ಬೆಂಗಳೂರು: ಕಾಂಗ್ರೆಸ್ ನ ಉಚಿತ ಕ್ಗ್ಯಾರಂಟಿಗಳಲ್ಲಿ ಒಂದಾದ ಗೃಹ ಜ್ಯೋತಿ 200 ಯುನಿಟ್ ಉಚಿತ ವಿದ್ಯುತ್ ಯೋಜನೆಗೆ ಅರ್ಜಿ ಸಲ್ಲಿಸಲು ಜುಲೈ 27 ಕೊನೆ ದಿನವಾಗಿದೆ. ಇಂಧನ ಸಚಿವ ಕೆ. ಜೆ. ಜಾರ್ಜ್ ವಿಧಾನಸಭೆ ಕಲಾಪದಲ್ಲಿ ಬುಧವಾರ ಈ ಕುರಿತು ಮಾಹಿತಿ ನೀಡಿದ್ದಾರೆ. ‘ಗೃಹಜ್ಯೋತಿ’ ಯೋಜನೆ ಕುರಿತಂತೆ ನಡೆದ ಚರ್ಚೆಯ ವೇಳೆ ಸಚಿವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಈ ಮೊದಲು ಕಡೆಯ ದಿನಾಂಕವನ್ನು ನಿಗದಿಪಡಿಸಿರಲಿಲ್ಲ. ಈಗ, ಕಡೆಯ ದಿನಾಂಕವನ್ನು ನಿಗದಿಪಡಿಸಲು ನಿರ್ಧರಿಸಿದ್ದೇವೆ. ಅದರಂತೆ, ಜುಲೈ 27ರಂದು ಅರ್ಜಿ ಸಲ್ಲಿಕೆಗೆ ಕಡೆಯ ದಿನವಾಗಿರುತ್ತದೆ ಎಂದು ಸಚಿವರು ಹೇಳಿದ್ದಾರೆ.
ಸರ್ಕಾರ ನೀಡಿದ ಗಡುವಿನೊಳಗೆ ಅರ್ಜಿ ಸಲ್ಲಿಕೆ ಮಾಡದಿದ್ದರೆ ಜನರು ಯಾವುದೇ ಆತಂಕ ಪಡಬೇಕಿಲ್ಲ. ಯೋಜನೆ ವ್ಯಾಪ್ತಿಯಿಂದ ಹೊರಗುಳಿದವರನ್ನು ಯೋಜನೆಯೊಳಕ್ಕೆ ತರಲು ಗೃಹಜ್ಯೋತಿ ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕದ ನಂತರ ಎರಡು ತಿಂಗಳವರೆಗೆ ವಿದ್ಯುತ್ ಅದಾಲತ್ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಗೃಹಜ್ಯೋತಿ ಯೋಜನೆ ಫಲಾನುಭವಿಯಾಗಲು ಜೂನ್ 18 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಈಗಾಗಲೇ 1 ಕೋಟಿಗೂ ಅಧಿಕ ಜನರು ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ. ಈ ಯೋಜನೆ ಆಗಸ್ಟ್ನಲ್ಲಿ ಜಾರಿಗೆ ಬರಲಿದ್ದು, ಯೋಜನೆ ಫಲಾನುಭವಿಯಾಗಲು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.