ಮಂಗಳೂರು, ಜೂ.28: ಗೋವುಗಳ ಕಳ್ಳತನ ಪ್ರಕರಣವನ್ನು ಪತ್ತೆ ಹಚ್ಚಲು ವಿಶೇಷ ತಂಡವನ್ನು ರಚನೆ ಮಾಡಲಾಗಿದೆ. ಮಂಗಳೂರಿನ ಕಮಿಷನರೇಟ್ ವ್ಯಾಪ್ತಿ ಜತೆಗೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಹಾಗೂ ಕೇರಳ ರಾಜ್ಯದಲ್ಲಿ ಕೆಲವೊಂದು ಗೋವು ಕಳವು ಆರೋಪಿಗಳು ವಾಸಿಸುತ್ತಿದ್ದಾರೆ. ಆ ಪ್ರದೇಶಗಳ ಮೇಲೆ ಹೆಚ್ಚಿನ ನಿಗಾ ವಹಿಸಿದ್ದು, ರಾತ್ರಿ ಬೀಟ್ಗಳನ್ನು ಬಿಗಿಗೊಳಿಸಿದ್ದೇವೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿದ್ದಾರೆ. ಮಂಗಳೂರಿನ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಪೊಲೀಸ್ ಫೋನ್ ಇನ್ ಕಾರ್ಯಕ್ರಮದ ಬಳಿಕ ಅವರು ಮಾತನಾಡಿದರು.
ಈಗಾಗಲೇ ಹಳೆಯ ಗೋವು ಕಳವು ಆರೋಪಿಗಳ ಪಟ್ಟಿ ಮಾಡಲಾಗಿದೆ. ರಾತ್ರಿ ಬೀಟ್ನ ಪೊಲೀಸರು ಅವರ ಮನೆಗೆ ತೆರಳಿ ಅವರು ಮನೆಯಲ್ಲಿದ್ದಾರೆಯೇ, ಅಥವಾ ಹೊರಗಡೆ ಹೋಗಿದ್ದಾರೆಯೇ, ಯಾವ ಕಾರಣಕ್ಕಾಗಿ ಹೊರ ಹೋಗಿದ್ದಾರೆ ಎಂಬುದನ್ನು ಪರಿಶೀಲನೆ ಮಾಡುತ್ತಾರೆ.
ಅಲ್ಲದೆ ಸಾರ್ವಜನಿಕರಿಗೆ ಗೋವು ಕಳವು, ಅಕ್ರಮ ಗೋವು ಸಾಗಣೆಯ ಮಾಹಿತಿಗಳು ಲಭ್ಯವಾದರೆ ಅವರೇ ಕಾನೂನನ್ನು ಕೈಗೆ ತೆಗೆದುಕೊಳ್ಳದೆ ಪೊಲೀಸರಿಗೆ ದೂರು ನೀಡಿದರೆ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಂದೀಪ್ ಪಾಟೀಲ್ ಹೇಳಿದರು.