ಉಡುಪಿ, ಜೂನ್ 29: ಕೃಷಿ ಮತ್ತು ತೋಟಗಾರಿಕಾ ವಿವಿ ಶಿವಮೊಗ್ಗ, ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ ವತಿಯಿಂದ ಗ್ರಾಮೀಣ ಯುವಕರಿಗೆ ಕೌಶಲ್ಯ ತರಬೇತಿ ಕಾರ್ಯಕ್ರಮದಡಿಯಲ್ಲಿ , ಅಲಂಕಾರಿಕಾ ಮೀನು ಉತ್ಪಾದನಾ ತಂತ್ರಜ್ಞಾನಗಳ ಬಗ್ಗೆ 6 ದಿನಗಳ ಮಾಹಿತಿ ಶಿಬಿರ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ಮೀನುಗಾರಿಕಾ ವಿವಿಯ ಪ್ರಾಧ್ಯಾಪಕ ಡಾ.ಎ.ಟಿ.ರಾಮಚಂದ್ರ ನಾಯ್ಕ್ , ಅಲಂಕಾರಿಕಾ ಮೀನುಗಳ ಸಾಕಾಣೆ (ಅಕ್ವೇರಿಯಂ ) ಉದ್ಯೋಗಕ್ಕೆ ಹೆಚ್ಚಿನ ಅವಕಾಶವಿದೆ. ದೇಶದಲ್ಲಿ ಸುಮಾರು 250 ವೆರೈಟಿಯ ಮೀನುಗಳನ್ನು ಸಾಕಾಣಿಕೆ ಮಾಡಲಾಗುತ್ತಿದ್ದು, ಇವುಗಳನ್ನು ಮಾರಾಟ ಮಾಡುವ ಮೂಲಕ ಲಾಭದಾಯಕ ಉದ್ಯಮವನ್ನಾಗಿಸಲು ಯುವಕರು ಮುಂದಾಗಬೇಕು ಎಂದು ಕರೆ ನೀಡಿದರು.
ಬ್ರಹ್ಮಾವರ ಕೃಷಿ ಡಿಪ್ಲೋಮೋ ಕಾಲೇಜಿನ ಪ್ರಾಂಶುಪಾಲ ಡಾ.ಸುಧೀರ್ ಕಾಮತ್ ಮಾತನಾಡಿ, ಮನೆಗಳಲ್ಲಿ ಬಣ್ಣದ ಮೀನುಗಳನ್ನು ಸಾಕಾಣಿಕೆ ಮನಸ್ಸಿಗೆ ಆಹ್ಲಾದ ನೀಡುವ ಹವ್ಯಾಸವಾಗಿದ್ದು, ಇದರಿಂದ ರಕ್ತದೊತ್ತಡ ನಿಯಂತ್ರಣ ಅಲ್ಲದೆ ಮಾನಸಿಕ ನೆಮ್ಮದಿಯೂ ದೊರಕುತ್ತದೆ. ಹೀಗಾಗಿ ಮಾರುಕಟ್ಟೆಯಲ್ಲಿ ಅಕ್ವೇರಿಯಂ ಉದ್ಯಮಕ್ಕೆ ಹೆಚ್ಚಿನ ಡಿಮಾಂಡ್ ಇದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಾವರ ಕೃಷಿ ಸಂಶೋಧನಾ ಕೇಂದ್ರದ ಕಾರ್ಯಕ್ರಮ ಸಂಯೋಜಕ ಡಾ.ಬಿ.ಧನಂಜಯ , ಮನಸ್ಸಿಗೆ ಮುದ ನೀಡುವ, ಮನೆಯ ಅಲಂಕಾರವನ್ನು ಹೆಚ್ಚಿಸುವ ಈ ಹವ್ಯಾಸ ದೇಶ ವಿದೇಶದಲ್ಲಿ ತನ್ನ ಕಾರ್ಯ ಕ್ಷೇತ್ರವನ್ನು ವಿಸ್ತರಿಸುತ್ತಿದೆ. ಹೀಗಾಗಿ ತರಬೇತಿ ಪಡೆದು ಯಶಸ್ವಿ ಉದ್ದಿಮೆದಾರರಾಗುವಂತೆ ಶಿಬಿರಾರ್ಥಿಗಳಿಗೆ ಅವರು ಹಾರೈಸಿದರು.
ಕಾರ್ಯಕ್ರಮದಲ್ಲಿ ಬ್ರಹ್ಮಾವರ ವಲಯ ಕೃಷಿ ತೋಟಗಾರಿಕಾ ಸಂಶೋಧನಾ ಕೇಂದ್ರದ ಸಹಾಯಕ ಪ್ರಾಧ್ಯಾಪಕ ರಾಜಣ್ಣ ಸಿ., ಸಹ ಪ್ರಾಧ್ಯಾಪಕ ಡಾ.ವಿನೋದ್ ಉಪಸ್ಥಿತರಿದ್ದರು.
ವಿಷಯ ತಜ್ಞ ಡಾ.ಚೈತನ್ಯ ಅವರು ಕಾರ್ಯಕ್ರಮ ನಿರೂಪಿಸಿದರು.