ಧಾರಾಕಾರ ಮಳೆಗೆ ತತ್ತರಿಸಿದ ಉತ್ತರ: ಹಿಮಾಚಲದಲ್ಲಿ ಕೊಚ್ಚಿ ಹೋದ ಕಾರುಗಳು; ದೆಹಲಿಯಲ್ಲಿಯೂ ವರುಣನ ಅಬ್ಬರ

ನವದೆಹಲಿ: ಭಾರೀ ಮಳೆಯಿಂದಾಗಿ ಉತ್ತರ ಭಾರತದ ಹಲವಾರು ಭಾಗಗಳಲ್ಲಿ ಭೂಕುಸಿತಗಳು ಮತ್ತು ಹಠಾತ್ ಪ್ರವಾಹಗಳು ಉಂಟಾಗಿದ್ದು, ಕಳೆದ ಮೂರು ದಿನಗಳಲ್ಲಿ ಕನಿಷ್ಠ 19 ಮಂದಿ ಸಾವನ್ನಪ್ಪಿದ್ದಾರೆ. ಹೆಚ್ಚು ಹಾನಿಗೊಳಗಾದ ಹಿಮಾಚಲ ಪ್ರದೇಶದಲ್ಲಿ, ರೆಡ್ ಅಲರ್ಟ್ ಘೋಷಿಸಲಾಗಿದೆ ಮತ್ತು ಎಲ್ಲಾ ಶಾಲೆಗಳು ಮತ್ತು ಕಾಲೇಜುಗಳು ಎರಡು ದಿನಗಳ ಕಾಲ ಮುಚ್ಚಲ್ಪಟ್ಟಿವೆ. ಎಲ್ಲಾ ಪ್ರಮುಖ ನದಿಗಳು ಉಕ್ಕಿ ಹರಿಯುತ್ತಿದ್ದು, ಜನಜೀವನ ಸ್ಥಗಿತಗೊಂಡಿದೆ.

ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್, ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ರಾಜಸ್ಥಾನ, ದೆಹಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಪ್ರವಾಹಕ್ಕೆ ಒಳಗಾದ ರಸ್ತೆಗಳಲ್ಲಿ ಕಾಗದದ ದೋಣಿಗಳಂತೆ ತೇಲುತ್ತಿರುವ ಕಾರುಗಳು, ವಸತಿ ಪ್ರದೇಶಗಳಿಗೆ ನುಗ್ಗುತ್ತಿರುವ ಕೆಸರಿನ ನೀರು, ಅಬ್ಬರಿಸಿ ಹರಿಯುತ್ತಿರುವ ನದಿಗಳಿಂದಾಗಿ ಕೊಚ್ಚಿ ಹೂಗುತ್ತಿರುವ ಸೇತುವೆ, ಮುಳುಗುತ್ತಿರುವ ದೇವಾಲಯಗಳು. ಇವೆಲ್ಲಾ ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ದೆಹಲಿಯಲ್ಲಿ ಕಂಡು ಬರುತ್ತಿರುವ ಭಯಾನಯ ದೃಶ್ಯಗಳು.

ಮಳೆಯಿಂದ ಪ್ರಭಾವಕ್ಕೊಳಗಾದ ಪ್ರದೇಶಗಳಲ್ಲಿ ಎನ್.ಡಿ.ಆರ್.ಎಫ್ ಘಟಕಗಳು ಸಕ್ರಿಯವಾಗಿದ್ದರೂ, ದಿನವಿಡೀ ಭಾರೀ ಮಳೆ ಮುಂದುವರಿದಿದ್ದರಿಂದ ಪರಿಹಾರ, ರಕ್ಷಣಾ ಮತ್ತು ಮರುಸ್ಥಾಪನೆ ಕಾರ್ಯಾಚರಣೆಗೆ ತೀವ್ರ ಹೊಡೆತ ಬಿದ್ದಿದೆ.