ಕೆಂಟ್: ಯುಕೆಯ ಕೆಂಟ್‌ನಲ್ಲಿ ಪುರಾತತ್ತ್ವ ಶಾಸ್ತ್ರಜ್ಞರು ಗಮನಾರ್ಹವಾದ ಆವಿಷ್ಕಾರವನ್ನು ಮಾಡಿದ್ದಾರೆ. ಮಾನವನ ಇತಿಹಾಸಕ್ಕೆ ಸಂಬಂಧಪಟ್ಟ ಪ್ರಾಗೈತಿಹಾಸಿಕ ಕೈ ಕೊಡಲಿಗಳನ್ನು ಪತ್ತೆ ಮಾಡಲಾಗಿದ್ದು, ಇವುಗಳ ಗಾತ್ರ ಪುರಾತತ್ವ ಶಾಸ್ತ್ರಜ್ಞರನ್ನು ಬೆಚ್ಚಿ ಬೀಳಿಸಿವೆ.
ಯುಸಿಎಲ್ ಆರ್ಕಿಯಾಲಜಿ ಸೌತ್-ಈಸ್ಟ್‌ನ ಸಂಶೋಧಕರು ನಡೆಸಿದ ಉತ್ಖನದಲ್ಲಿ 800 ಕ್ಕೂ ಹೆಚ್ಚು ಕಲ್ಲಿನ ಉಪಕರಣಗಳು ದೊರೆತಿವೆ. ಈ ಕಲಾಕೃತಿಗಳು 300,000 ವರ್ಷಗಳಷ್ಟು ಹಳೆಯದು ಎಂದು ನಂಬಲಾಗಿದೆ. ಬ್ರಿಟನ್ ನ ಮೆಡ್ವೇ ಕಣಿವೆಯ ಮೇಲಿರುವ ಬೆಟ್ಟದ ಮೇಲೆ ಹಿಮಯುಗದ ಕೆಸರುಗಳಲ್ಲಿ ಸುರಕ್ಷಿತವಾಗಿ ಹುದುಗಿದ್ದ ಈ ಕಲ್ಲಿನ ಉಪಕರಣಗಳು ಸಂಶೋಧಕರ ಕಣ್ಣಿಗೆ ಬಿದ್ದಿದೆ.
ಗಮನಾರ್ಹವಾದ ಆವಿಷ್ಕಾರಗಳಲ್ಲಿ ಎರಡು ದೊಡ್ಡ ಬೀಸುಗತ್ತಿಗಳು ದೊರೆತಿವೆ ಇವನ್ನು ದೈತ್ಯ ಕೈ ಕೊಡಲಿ ಎಂದು ವಿವರಿಸಲಾಗಿದ್ದು ಇದು ಉದ್ದವಾದ, ನುಣ್ಣಗೆ ರಚಿಸಲಾದ ಮೊನಚಾದ ತುದಿ ಮತ್ತು ದಪ್ಪವಾದ ಬುಡಹೊಂದಿದ್ದು ವಿಶಿಷ್ಟವಾದ ಆಕಾರವನ್ನು ಹೊಂದಿದೆ. ಸಾಮಾನ್ಯವಾಗಿ ಕೈಯಲ್ಲಿ ಹಿಡಿಯಲು ಸಾಧ್ಯವಾಗುವಂತಹ ಈ ಕೈಕೊಡಲಿಗಳನ್ನು ಪ್ರಾಣಿಗಳನ್ನು ಕಡಿಯಲು ಮತ್ತು ಮಾಂಸವನ್ನು ಕತ್ತರಿಸಲು ಬಳಸಲಾಗುತ್ತಿತ್ತು. ಈ ಕೈಕೊಡಲಿಗಳ ಬೃಹತ್ ಗಾತ್ರವು ಸಂಶೋಧರನ್ನು ದಂಗುಬಡಿಸಿದೆ. 29.5 ಸೆಂಟಿಮೀಟರ್ ಅಳತೆಯ ಕೈಕೊಡಲಿಗಳನ್ನು ಅಂದಿನ ಜನರು ಪ್ರಾಯೋಗಿಕವಾಗಿ ಹೇಗೆ ಬಳಸುತ್ತಿದ್ದರು ಎನ್ನುವುದು ಸವಾಲನ್ನು ಒಡ್ಡಿದೆ.
ಗಾರ್ಡಿಯನ್ ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿದ ಯುಸಿಎಲ್ ಇನ್‌ಸ್ಟಿಟ್ಯೂಟ್ ಆಫ್ ಆರ್ಕಿಯಾಲಜಿಯ ಹಿರಿಯ ಭೂ-ಪುರಾತತ್ತ್ವಶಾಸ್ತ್ರಜ್ಞ ಲೆಟ್ಟಿ ಇಂಗ್ರೇ, ಈ ಉಪಕರಣಗಳ ಅಗಾಧ ಉದ್ದ ಮತ್ತು ಅಪೂರ್ವತೆಯನ್ನು ಎತ್ತಿ ತೋರಿಸಿ ಇವನ್ನು “ದೈತ್ಯ” ಉಪಕರಣ ಎಂದು ಉಲ್ಲೇಖಿಸಿದ್ದಾರೆ. ಅವುಗಳ ನಿಖರವಾದ ಉದ್ದೇಶ ಮತ್ತು ಅವುಗಳನ್ನು ರೂಪಿಸಲು ಜವಾಬ್ದಾರರಾಗಿರುವ ಆರಂಭಿಕ ಮಾನವ ಪ್ರಭೇದಗಳು ಅನಿಶ್ಚಿತವಾಗಿ ಉಳಿದಿವೆಯಾದರೂ, ಈ ರಹಸ್ಯಗಳ ಗೋಜುಬಿಡಿಸಲು ಈ ಭೂಪ್ರದೇಶವು ಒಂದು ಅನನ್ಯ ಅವಕಾಶವನ್ನು ಒದಗಿಸುತ್ತದೆ ಎಂದು ಅವರು ಹೇಳಿದ್ದಾರೆ.
ಸ್ಥಳವು ನಿಯಾಂಡರ್ತಲ್ ಜನರು ಮತ್ತು ಅವರ ಸಂಸ್ಕೃತಿಗಳು ಹೊರಹೊಮ್ಮುತ್ತಿದ್ದ ಕಾಲಾವಧಿಯದ್ದು ಎಂದು ನಂಬಲಾಗಿದೆ. ಆ ಕಾಲದಲ್ಲಿಇತರ ಮಾನವ ಜಾತಿಗಳೊಂದಿಗೆ ನಿಯಾಂಡರ್ತಲ್ ಮಾನವರು ಸಹಬಾಳ್ವೆ ನಡೆಸುತ್ತಿದ್ದರು ಎಂದು ಅಂದಾಜಿಸಲಾಗಿದೆ. ಈ ಸಮಯದಲ್ಲಿ ಮೆಡ್ವೇ ಕಣಿವೆಯು ಬೆಟ್ಟಗಳು ಮತ್ತು ನದಿ ಕಣಿವೆಗಳ ಕಾಡು ಭೂಪ್ರದೇಶವಾಗಿದ್ದು, ಕೆಂಪು ಜಿಂಕೆಗಳು, ಕುದುರೆಗಳು, ನೇರ ದಂತದ ಆನೆಗಳು ಮತ್ತು ಸಿಂಹಗಳು ಸೇರಿದಂತೆ ವಿವಿಧ ಪ್ರಾಣಿಗಳು ವಾಸಿಸಿದ್ದವು ಎನ್ನಲಾಗಿದೆ.
ಇತಿಹಾಸಪೂರ್ವ ಆವಿಷ್ಕಾರಗಳ ಹೊರತಾಗಿ, ತಂಡವು ಹಿಮಯುಗದ ಚಟುವಟಿಕೆಗಳ ಸಾವಿರಾರು ವರ್ಷಗಳ ನಂತರದ ರೋಮನ್ ಸ್ಮಶಾನವನ್ನು ಸಹ ಉತ್ಖನನ ಮಾಡಿದೆ. ಮೃತ ವ್ಯಕ್ತಿಗಳೊಂದಿಗೆ ಸಮಾಧಿ ಮಾಡಿದ ಸರಕುಗಳು ಮತ್ತು ವೈಯಕ್ತಿಕ ವಸ್ತುಗಳ ಉಪಸ್ಥಿತಿ, ಸ್ಥಳೀಯ ಕುಂಬಾರಿಕೆ ಮತ್ತು ಪ್ರಾಣಿಗಳ ಮೂಳೆಗಳು, ಸಮಾಧಿ ನಡೆಸುತ್ತಿದ್ದ ಸಮಯಕ್ಕೆ ಸಂಬಂಧಿಸಿದ ಹಬ್ಬದ ಆಚರಣೆಗಳನ್ನು ಸೂಚಿಸುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಈ ಉತ್ಖನನಗಳು ಸಂಪೂರ್ಣ ಹಿಮಯುಗದ ಭೂದೃಶ್ಯದ ಅಭಿವೃದ್ಧಿಯನ್ನು ಅಧ್ಯಯನ ಮಾಡಲು ಅಮೂಲ್ಯವಾದ ಅವಕಾಶವನ್ನು ಒದಗಿಸುತ್ತವೆ ಮತ್ತು ಹಿಮಯುಗ ಪರಿಸರವು ಒಡ್ಡಿದ ಸವಾಲುಗಳಿಗೆ ಪ್ರಾಚೀನ ಜನರು ಹೇಗೆ ಅಳವಡಿಸಿಕೊಂಡರು ಎನ್ನುವ ಮೇಲೆ ಬೆಳಕು ಚೆಲ್ಲುತ್ತವೆ ಎನ್ನುವುದು ಸಂಶೋಧಕರ ಅಂಬೋಣ. ಸಂಶೋಧನೆಗಳು ಬ್ರಿಟನ್‌ನಲ್ಲಿನ ಆರಂಭಿಕ ಮಾನವ ಇತಿಹಾಸದ ಬಗ್ಗೆ ನಮ್ಮ ತಿಳುವಳಿಕೆಗೆ ಕೊಡುಗೆ ನೀಡುತ್ತವೆ ಮತ್ತು ಇಂಟರ್ನೆಟ್ ಆರ್ಕಿಯಾಲಜಿ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.