208.46 ಮೀಟರ್ ಏರಿದ ಯಮುನಾ ನೀರಿನ ಮಟ್ಟ: ಮನೆಗಳಿಗೆ ನುಗ್ಗಿದ ನೀರು; ಜನಜೀವನ ಅಸ್ತವ್ಯಸ್ತ

ಹೊಸದಿಲ್ಲಿ: ದಿಲ್ಲಿಯ ಯಮುನಾ ನದಿಯಲ್ಲಿ ರಾತ್ರಿಯ ವೇಳೆ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗಿದ್ದು, ಮನೆಗಳಿಗೆ ನೀರು ನುಗ್ಗಿದ್ದು, ಸಾರ್ವಜನಿಕ ಸಾರಿಗೆಯ ಮೇಲೆ ಪರಿಣಾಮ ಬೀರಿದ್ದು, ತುರ್ತು ಕ್ರಮಗಳನ್ನು ಕೈಗೊಳ್ಳಲಾಗಿದೆ.

ಹರಿಯಾಣದ ಹಥ್ನಿಕುಂಡ್ ಬ್ಯಾರೇಜ್ ನಿಂದ ನದಿಗೆ ನೀರು ಬಿಡುತ್ತಿರುವುದರಿಂದ ಇಂದು ಬೆಳಗ್ಗೆ 11 ಗಂಟೆಗೆ ಯಮುನಾದಲ್ಲಿ ನೀರಿನ ಮಟ್ಟ 208.46 ಮೀಟರ್ ಆಗಿತ್ತು. ಪ್ರಸ್ತುತ ನೀರಿನ ಮಟ್ಟ ಅಪಾಯದ ಮಟ್ಟಕ್ಕಿಂತ ಮೂರು ಮೀಟರ್‌ಗಳಷ್ಟು ಹೆಚ್ಚಿದೆ.

ನೀರು ಬಿಡುವುದನ್ನು ನಿಲ್ಲಿಸುವಂತೆ ಕೇಂದ್ರವನ್ನು ಅರವಿಂದ್ ಕೇಜ್ರಿವಾಲ್ ಸರ್ಕಾರ ಒತ್ತಾಯಿಸಿದೆ. ಬ್ಯಾರೇಜ್‌ನಿಂದ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡುವುದು ಅನಿವಾರ್ಯ ಎಂದು ಕೇಂದ್ರ ಹೇಳಿದೆ. ದಿನಾಂತ್ಯಕ್ಕೆ ನೀರು ಬಿಡುವ ಪ್ರಮಾಣ ಕಡಿಮೆಯಾಗುವ ನಿರೀಕ್ಷೆ ಇದೆ.

ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಹರಿಯಾಣ ಬ್ಯಾರೇಜ್ ತುಂಬಿದೆ. ಬ್ಯಾರೇಜ್ ನಿಂದ ಹೆಚ್ಚುವರಿ ನೀರನ್ನು ನದಿಗೆ ಬಿಡಲಾಗುತ್ತಿದೆ. ರಾಷ್ಟ್ರ ರಾಜಧಾನಿಯಲ್ಲಿ, ನದಿ ನೀರು ಹತ್ತಿರದ ಪ್ರದೇಶಗಳಿಗೆ ಪ್ರವೇಶಿಸಿದ್ದರಿಂದ ಐಷಾರಾಮಿ ಸಿವಿಲ್ ಲೈನ್ಸ್ ಪ್ರದೇಶವು ಜಲಾವೃತವಾಗಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸ ಮತ್ತು ದೆಹಲಿ ವಿಧಾನಸಭೆಯು ನೀರಿನಿಂದ ಕೇವಲ 350 ಮೀಟರ್‌ಗಳಷ್ಟು ದೂರ ಇದೆ.

ರಸ್ತೆಗಳಲ್ಲಿ ನೀರು ತುಂಬಿಕೊಂಡಿರುವುದರಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.