗರ ಮೈ ಮನಗಳಲ್ಲಿ ಮರವಂತೆ ಯಾವಾಗಲೂ ಮೈ ನವಿರೇಳಿಸುವಂತಹ ಅನುಭವವನ್ನೇ ಕೊಡುತ್ತಿರೋದು ನಿಮಗೆಲ್ಲಾ ಗೊತ್ತು. ಈಗ ಇದೇ ಮರವಂತೆಯ ಕಡಲು  ಕಿಟ್ ಕ್ಯಾಟ್ ಚಾಕಲೇಟ್ ನ ರ್ಯಾಪರ್ ನಲ್ಲಿ ಮಿಂಚಿ ಜಗತ್ತಿನಲ್ಲೆಲ್ಲಾ ಓಡಾಡುತ್ತಿದೆ. ಹೌದು ಮರವಂತೆ ಬೀಚ್ ಚಿತ್ರವನ್ನು ಜಾಗತಿಕ ಮಟ್ಟದ ಪ್ರತಿಷ್ಠಿತ ಆಹಾರ ಪದಾರ್ಥಗಳ ಉತ್ಪಾದನೆ, ಮಾರಾಟದ ನೆಸ್ಲೆ ಸಂಸ್ಥೆ ‘ಕಿಟ್‌ಕ್ಯಾಟ್’ ಚಾಕಲೆಟ್  ತನ್ನ ರ್ಯಾಪರ್ ನಲ್ಲಿ ಬಳಸಿದೆ. ಆ ಮೂಲಕ ಮರವಂತೆ ಬೀಚ್ ಅನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ.
ಅಂದಹಾಗೆ ಕಿಟ್ ಕ್ಯಾಟ್ ಸಂಸ್ಥೆ ಏಪ್ರಿಲ್ ನಿಂದಲೇ‌ ಮರವಂತೆಯ ಚಿತ್ರವನ್ನು ತನ್ನ ಉತ್ಪನ್ನದಲ್ಲಿ ಬಳಸಿಕೊಂಡಿದೆ.
ಸಾಮಾಜಿಕ ತಾಣದಲ್ಲಿ ವೈರಲ್:
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕರಾವಳಿಯ ನೆಟ್ಟಿಗರು “ನನ್ನ ಊರು ನನ್ನ ಹೆಮ್ಮೆ” ಅಂತ ಮರವಂತೆಯನ್ನು ಕೊಂಡಾಡಿದ್ದಾರೆ.
ಮೂರು ವರ್ಷ ಹಿಂದೆ ನೆಸ್ಲೆ ಸಂಸ್ಥೆ ‘ಮೈ ಟ್ರಾವೆಲ್ ಬ್ರೇಕ್’ ಎಂಬ ಪರಿಕಲ್ಪನೆ ಆರಂಭಿಸಿತ್ತು. ಕಡಿಮೆ ಖರ್ಚಿನಲ್ಲಿ ಪ್ರವಾಸದ ಖುಷಿ ಅನುಭವಿಸಬಹುದಾದ ಜಗತ್ತಿನ ವಿಶಿಷ್ಟ ಪ್ರವಾಸಿತಾಣಗಳನ್ನು ಪರಿಚಯಿಸಿ, ಗೌರವಿಸುವ ಅಭಿಯಾನವಿದು. ಈ ಮೂಲಕ ಪ್ರವಾಸಿ ಸ್ಥಳದ ಮಾಹಿತಿ ನೀಡಿ ಪ್ರಾಯೋಗಿಕ ಪ್ರಯಾಣದ ಸಲಹೆಯನ್ನೂ ನೀಡುತ್ತದೆ.
ಮೂರನೇ ಆವೃತ್ತಿಲಿ ಮರವಂತೆ:
‘ಸಂಸ್ಥೆಯ “ಮೈ ಟ್ರಾವೆಲ್ ಬ್ರೇಕ್‌” ಅಭಿಯಾನದ ಮೂರನೇ ಆವೃತ್ತಿಯಲ್ಲಿ ಮರವಂತೆ ಬೀಚ್ ಸೇರಿದಂತೆ ನಮ್ಮ ದೇಶದ 12 ವಿಭಿನ್ನ ಪ್ರವಾಸಿ ಸ್ಥಳಗಳಿಗೆ ಜಾಗತಿಕ ಮನ್ನಣೆ ನೀಡಲಾಗಿದೆ. ಸಂಸ್ಥೆಯ ಟ್ವಿಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಖಾತೆಗಳಲ್ಲಿ ‘ಮೈ ಟ್ರಾವೆಲ್ ಬ್ರೇಕ್’ ಎಂದು ಪೋಸ್ಟ್ ಮಾಡುತ್ತದೆ. ಮರವಂತೆ ಬೀಚ್‌ನ ಭೌಗೋಳಿಕ ವಿಶೇಷತೆ ನಮೂದಿಸಿ ‘ಎ ಜರ್ನಿ ನೋ ಡೆಸ್ಟಿನೇಶನ್ ಯುವರ್ಸ್ ಮೈಂಡ್’ ಎಂಬ ಟ್ಯಾಗ್‌ಲೈನ್ ಬರೆದು ಪೋಸ್ಟ್ ಮಾಡಲಾಗಿದೆ. ಏನೇ ಆಗಲಿ ನಮ್ಮ‌ ಕರಾವಳಿಯ ವಿಶಿಷ್ಟ ಹಾಗೂ ಮನಮೋಹಕ ಮರವಂತೆ ಬೀಚ್ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರೋದು ಕರಾವಳಿಗೆ ದೊಡ್ಡ ಹೆಮ್ಮೆ.